"ನನಗಾಗಿ ಅಪ್ಪ ಯಾರ ಮುಂದೆಯೂ ಕೈಮುಗಿದು ಚಾನ್ಸ್ ಬೇಡಿಲ್ಲ!": ನೆಪೋಟಿಸಂ ಟ್ರೋಲಿಗರಿಗೆ ಸಾರಾ ಅಲಿ ಖಾನ್ ಖಡಕ್ ತಿರುಗೇಟು! Sara Ali Khan

Actress Sara Ali Khan gives a sharp response to criticism regarding nepotism.
ನೆಪೋಟಿಸಂ ಟೀಕೆಗಳಿಗೆ ಖಡಕ್ ಉತ್ತರ ನೀಡಿದ ನಟಿ ಸಾರಾ ಅಲಿ ಖಾನ್.
Published on: 

ಮುಂಬೈ: ಬಾಲಿವುಡ್‌ನಲ್ಲಿ ಸ್ಟಾರ್ ಕಿಡ್ಸ್ ಎಂದಾಕ್ಷಣ ನೆಪೋಟಿಸಂ ಸ್ವಜನಪಕ್ಷಪಾತ ಎಂಬ ಚರ್ಚೆ ಮುನ್ನೆಲೆಗೆ ಬರುವುದು ಮಾಮೂಲಿ. ಅದರಲ್ಲೂ ಪಟೌಡಿ ಖಾನ್ದಾನದ ಕುಡಿ, ನಟಿ ಸಾರಾ ಅಲಿ ಖಾನ್ ಈ ವಿಚಾರವಾಗಿ ಸದಾ ಟ್ರೋಲಿಗರಿಗೆ ಗುರಿಯಾಗುತ್ತಲೇ ಇರುತ್ತಾರೆ. ಆದರೆ ಇದೀಗ ಸಾರಾ ತಮ್ಮ ಕುಟುಂಬದ ಪ್ರಭಾವ ಮತ್ತು ನೆಪೋಟಿಸಂ ಕುರಿತು ಎದ್ದಿರುವ ಟೀಕೆಗಳಿಗೆ ಖಡಕ್​ ತಿರುಗೇಟು ನೀಡಿದ್ದಾರೆ. "ನನ್ನ ತಂದೆ ಸೈಫ್ ಅಲಿ ಖಾನ್ ಯಾವತ್ತೂ ಪ್ರೊಡ್ಯೂಸರ್‌ಗಳ ಆಫೀಸ್‌ಗೆ ಅಲೆದು ನನಗಾಗಿ ಸಿನಿಮಾ ಚಾನ್ಸ್ ಬೇಡಿಲ್ಲ, ಒಪ್ಪಂದಗಳನ್ನು ಮಾಡಿಕೊಟ್ಟಿಲ್ಲ" ಎಂದು ನೇರವಾಗಿಯೇ ಗುಡುಗಿದ್ದಾರೆ.

ನಾನು ಒಂಟಿ ತಾಯಿ ಜೊತೆ ಬೆಳೆದೆ!

ಫಿಲ್ಮ್‌ಫೇರ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಾರಾ, ಚಿತ್ರರಂಗದಲ್ಲಿ ತಮ್ಮ ಎಂಟೂವರೆ ವರ್ಷಗಳ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್‌ನ ದೊಡ್ಡ ಕುಟುಂಬದಿಂದ ಬಂದ ತಮಗೆ ಸಾಂಪ್ರದಾಯಿಕ ಬೆಂಬಲವಿರಲಿಲ್ಲ ಎಂದಿರುವ ಅವರು, "ನಾನು ಒಂಟಿ ತಾಯಿ ಅಮೃತಾ ಸಿಂಗ್ ಅವರ ಬಳಿ ಬೆಳೆದವಳು. ಇತರರಂತೆ ನನ್ನ ತಂದೆ ನಿರ್ಮಾಪಕರ ಕಚೇರಿಗಳಿಗೆ ತೆರಳಿ, ಸಂಭಾವನೆ ವಿಚಾರವಾಗಿ ಮಾತುಕತೆ ನಡೆಸುವುದಾಗಲಿ ಅಥವಾ ಅವರ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಿ ಎಂದು ಕೈಮುಗಿದು ಕೇಳುವುದಾಗಲಿ ಮಾಡಿಲ್ಲ. ನನ್ನ ಸಿನಿಮಾಗಳನ್ನು, ಪಾತ್ರಗಳನ್ನು ನಾನೇ ಆರಿಸಿಕೊಂಡಿದ್ದೇನೆ" ಎಂದಿದ್ದಾರೆ.

ಕೇದಾರನಾಥ್‌ ಸಮಸ್ಯೆಯನ್ನು ನಾನೇ ನಿಭಾಯಿಸಿದೆ!

