ಸ್ಪೀಕರ್ ವಿರುದ್ಧದ ನಿರ್ಣಯದ ಹಿಂದೆ ಅಡಗಿದೆಯಂತೆ ಆ ಒಬ್ಬ ನಾಯಕನ ಅಹಂಕಾರ! | No-confidence motion

No-confidence motion
No-confidence motion
Published on
ನವದೆಹಲಿ: ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ಕೋರಿ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯದ ಮೇಲಿನ ಚರ್ಚೆಯು ಬುಧವಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು.
ಈ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ ಸಂಸತ್ತಿನ ಘನತೆಯನ್ನು ಕಾಪಾಡಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಅಹಂಕಾರದ ರಾಜಕಾರಣದ ಆರೋಪ

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಹಿರಿಯ ಸಂಸದ ರವಿಶಂಕರ್ ಪ್ರಸಾದ್, ಸ್ಪೀಕರ್ ವಿರುದ್ಧದ ಈ ಅವಿಶ್ವಾಸ ನಿರ್ಣಯವು ದೇಶದ ಹಿತದೃಷ್ಟಿಯಿಂದ ಬಂದಿದ್ದಲ್ಲ. ಬದಲಾಗಿ, ಇದು ಯಾರೋ ಒಬ್ಬರ ಅಹಂಕಾರವನ್ನು ಪೂರೈಸಲು ಮಾಡಲಾಗಿರುವ ರಾಜಕೀಯ ತಂತ್ರ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದರು.
ಸಂಸದೀಯ ಸಾಧನಗಳನ್ನು ವೈಯಕ್ತಿಕ ರಾಜಕೀಯ ಸೇಡಿಗೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದಿರುವ ಸಂಸದ ಪ್ರಸಾದ, ಭಾರತದ ಪ್ರಧಾನಮಂತ್ರಿಯವರೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ವಿರೋಧ ಪಕ್ಷದ ನಾಯಕರಿಗೆ ತಿಳಿದಿರಲಿ, ಪ್ರಧಾನಿ ಮೋದಿಯವರ ವಿರುದ್ಧ ರಾಹುಲ್ ಮಾಡುತ್ತಿರುವ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ಹೇಳಿದರು.

ಹಳೆಯ ಘಟನೆ

ಸಂಸತ್ತಿನ ಇತಿಹಾಸವನ್ನು ಮೆಲುಕು ಹಾಕಿದ ಪ್ರಸಾದ್, ಈ ಹಿಂದೆ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಮೇಲೆ 11 ಸಂಸದರನ್ನು ಉಚ್ಚಾಟಿಸಿದ ಘಟನೆ ಹಾಗೂ ಸದನದೊಳಗೆ ಕರಿಮೆಣಸಿನ ಪುಡಿ ಎಸೆದಂತಹ ಕಹಿ ಘಟನೆಗಳನ್ನು ನೆನಪಿಸಿದರು. ಅಂತಹ ಗಂಭೀರ ಸಂದರ್ಭಗಳಲ್ಲೂ ಸ್ಪೀಕರ್ ಸ್ಥಾನದ ವಿರುದ್ಧ ಇಂತಹ ನಾಟಕೀಯ ಪ್ರತಿಭಟನೆಗಳು ನಡೆದಿಲ್ಲ. ವಿಪಕ್ಷಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಹೇಳಿದ್ದೇನು..?

ಇದಕ್ಕೂ ಮುನ್ನ ಚರ್ಚೆಯ ಆರಂಭದಲ್ಲಿ ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಆಡಳಿತ ಪಕ್ಷ ಮತ್ತು ಸ್ಪೀಕರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
ನಾನು ಪ್ರಧಾನ ಮಂತ್ರಿಗಳಿಗೆ ಸಂಬಂಧಪಟ್ಟಂತ ಮೂಲಭೂತ ಪ್ರಶ್ನೆಗಳನ್ನು ಎತ್ತಿದಾಗಲೆಲ್ಲಾ ನನ್ನನ್ನು ಮಾತನಾಡದಂತೆ ತಡೆಯಲಾಗಿದೆ. ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಮತ್ತು ಜೆಫ್ರಿ ಎಪ್ಸ್ಟೀನ್ ಕುರಿತು ಪ್ರಸ್ತಾಪಿಸಲು ಯತ್ನಿಸಿದಾಗ ಅಡ್ಡಿಪಡಿಸಲಾಯಿತು ಎಂದು ರಾಹುಲ್ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನಿರಾಕರಿಸುತ್ತಿರುವುದು ಸಂಸದೀಯ ಇತಿಹಾಸದಲ್ಲೇ ಮೊದಲು ಎಂದಿರುವ ರಾಹುಲ್​, ಸಂಸತ್ತು ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ಅದು ಇಡೀ ದೇಶದ 140 ಕೋಟಿ ಜನರ ಅಭಿವ್ಯಕ್ತಿ. ಇಲ್ಲಿ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎನ್ನುವುದು ವಿಪಕ್ಷ ನಾಯಕರ ವಾದ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net