ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ವಿಪಕ್ಷಗಳು ನಿರ್ಧಾರ; ಅವಿಶ್ವಾಸ ನಿರ್ಣಯ ಮಂಡನೆಗೆ ಲೋಕಸಭೆ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಕೆ | Speaker Om Birla

ಕಾಂಗ್ರೆಸ್ ಸಭೆ
ಕಾಂಗ್ರೆಸ್ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್​​ನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪಕ್ಷಪಾತ ಆರೋಪ
  • ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಪ್ರಸ್ತಾವನೆ
  • ಲೋಕಸಭೆ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ ಕಾಂಗ್ರೆಸ್ ಸಂಸದರು
ನವದೆಹಲಿ: ಲೋಕಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪಕ್ಷಪಾತ ಮತ್ತು ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆ ಸ್ಪೀಕರ್ ಓಂ ಬಿರ್ಲಾ(Speaker Om Birla) ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿದ್ದು, ಇಂದು(ಫೆ. 10) ಲೋಕಸಭೆ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿವೆ ಎಂದು ವರದಿಯಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸೂಚನೆ ನೀಡಿವೆ. ಕೆ.ಸಿ.ವೇಣುಗೋಪಾಲ್ ಮತ್ತು ಕೋಡಿಕುನ್ನಿಲ್ ಸುರೇಶ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡುವಿನ ಮಾತುಕತೆಗಳು ನಡೆದಿದ್ದು, ಯಾವುದೇ ಸಕರಾತ್ಮಕ ಬೆಳವಣಿಗೆ ನಡೆಯದ ಕಾರಣ ಅವಿಶ್ವಾಸ ನಿರ್ಣಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಳೆದ ಗುರುವಾರ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಕುರಿತು ಪ್ರಧಾನಿ ಮಾತನಾಡಲು ಲೋಕಸಭೆಗೆ ಬರದಂತೆ ನಾನೇ ಹೇಳಿದ್ದೇನೆ. ಲೋಕಸಭೆಯಲ್ಲಿ ಅವರ ಮೇಲೆ ಕೆಲವು ಕಾಂಗ್ರೆಸ್ ಸದಸ್ಯರು ಹಲ್ಲೆಯಂತಹ ಅನಿರೀಕ್ಷಿತ ಕೃತ್ಯ ಮಾಡಲು ಸಂಚು ಹೂಡಿದ್ದರು ಎಂದು ಸ್ಪೀಕರ್ ಆರೋಪಿಸಿದ್ದರು. ಇದು ಕಾಂಗ್ರೆಸ್ ಸಂಸದರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಫೀಕರ್ ಓಂ ಬಿರ್ಲಾ ವಿರುದ್ಧದ ಆರೋಪವೇನು?

ಸೋಮವಾರ(ಫೆ. 02) ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ಓದಲು ಬಯಸಿದ್ದರು. ಆದರೆ ಸದನದ ನಿಯಮಾವಳಿಗಳನ್ನು ಉಲ್ಲೇಖಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅನುಮತಿ ನಿರಾಕರಿಸಿದ್ದರು.
2020 ಜೂನ್​ನಲ್ಲಿ ಲಡಾಖ್​ನಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ರಾಹುಲ್ ಗಾಂಧಿ ಉಲ್ಲೇಖಿಸಲು ಪ್ರಯತ್ನಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕ ಬಿಜೆಪಿ ಸಚಿವರು ಆಕ್ಷೇಪಿಸಿದ್ದರು. 
ಮಾರನೇ ದಿನ ಮಂಗಳವಾರ ರಾಹುಲ್ ಗಾಂಧಿಯವರಿಗೆ ಮಾತನಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದ್ದರು. ಸ್ಪೀಕರ್ ಚೇರ್​ನತ್ತ ಪೇಪರ್ ಎಸೆದು ಅಶಿಸ್ತು ತೋರಿಸಿದ ಆರೋಪ ಮೇಲೆ ಓರ್ವ ಸಿಪಿಎಂ ಸಂಸದ ಸೇರಿ 8 ಮಂದಿ ಕಾಂಗ್ರೆಸ್ ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿತ್ತು. ಅದೇ ದಿನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್​ನ ಮಾಜಿ ಪ್ರಧಾನಿಗಳ ಕುರಿತಾದ ಹಲವು ಪುಸ್ತಕ ಉಲ್ಲೇಖಿಸಿ ಕೌಂಟರ್ ನೀಡಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಸಂಸದರು ಸ್ಪೀಕರ್​ಗೆ ದೂರು ನೀಡಿದ್ದರು. ಆದರೆ ಬಿಜೆಪಿ ಸದಸ್ಯರ ವಿರುದ್ಧ ಸ್ಪೀಕರ್ ಯಾವುದೇ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆ ಇಂದು(ಫೆ. 10) ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುವ ಮೊದಲೇ ಸಭೆ ಸೇರಿದ್ದ ವಿರೋಧ ಪಕ್ಷಗಳ ನಾಯಕರು ಸಂಸತ್​ನಲ್ಲಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಬಗ್ಗೆ ಲೋಕಸಭೆ ಕಾರ್ಯದರ್ಶಿಗೆ ನೋಟಿಸ್ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net