ತಮ್ಮ ಚೊಚ್ಚಲ ಚಿತ್ರ ಕೇದಾರನಾಥ್ ಬಿಡುಗಡೆಯ ಸಮಯದಲ್ಲಿ ಎದುರಾದ ಕಾನೂನು ಹಾಗೂ ನಿರ್ಮಾಣದ ಸಮಸ್ಯೆಗಳನ್ನು ನೆನಪಿಸಿಕೊಂಡ ಸಾರಾ, "ಕೇದಾರನಾಥ್ ಚಿತ್ರದ ವೇಳೆ ನನಗೆ ದೊಡ್ಡ ಸಮಸ್ಯೆ ಎದುರಾದಾಗ, ಅದನ್ನು ನಾನೇ ಮುಂದೆ ನಿಂತು ಬಗೆಹರಿಸಿಕೊಂಡೆ. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಲ್ಲಲು ಯಾರೂ ಇರಲಿಲ್ಲ. ನನಗೆ ಚಿತ್ರರಂಗದಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲ" ಎಂದಿದ್ದಾರೆ.

Also Read
ಸ್ಪೇನ್‌ನಲ್ಲಿ ಭೀಕರ ದುರಂತ: ಮುಖಾಮುಖಿ ಡಿಕ್ಕಿಯಾದ ಎರಡು ಹೈಸ್ಪೀಡ್ ರೈಲುಗಳು; ಸಾವಿನ ಸಂಖ್ಯೆ 64ಕ್ಕೆ ಏರಿಕೆ! Spain Train Accident
Actress Sara Ali Khan gives a sharp response to criticism regarding nepotism.

ಸ್ಟಾರ್ ಕುಟುಂಬದ ಹಿನ್ನೆಲೆ ತಮಗೆ ಸುಲಭವಾಗಿ ಸಿನಿಮಾ ರಂಗದ ಬಾಗಿಲುಗಳನ್ನು ತೆರೆಯಿತು ಎಂಬುದನ್ನು ಸಾರಾ ಒಪ್ಪಿಕೊಳ್ಳುತ್ತಾರೆ. "ನಾನು ಯಾವುದೇ ಭ್ರಮೆಯಲ್ಲಾಗಲಿ ಅಥವಾ ಮುಗ್ಧತೆಯಲ್ಲಾಗಲಿ ಇಲ್ಲ. ನನ್ನ ಕುಟುಂಬದ ಹೆಸರಿನಿಂದಾಗಿ ನಾನು ನಟಿಯಾಗುವ ಮುನ್ನವೇ ಗುರುತಿಸಿಕೊಂಡೆ ಮತ್ತು ಆರಂಭಿಕ ಅವಕಾಶಗಳು ಸುಲಭವಾಗಿ ಸಿಕ್ಕವು. ಆದರೆ ಆ ನಂತರ ಇಲ್ಲಿ ಉಳಿದುಕೊಳ್ಳಲು ಪಡುವ ಪರಿಶ್ರಮ ಯಾರ ಕಣ್ಣಿಗೂ ಕಾಣುವುದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

ನೆಪೋಟಿಸಂ ಕೆಟ್ಟ ಪದವಾಗಿಬಿಟ್ಟಿದೆ!

ಸ್ಟಾರ್ ಕಿಡ್ಸ್‌ಗಳಾದ ಜಾನ್ವಿ ಕಪೂರ್ ಮತ್ತು ಅನನ್ಯಾ ಪಾಂಡೆ ಅವರ ಪರವಾಗಿಯೂ ಧ್ವನಿ ಎತ್ತಿದ ಸಾರಾ, "ನಾವು ಯಾವ ಕುಟುಂಬದಲ್ಲಿ ಹುಟ್ಟಬೇಕು ಎಂಬುದನ್ನು ನಾವ್ಯಾರೂ ತೀರ್ಮಾನಿಸಲು ಸಾಧ್ಯವಿಲ್ಲ. ಇಂದು ನೆಪೋಟಿಸಂ ಎನ್ನುವುದು ಕೇವಲ ನಿಂದನೆಯ ಪದವಾಗಿ ಬದಲಾಗಿದೆ. ಒಬ್ಬ ನಟ ಎಷ್ಟು ಬೆವರು ಸುರಿಸಿ ಕೆಲಸ ಮಾಡುತ್ತಾನೆ ಎಂಬುದನ್ನು ಈ ಒಂದು ಪದ ಸಂಪೂರ್ಣವಾಗಿ ಮರೆಮಾಚಿಬಿಡುತ್ತದೆ. ನಾವು ಅದೃಷ್ಟವಂತರು ಹೌದು, ಆದರೆ ಅದನ್ನೇ ತಪ್ಪೆಂಬಂತೆ ನೋಡುವುದು ಎಷ್ಟು ಸರಿ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net