ಲೋಕಸಭೆಯಲ್ಲಿ ಹೈಡ್ರಾಮಾ; ಸ್ಪೀಕರ್ ವಿರುದ್ಧದ ನಿರ್ಣಯದ ವೇಳೆ ಗೊಗೊಯ್-ಅಮಿತ್ ಷಾ ವಾಗ್ವಾದ! | Speaker Removal Debate

Speaker Removal Debate | ಸ್ಪೀಕರ್ ವಿರುದ್ಧದ ನಿರ್ಣಯದ ವೇಳೆ ಗೊಗೊಯ್-ಅಮಿತ್ ಷಾ ವಾಗ್ವಾದ!
Speaker Removal Debate | ಸ್ಪೀಕರ್ ವಿರುದ್ಧದ ನಿರ್ಣಯದ ವೇಳೆ ಗೊಗೊಯ್-ಅಮಿತ್ ಷಾ ವಾಗ್ವಾದ!
Published on
ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಹಂತದ ಎರಡನೇ ದಿನ ಲೋಕಸಭೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ (Speaker Removal Debate ) ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಂಸದೀಯ ನಿಯಮಗಳ ವ್ಯಾಖ್ಯಾನದ ಕುರಿತು ದೊಡ್ಡ ಮಟ್ಟದ ಸಂಘರ್ಷ ಏರ್ಪಟ್ಟಿದೆ.
ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಸ್ಪೀಕರ್ ಸ್ಥಾನದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದರೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅದರ ಸಾಂವಿಧಾನಿಕ ನಿಲುವನ್ನು ಸಮರ್ಥಿಸಿಕೊಳ್ಳುವ ಮೂಲಕ ತಿರುಗೇಟು ನೀಡಿದರು.
ಚರ್ಚೆಯ ಆರಂಭದಲ್ಲೇ ಆಕ್ಷೇಪಣೆ ಎತ್ತಿದ ಗೌರವ್ ಗೊಗೊಯ್, ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವಾಗ, ಸದನದ ಅಧ್ಯಕ್ಷತೆ ವಹಿಸುವ ಸಮಿತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟರು. ಸುಪ್ರೀಂ ಕೋರ್ಟ್‌ನ ರವಿಯಾ ತೀರ್ಪನ್ನು ಉಲ್ಲೇಖಿಸಿದ ಅವರು, ಅಂತಹ ಸೂಕ್ಷ್ಮ ಚರ್ಚೆಯ ಸಮಯದಲ್ಲಿ ಸಭೆಯ ಅಧ್ಯಕ್ಷ ಸ್ಥಾನದಲ್ಲಿರುವವರು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿರಬೇಕು ಎಂದರು.
ಸಭಾಧ್ಯಕ್ಷರೇ ನೇಮಿಸಿದ ಅಧ್ಯಕ್ಷರ ಸಮಿತಿಯು ಈ ಚರ್ಚೆಯನ್ನು ಮುನ್ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ, ಈ ಆಯ್ಕೆಯ ಬಗ್ಗೆ ಸದನಕ್ಕೆ ಅಧಿಕೃತ ಮಾಹಿತಿ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಗೊಗೊಯ್​, ಬಿಜೆಪಿ ಸಂಸದ ಜಗದಾಂಬಿಕಾ ಪಾಲ್​​ರನ್ನು ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡುವ ನಿರ್ಧಾರದ ಕುರಿತಾಗಿ ಯಾವುದೇ ಅಧಿಕೃತ ದಾಖಲೆ ಸದನದ ಮುಂದೆ ಇರಲಿಲ್ಲ ಎಂದು ಆರೋಪಿಸಿದರು.

ಅಮಿತ್​ ಷಾ ತಿರುಗೇಟು..

ಗೊಗೊಯ್ ಈ ಹೇಳಿಕೆ ನೀಡುತ್ತಿದ್ದಂತೆ ಕಲಾಪದಲ್ಲಿ ವಾಗ್ವಾದ ಆರಂಭವಾಗಿದ್ದು, ಇದಕ್ಕೆ ತಕ್ಷಣವೇ ಮಧ್ಯಪ್ರವೇಶಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ವಿರೋಧ ಪಕ್ಷದವರು ಸಂಸದೀಯ ನಿಯಮಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದರು.
ಸ್ಪೀಕರ್ ಹುದ್ದೆಯು ಸಾಂವಿಧಾನಿಕವಾಗಿ ಅತ್ಯಂತ ಉನ್ನತವಾದುದು, ಚರ್ಚೆಯ ಸಮಯದಲ್ಲಿ ಸ್ಪೀಕರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲವಾದರೂ, ಅದು ಯಾವತ್ತಿಗೂ ಖಾಲಿಯಾಗುವುದಿಲ್ಲ, ಅಧ್ಯಕ್ಷತೆ ವಹಿಸಲು ಸಮಿತಿಯ ಸದಸ್ಯರನ್ನು ನೇಮಿಸುವ ಅವರ ಆಡಳಿತಾತ್ಮಕ ಅಧಿಕಾರಗಳು ಹಾಗೆಯೇ ಉಳಿಯುತ್ತವೆ. ಸದನ ವಿಸರ್ಜನೆಯಾದಾಗ ಮತ್ತು ಚುನಾವಣಾ ಅವಧಿಯಲ್ಲೂ ಸಹ ಸ್ಪೀಕರ್ ಕಚೇರಿ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ ಎಂದು ಗೃಹ ಸಚಿವ ಷಾ ತಿಳಿಸಿದರು.

ಸ್ಪೀಕರ್​ ಜಗದಂಬಿಕಾ ಪಾಲ್​ ಹೇಳಿದ್ದೇನು..?

ಇದೇ ವೇಳೆ ಮಧ್ಯಪ್ರವೇಶಿಸಿದ ಪೀಠದಲ್ಲಿದ್ದ ಜಗದಾಂಬಿಕಾ ಪಾಲ್, ವಿರೋಧ ಪಕ್ಷದ ಆಕ್ಷೇಪಣೆಗಳನ್ನು ತಳ್ಳಿಹಾಕಿದರು. ತಾವು ಈಗಾಗಲೇ ಈ ಬಗ್ಗೆ ತೀರ್ಪು ನೀಡಿರುವುದಾಗಿ ಹೇಳಿದ ಅವರು, ಸ್ಪೀಕರ್ ಹುದ್ದೆ ಖಾಲಿ ಇಲ್ಲದಿರುವುದರಿಂದ ನಡೆದ ನೇಮಕಾತಿಗಳು ಮತ್ತು ಪ್ರಕ್ರಿಯೆಗಳು ಪೂರ್ಣವಾಗಿ ಮಾನ್ಯವಾಗಿದ್ದು, ಸಂಸದೀಯ ನಿಯಮಗಳ ಅಡಿಯಲ್ಲಿ ತಮಗೆ ಸದನ ನಡೆಸುವ ಅಧಿಕಾರವಿದೆ ಎಂದು ತಿಳಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net