ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕ ವಿವಾದ: ನನಗೆ ಪೆಂಗ್ವಿನ್​ಗಿಂತ ಮಾಜಿ ಸೇನಾ ಮುಖ್ಯಸ್ಥರ ಮೇಲೆ ನಂಬಿಕೆ: ರಾಹುಲ್ ಗಾಂಧಿ | Rahul Gandhi

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published on
ನವದೆಹಲಿ: ದೇಶದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಅಪ್ರಕಟಿತ ಪುಸ್ತಕದ ಪ್ರಸಾರದ ಬಗ್ಗೆ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ನನಗೆ ಪೆಂಗ್ವಿನ್ ಸಂಸ್ಥೆಗಿಂತ ಮಾಜಿ ಸೇನಾ ಮುಖ್ಯಸ್ಥರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮಂಗಳವಾರ(ಫೆ. 10) ಸಂಸತ್​ನಲ್ಲಿ ಸುದ್ದಿಗಾರರೊಂದಿಗೆ ಮೊಬೈಲ್​ನಲ್ಲಿ ಎಕ್ಸ್​ ಖಾತೆಯ ಪೋಸ್ಟ್ ತೋರಿಸುತ್ತಾ ಮಾತನಾಡಿರುವ ಅವರು, ಇಲ್ಲಿ ಮಿಸ್ಟರ್ ನರವಾಣೆ ಅವರ ಒಂದು ಟ್ವೀಟ್ ಇದೆ. ನನ್ನ ಪುಸ್ತಕದ ಲಿಂಕ್​ ಅನ್ನು ಫಾಲೋ ಮಾಡಿ ಅಂತ ಹೇಳುತ್ತಿದೆ. ನಾನು ಏನು ಹೇಳ್ತಿದ್ದೇನೆ ಅಂದ್ರೆ, ಇಲ್ಲಿ ನರವಾಣೆ ಅವರು ಸುಳ್ಳು ಹೇಳ್ತೀರಬೇಕು, ಇಲ್ಲ ಪಬ್ಲಿಷರ್ ಸಂಸ್ಥೆ ಪೆಂಗ್ವಿನ್ ಸುಳ್ಳು ಹೇಳುತ್ತಿರಬೇಕು.
ಆದರೆ ಮಾಜಿ ಸೇನಾ ಮುಖ್ಯಸ್ಥರು ಸುಳ್ಳು ಹೇಳುತ್ತಾರೆ ಎಂದು ನಾನು ನಂಬಲ್ಲ. ಪಬ್ಲಿಷರ್ ಪೆಂಗ್ವಿನ್ ಸಂಸ್ಥೆ ಪುಸ್ತಕ ಪ್ರಕಟವಾಗಿಲ್ಲ ಎಂದು ಹೇಳುತ್ತಿದೆ. ಆದರೆ ಪುಸ್ತಕ ಅಮೆಜಾನ್​ನಲ್ಲಿ ಲಭ್ಯವಿದೆ. 2023ರಲ್ಲೇ ಜನರಲ್ ನರವಾಣೆ ಅವರು ನನ್ನ ಪುಸ್ತಕ ಖರೀದಿಸಿ ಎಂದು ಟ್ವೀಟ್ ಮಾಡಿದ್ದಾರೆ.
ನಾನು ಪೆಂಗ್ವಿನ್ ಸಂಸ್ಥೆಗಿಂತ ನರವಾಣೆ ಅವರ ಮಾತನ್ನು ನಂಬುತ್ತೇನೆ. ಅವರ ಪುಸ್ತಕದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಅನಾನುಕೂಲಕರವಾದ ಕೆಲವು ಹೇಳಿಕೆಗಳಿವೆ. ನೀವು ಪೆಂಗ್ವಿನ್ ಅನ್ನು ನಂಬುತ್ತೀರಾ ಅಥವಾ ನರವಣೆ ಅವರನ್ನು ನಂಬುತ್ತೀರಾ? ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ ನರವಾಣೆಯವರ ಆತ್ಮಚರಿತ್ರೆ ಪುಸ್ತಕ ಪ್ರಕಟಣೆಗೆ ರಕ್ಷಣಾ ಇಲಾಖೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಆದಾಗ್ಯೂ ಪುಸ್ತಕ ಮುದ್ರಣಗೊಂಡು, ವಿವಿಧ ಆನ್​ಲೈನ್ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ಬಗ್ಗೆ, ಅದು ರಾಹುಲ್ ಗಾಂಧಿ ಕೈಸೇರಿರುವ ಬಗ್ಗೆ ಚರ್ಚೆಗಳು ಎದ್ದಿವೆ. ಅಧಿಕಾರಿಗಳ ಅನುಮೋದನೆಗಾಗಿ ಬಾಕಿ ಇರುವ ಪುಸ್ತಕವನ್ನು ಅನುಮತಿ ಪಡೆಯದೇ ಪುಸ್ತಕ ಮುದ್ರಿಸಿ, ಮಾರಾಟ ಮಾಡಿದ್ದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪುಸ್ತಕದ ಪ್ರಕಾಶನ ಹಕ್ಕುಗಳನ್ನು ಹೊಂದಿರುವ ಪೆಂಗ್ವಿನ್ ರಾಂಡಮ್ ಹೌಸ್, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಪುಸ್ತಕವು ಪ್ರಕಟಣೆಗೆ ಹೋಗಿಲ್ಲ. ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಹೇಳಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net