ಎರಡು ನಿಮಿಷ ಮಾತ್ರ ಸಾಕು.... ಮೊಮೊ ತಿನ್ನಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ! ಆರೋಪಿ ಬಂಧನ

Delhi Crime
Delhi Crime
Published on
ನವದೆಹಲಿ: ಪೂರ್ವ ದೆಹಲಿಯ ಮಂಡಾವಲಿ ಪ್ರದೇಶದಲ್ಲಿ 24 ವರ್ಷದ ಯುವತಿಗೆ ಮೊಮೊ ತಿನ್ನಿಸಲು ಕರೆದೊಯ್ಯುವ ನೆಪದಲ್ಲಿ ಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಲ್ಲೇ ಲೈಂಗಿಕ ಕಿರುಕುಳ(sexually) ನೀಡಿದ ಆರೋಪ ಕೇಳಿಬಂದಿದೆ. 
ಕಾರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಶ್ಲೀಲವಾಗಿ ವರ್ತಿಸಿದ್ದಲ್ಲದೆ, ಕಾರಿನಿಂದ ಇಳಿಯಲು ಅವಕಾಶ ನೀಡಲಿಲ್ಲ ಎಂದು ಯುವತಿ ದೂರಿದ್ದಾರೆ. ಘಟನೆ ವೇಳೆ ಯುವತಿ ತನ್ನ ಮೊಬೈಲ್‌ನಲ್ಲಿ ವಿಡಿಯೊ ದಾಖಲಿಸಿಕೊಂಡಿದ್ದು, ಅದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿರುವ ಮಂಡಾವಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೊಮೊ ನೆಪ, ಬಳಿಕ ನಿರ್ಜನ ಪ್ರದೇಶಕ್ಕೆ ಕಾರು

ಪೊಲೀಸರ ಪ್ರಕಾರ, ಆರೋಪಿ ಮೊಮೊ ತಿನ್ನಿಸಲು ಕರೆದೊಯ್ಯುವುದಾಗಿ ಹೇಳಿ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಮಾರ್ಗಮಧ್ಯೆ ಕಾರಿಗೆ ಸಿಎನ್‌ಜಿ ತುಂಬಿಸಬೇಕಿದೆ ಎಂದು ಹೇಳಿದ್ದರೂ, ಬಳಿಕ ವಾಹನವನ್ನು ನಿರ್ಜನ ಪ್ರದೇಶದತ್ತ ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲಿ ತಲುಪಿದ ಬಳಿಕ ಆರೋಪಿ ಅಶ್ಲೀಲವಾಗಿ ಮಾತನಾಡಿ, ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಲ್ಲದೆ, ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸಿ ಕಾರಿನಿಂದ ಹೊರಬರದಂತೆ ತಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಮೊಬೈಲ್‌ನಲ್ಲಿ ವಿಡಿಯೊ ದಾಖಲು

ಘಟನೆಯ ವೇಳೆ ಯುವತಿ ತನ್ನ ಮೊಬೈಲ್‌ನಲ್ಲಿ ವಿಡಿಯೊ ದಾಖಲಿಸಿಕೊಂಡಿದ್ದಾರೆ. ನಂತರ ಮಂಡಾವಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ವಿಡಿಯೊದಲ್ಲಿ ಯುವತಿ ತನ್ನನ್ನು ಹೋಗಲು ಬಿಡುವಂತೆ ಆರೋಪಿಗೆ ಪದೇಪದೇ ಮನವಿ ಮಾಡುತ್ತಿರುವುದು ದಾಖಲಾಗಿದೆ.

ಬೆದರಿಕೆ ಹಾಕಿದ ಆರೋಪ

ಯುವತಿ ತನ್ನನ್ನು ಮುಟ್ಟಿದರೆ ವಾಹನದ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ ಎಂದು ವರದಿಯಾಗಿದೆ. ಅಲ್ಲದೆ, "ನನ್ನ ದೇಹವನ್ನು ಮುಟ್ಟಲು ಬಿಡುವುದಿಲ್ಲ" ಎಂದು ಯುವತಿ ವಿರೋಧ ವ್ಯಕ್ತಪಡಿಸಿರುವುದಾಗಿಯೂ ತಿಳಿದುಬಂದಿದೆ.
ಇದೇ ವೇಳೆ ಆರೋಪಿ "ಎರಡು ನಿಮಿಷ ಮಾತ್ರ ಬೇಕು" ಎಂದು ಒತ್ತಾಯಿಸಿದ್ದಲ್ಲದೆ, ಯುವತಿಯ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಡಿಯೊದಲ್ಲಿ ನಿಂದನಾತ್ಮಕ ಹಾಗೂ ಲೈಂಗಿಕ ಸೂಚನೆಯ ಮಾತುಗಳೂ ದಾಖಲಾಗಿವೆ ಎಂದು ವರದಿಯಾಗಿದೆ.

ತನಿಖೆ ಮುಂದುವರಿಕೆ

ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ. ವಿಡಿಯೊ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net