

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ನವೆಂಬರ್ 1 ರಂದು ದೆಹಲಿಯಲ್ಲಿ ಇಂಡಿ ಮೈತ್ರಿಕೂಟ ಕರೆ ನೀಡಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಅಧಿಕೃತ ಬೆಂಬಲ ಘೋಷಿಸಿದೆ.
ಚುನಾವಣಾ ಆಯೋಗ ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಅಭಿಯಾನವು ದೇಶದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಪೆಟ್ಟು ನೀಡುತ್ತಿದೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದೆ. ಪರಿಷ್ಕರಣೆಯ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪವಾಗಿದೆ.
ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಸರ್ಕಾರವನ್ನು ಆರಿಸಿಕೊಳ್ಳಬೇಕೇ ಹೊರತು, ಸರ್ಕಾರವೇ ತನಗೆ ಬೇಕಾದ ಮತದಾರರನ್ನು ಆರಿಸಿಕೊಳ್ಳುವುದಲ್ಲ ಎಂದು ಸಿಜೆಪಿ ಖಾರವಾಗಿ ಹೇಳಿದೆ. "ಜ್ಞಾನು (ಜ್ಞಾನೇಶ್ ಕುಮಾರ್) ತಕ್ಷಣವೇ ತಮ್ಮ ಕುರ್ಚಿಯಿಂದ ಕೆಳಗಿಳಿಯಬೇಕು. ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ವಿಶ್ವಾಸಾರ್ಹತೆಯನ್ನೇ ಆಯೋಗ ಸಂಪೂರ್ಣವಾಗಿ ಕಳೆದುಕೊಂಡಿದೆ" ಎಂದು ಪಕ್ಷ ಕಿಡಿಕಾರಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೊಡುಗೆಯನ್ನು ಉಲ್ಲೇಖಿಸಿರುವ ಸಿಜೆಪಿ, ದೇಶದ ಸ್ವಾತಂತ್ರ್ಯದ ಆರಂಭದ ದಿನಗಳಲ್ಲಿ ಸಾಮಾನ್ಯ ಜನರ ಮೇಲೆ ನಂಬಿಕೆ ಇಟ್ಟು ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿತ್ತು.
ಆದರೆ ಇಂದಿನ ಸಾಂವಿಧಾನಿಕ ಸಂಸ್ಥೆಗಳು ಜನರ ರಾಜಕೀಯ ಹಕ್ಕನ್ನು ಕಸಿದುಕೊಳ್ಳಲು ಅಥವಾ ಅಡೆತಡೆ ಉಂಟುಮಾಡಲು ಹವಣಿಸುತ್ತಿವೆ ಎಂದು ಆಕ್ಷೇಪಿಸಿದೆ. ಮುಕ್ತ ಚುನಾವಣೆಗಾಗಿ ಹೋರಾಡುವ ಪ್ರತಿಯೊಂದು ಸಂಘಟನೆಗೂ ಬೆಂಬಲ ನೀಡುವುದಾಗಿ ಹೇಳಿದ ಸಿಜೆಪಿ, "ಜೈ ಭೀಮ್, ಜೈ ಹಿಂದ್" ಘೋಷಣೆಯೊಂದಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಸೆಪ್ಟೆಂಬರ್ 30 ರಂದೇ ಜಂಟಿ ಸಭೆ ನಡೆಸಿದ್ದ ‘ಇಂಡಿಯಾ’ ಒಕ್ಕೂಟವು ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಿತ್ತು. ಈ ವೇಳೆ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ದಿನಗಳಲ್ಲಿ ಇವಿಎಂ (EVM) ಯಂತ್ರಗಳನ್ನು ಬದಿಗೊತ್ತಿ, ಮೊದಲಿನಂತೆ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಸಬೇಕು ಎಂದು ಎಲ್ಲಾ ಮೈತ್ರಿ ಪಕ್ಷಗಳು ಒಕ್ಕೊರಲಿನಿಂದ ಆಗ್ರಹಿಸಿವೆ ಎಂದಿದ್ದರು. ಇದರ ಭಾಗವಾಗಿಯೇ ನವೆಂಬರ್ 1 ರಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಜನಾಕ್ರೋಶ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಈ ಸಮಾವೇಶಕ್ಕೆ ದೆಹಲಿ ಪೊಲೀಸರು ಅಂತಿಮವಾಗಿ ಷರತ್ತುಬದ್ಧ ಅನಾಕ್ಷೇಪಣಾ ಪತ್ರ (NOC) ನೀಡಿದ್ದಾರೆ. ಕೇಂದ್ರ ವಲಯ ಡಿಸಿಪಿ ರೋಹಿತ್ ರಾಜಬೀರ್ ಸಿಂಗ್ ಮಾತನಾಡಿ, ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಗೆ ಅಕ್ಟೋಬರ್ 25 ರಿಂದ ನವೆಂಬರ್ 3 ರವರೆಗೆ ಸ್ಥಳಾವಕಾಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ರ್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಸುವ್ಯವಸ್ಥೆ ಮತ್ತು ಟ್ರಾಫಿಕ್ ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ, (ಏಜೆನ್ಸೀಸ್).