ಆಪರೇಷನ್ ಟೈಗರ್ ಊಹಾಪೋಹ; ಪಕ್ಷದ ಸಂಸದರ ಜೊತೆ ಸಭೆ ನಡೆಸಿದ ಉದ್ಧವ್ ಠಾಕ್ರೆ: ಎಲ್ಲಾ ಸಂಸದರು ಹಾಜರು | Uddhav Thackeray
ಉದ್ದವ್ ಠಾಕ್ರೆ
Published on:
Copied
Follow Us
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್ ಟೈಗರ್ ನಡೆಸುತ್ತಿದ್ದು, ಏಕನಾಥ ಶಿಂಧೆ ಮೂಲಕ ಶಿವಸೇನಾ(ಯುಬಿಟಿ) ಬಣದ ಸಂಸದರನ್ನು ಸೆಳೆಯಲು ಮುಂದಾಗಿದೆ ಎಂಬ ಊಹಾಪೋಹಗಳ ನಡುವೆ, ಭಾನುವಾರ(ಜೂ. 14) ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಎಲ್ಲಾ ಒಂಬತ್ತು ಸಂಸದರ ಜೊತೆ ಸಭೆ ನಡೆಸಿದರು ಎಂದು ವರದಿಯಾಗಿದೆ.
ಉದ್ಧವ್ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಯಲ್ಲಿ ಸಭೆ ನಡೆದಿದ್ದು, ಒಂಬತ್ತು ಸಂಸದರಲ್ಲಿ ನಾಲ್ವರು ಖುದ್ದಾಗಿ ಭಾಗವಹಿಸಿದರೆ, ಐದು ಮಂದಿ ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ಸಂಸದರು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.
ಅರವಿಂದ್ ಸಾವಂತ್, ಸಂಜಯ್ ದಿನಾ ಪಾಟೀಲ್, ರಾಜಭಾವು ವಾಜೆ ಮತ್ತು ಅನಿಲ್ ದೇಸಾಯಿ ಖುದ್ದು ಹಾಜರಾಗಿದ್ದರೆ, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಘಚೌರೆ, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಮತ್ತು ಇನ್ನೊಬ್ಬರು ವರ್ಚುವಲ್ ಮೂಲಕ ಸಭೆಯಲ್ಲಿದ್ದರು.
ಈ ಕುರಿತು ಮಾತನಾಡಿದ ಶಿವಸೇನಾ ನಾಯಕ ಸಂಜಯ್ ರಾವತ್, ಸಭೆಯಲ್ಲಿ ನಮ್ಮ ಎಲ್ಲಾ ಒಂಬತ್ತು ಲೋಕಸಭಾ ಸದಸ್ಯರು ಭಾಗವಹಿಸಿದ್ದರು. ಆಪರೇಷನ್ ಟೈಗರ್ ಸುತ್ತಲಿನ ಊಹಾಪೋಹಗಳಿಗೆ ಅಂತ್ಯ ಹಾಡಬೇಕು ಎಂದು ಸಭೆ ಕರೆಯಲಾಗಿತ್ತು. ಅಂತಹ ಯಾವುದೇ ಕಾರ್ಯಾಚರಣೆ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ಇನ್ನೂ ಸಭೆಯಲ್ಲಿ ಉದ್ಧವ್ ಠಾಕ್ರೆ, ಸಂಸದರು ಪಕ್ಷಾಂತರದ ವದಂತಿಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಬೇಕು. ಮತ್ತು ಪಕ್ಷದ ಕಾರ್ಯಕರ್ತರಿಗೆ ಯಾವುದೇ ಒಡಕು ಇಲ್ಲ ಎಂದು ಭರವಸೆ ನೀಡಬೇಕು ಎಂದು ಸೂಚಿಸಿದ್ದಾರೆ. ಜೊತೆಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಿ. ಯಾವುದೇ ಊಹಾಪೋಹ ಹರಡಲು ಅವಕಾಶ ನೀಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಶಿವಸೇನೆ ಯುಬಿಟಿ ಬಣದ ಒಂಬತ್ತು ಲೋಕಸಭಾ ಸಂಸದರಲ್ಲಿ ಏಳು ಮಂದಿ ಪಕ್ಷ ಬದಲಾಯಿಸಲು ಆಸಕ್ತಿ ತೋರಿಸಿದ್ದು, ಇದರಿಂದಾಗಿ ಏಕನಾಥ್ ಶಿಂಧೆ ಪಾಳಯವು ಆಪರೇಷನ್ ಟೈಗರ್ ಅನ್ನು ಪ್ರಾರಂಭಿಸಿದೆ. ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಮೂರನೇ ಎರಡರಷ್ಟು ಬಹುಮತದೊಂದಿಗೆ ಪಕ್ಷ ವಿಭಜನೆಯಾಗಲಿದೆ ಎನ್ನಲಾಗಿತ್ತು (ಏಜೆನ್ಸೀಸ್).