

ಜಮ್ಮು-ಕಾಶ್ಮೀರ: ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ಕುಖ್ಯಾತ ಲಷ್ಕರ್-ಎ-ತೈಬಾ (LeT) ಉಗ್ರಗಾಮಿ ಸಂಘಟನೆಯ ಕಮಾಂಡರ್‌ನನ್ನು ಸದೆಬಡೆದಿದ್ದಾರೆ. ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ದುಧ್ಪತ್ರಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ (ಸೆ.29) ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಈ ಮೋಸ್ಟ್ ವಾಂಟೆಡ್ ಉಗ್ರ ಹತನಾಗಿದ್ದಾನೆ. ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಣಿವೆಯಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಉಗ್ರರ ಹುಟ್ಟಡಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ನಿಖರ ಗುಪ್ತಚರ ಮಾಹಿತಿ ಆಧಾರದ ಮೇಲೆ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ (CRPF) ಪಡೆಗಳು ಬುಡ್ಗಾಮ್‌ನ ಕೊರಾಗ್ ಮತ್ತು ಯೂಸ್‌ಮಾರ್ಗ್ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಕಾರ್ಯಾಚರಣೆಯ ವೇಳೆ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನಗಳು ಕಂಡುಬಂದ ಹಿನ್ನೆಲೆಯಲ್ಲಿ ಸೈನಿಕರು ತಡೆಯಲು ಮುಂದಾಗಿದ್ದಾರೆ.
ಆದರೆ, ಎಚ್ಚರಿಕೆ ನೀಡಿದರೂ ಲೆಕ್ಕಿಸದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಎಚ್ಚೆತ್ತ ಸೈನಿಕರು ತಕ್ಷಣವೇ ಪ್ರತಿದಾಳಿ ನಡೆಸಿದ್ದು, ಉಗ್ರನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸೇನೆಯು ಅಧಿಕೃತವಾಗಿ ಗುರುತು ಬಹಿರಂಗಪಡಿಸದಿದ್ದರೂ, ಹತನಾದ ಉಗ್ರನನ್ನು ಸುಲೈಮಾನ್ ಶಾ ಅಲಿಯಾಸ್ 'ಮೂಸಾ' (ನಿಜ ಹೆಸರು ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ) ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ.
ಈತನ ತಂದೆ ಪಾಕಿಸ್ತಾನಿ ಸೇನೆಯಲ್ಲಿದ್ದರೆಂದು ತಿಳಿದು ಬಂದಿದೆ. ಸ್ವತಃ ಮೂಸಾ ಕೂಡ ನೋಡಲು ಪಾಕ್ ಸೈನಿಕರಂತೆ ಕಾಣುತ್ತಾನೆ. ಹಾಗಾಗಿ ಈತನನ್ನು ಉಗ್ರರ ವಲಯದಲ್ಲಿ ಫೌಜಿ ಎಂದು ಕರೆಯಲಾಗುತ್ತಿತ್ತಂತೆ. ಸೆಪ್ಟೆಂಬರ್ 5 ರಂದು ಯೂಸ್‌ಮಾರ್ಗ್ ಬೆಟ್ಟಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂಸಾನ ಆಪ್ತ ಸಹಾಯಕ ಯಾಸಿರ್‌ನನ್ನು ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿದ್ದವು. ಅಂದು ಮೂಸಾ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಈ ಬಾರಿ ಸೈನಿಕರ ಗುಂಡಿಗೆ ಬಲಿಯಾಗಿದ್ದಾನೆ.
ಕಳೆದ 2025 ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಮ್ ದಾಳಿಯ ನಂತರವೇ ಮೂಸಾನ ಹೆಸರು ಮೊದಲ ಬಾರಿಗೆ ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿತ್ತು. ಪೀರ್ ಪಂಜಾಲ್ ಶ್ರೇಣಿಯ ಸುತ್ತಮುತ್ತ ಸೇನೆಯ ಮೇಲೆ ನಡೆದ ಹಲವಾರು ದಾಳಿಗಳ ಹಿಂದೆ ಈ ಮೂಸಾನೇ ಮಾಸ್ಟರ್‌ಮೈಂಡ್ ಆಗಿದ್ದ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ನಿವಾಸಿಯಾಗಿರುವ ಮೂಸಾ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸುತ್ತಿದ್ದ. ಈತನ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ ಸಂಘಟನೆಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದ್ದು, ಭದ್ರತಾ ಪಡೆಗಳ ಈ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ, (ಏಜೆನ್ಸೀಸ್).