ಸಿಇಸಿ ವಿರುದ್ಧ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಸಜ್ಜು..ಏನಿದು ವಿಪಕ್ಷಗಳ ಮಾಸ್ಟರ್ ಪ್ಲಾನ್..? | CEC Impeachment
CEC Impeachment | ಸಿಇಸಿ ವಿರುದ್ಧ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಸಜ್ಜು
Published on:
Copied
Follow Us
ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವೊಂದಕ್ಕೆ ಸಂಸತ್ತು ಸಾಕ್ಷಿಯಾಗುವ ಸಾಧ್ಯತೆಯಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ (CEC Impeachment) ನಿರ್ಣಯ ಮಂಡಿಸಲು ಇಂಡಿಯಾ ಒಕ್ಕೂಟ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ಪ್ರಮುಖ ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದ್ದು, ಇದು ಕೇವಲ ಒಂದು ಪಕ್ಷದ ನಿರ್ಧಾರವಲ್ಲ, ಬದಲಾಗಿ ಸಮಾನ ಮನಸ್ಕ ಪಕ್ಷಗಳ ಸಾಮೂಹಿಕ ಪ್ರಯತ್ನ ಎಂದು ಟಿಎಂಸಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ಅವರು ತಮಗೆ ನೀಡಲಾದ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದು, ಅದನ್ನು ಕೆಳಮಟ್ಟಕ್ಕೆ ಇಳಿಸಿದ್ದಾರೆ ಎನ್ನುವುದು ವಿಪಕ್ಷಗಳು ಆರೋಪ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ ನಿರ್ಣಯ ಮಂಡಿಸಬೇಕೇ ಅಥವಾ ಯಾವುದಾದರೂ ಒಂದು ಸದನಕ್ಕೆ ಸೀಮಿತಗೊಳಿಸಬೇಕೇ ಎಂಬ ಬಗ್ಗೆ ಅಂತಿಮ ಚರ್ಚೆಗಳು ನಡೆಯುತ್ತಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಪ್ರಕ್ರಿಯೆ ಹೇಗೆ?
ಮುಖ್ಯ ಚುನಾವಣಾ ಆಯುಕ್ತರನ್ನು ಅಧಿಕಾರದಿಂದ ತೆಗೆದುಹಾಕುವುದು ಸುಲಭದ ಮಾತಲ್ಲ, ಭಾರತದ ಸಂವಿಧಾನದ ಪ್ರಕಾರ, ಸಿಇಸಿಯನ್ನು ಪದಚ್ಯುತಗೊಳಿಸುವ ವಿಧಾನವು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಪ್ರಕ್ರಿಯೆಯಷ್ಟೇ ಸಂಕೀರ್ಣವಾಗಿದೆ.
ಈ ನಿರ್ಣಯಕ್ಕೆ ಲೋಕಸಭೆಯ ಕನಿಷ್ಠ 100 ಸಂಸದರು ಅಥವಾ ರಾಜ್ಯಸಭೆಯ ಕನಿಷ್ಠ 50 ಸಂಸದರ ಸಹಿ ಅತ್ಯಗತ್ಯ. ವಿರೋಧ ಪಕ್ಷಗಳು ಈಗಾಗಲೇ ಸಹಿ ಸಂಗ್ರಹ ಪ್ರಕ್ರಿಯೆಯನ್ನು ಆರಂಭಿಸಿವೆ ಎಂದು ಮೂಲಗಳು ತಿಳಿಸಿದ್ದು, ದುರುಪಯೋಗದ ಆರೋಪ ಸಾಬೀತಾದರೆ, ಅಸಮರ್ಥತೆಯ ಆಧಾರದ ಮೇಲೆ ಮಾತ್ರ ಸಿಇಸಿಯನ್ನು ತೆಗೆದುಹಾಕಲು ಸಾಧ್ಯ.
ಈ ನಿರ್ಣಯವು ಜಾರಿಗೆ ಬರಲು ಸಂಸತ್ತಿನ ಉಭಯ ಸದನಗಳಲ್ಲಿ ವಿಶೇಷ ಬಹುಮತ (Special Majority) ಬೇಕು. ಅಂದರೆ, ಸದನದ ಒಟ್ಟು ಸದಸ್ಯರ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಬೆಂಬಲ ಮತ್ತು ಹಾಜರಿದ್ದು ಮತ ಚಲಾಯಿಸುವವರಲ್ಲಿ 2/3 ಭಾಗದಷ್ಟು ಸದಸ್ಯರ ಒಪ್ಪಿಗೆ ಇರಬೇಕು.
ವಿರೋಧ ಪಕ್ಷಗಳ ಆರೋಪವೇನು?
ಚುನಾವಣಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಲ್ಲಿ ಆಯುಕ್ತರು ವಿಫಲರಾಗಿದ್ದಾರೆ ಎಂಬುದು ವಿರೋಧ ಪಕ್ಷಗಳ ಮುಖ್ಯ ದೂರಾಗಿದ್ದು, ಇತ್ತೀಚಿನ ನೇಮಕಾತಿ ಕಾನೂನುಗಳು ಮತ್ತು ಚುನಾವಣಾ ನಿರ್ವಹಣೆಯ ಬಗ್ಗೆ ಇಂಡಿಯಾ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಕರಡು ನಿರ್ಣಯವನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್ ಸೇರಿದಂತೆ ಎಲ್ಲಾ ಮಿತ್ರಪಕ್ಷಗಳು ಇದಕ್ಕೆ ಸಹಮತ ಸೂಚಿಸಿವೆ.
ಮುಂದೇನಾಗಬಹುದು..?
ಒಂದು ವೇಳೆ ಗುರುವಾರ ನೋಟಿಸ್ ಸಲ್ಲಿಕೆಯಾದರೆ, ಅದು ಸ್ಪೀಕರ್ ಅಥವಾ ಸಭಾಪತಿಗಳ ವಿವೇಚನೆಗೆ ಒಳಪಟ್ಟಿರುತ್ತದೆ. ಅವರು ಇದನ್ನು ಒಪ್ಪಿಕೊಂಡರೆ ಮಾತ್ರ ತನಿಖಾ ಸಮಿತಿ ರಚನೆ ಮತ್ತು ಮುಂದಿನ ಚರ್ಚೆಗಳು ನಡೆಯಲಿವೆ. ಆಡಳಿತಾರೂಢ ಎನ್ಡಿಎ ಮೈತ್ರಿಕೂಟವು ಸಂಸತ್ತಿನಲ್ಲಿ ಪ್ರಬಲವಾಗಿರುವುದರಿಂದ, ಈ ನಿರ್ಣಯವು ಅಂಗೀಕಾರಗೊಳ್ಳುವುದು ವಿರೋಧ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ(ಏಜೆನ್ಸೀಸ್).