ಆಪರೇಷನ್ ಸಿಂಧೂರಕ್ಕೆ ಒಂದು ವರ್ಷ

ಆಪರೇಷನ್ ಸಿಂಧೂರಕ್ಕೆ ಒಂದು ವರ್ಷ
ಆಪರೇಷನ್ ಸಿಂಧೂರಕ್ಕೆ ಒಂದು ವರ್ಷ
Published on
ಅದೊಂದು ಕಾಲವಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ಸಂಭವಿಸಿದಾಗಲೆಲ್ಲ ಆಗ ಅಧಿಕಾರದಲ್ಲಿದ್ದ ಕೇಂದ್ರ ಸರ್ಕಾರ ದಾಳಿಯನ್ನು ಖಂಡಿಸುವುದಕ್ಕೆ ಸೀಮಿತವಾಗಿ ಬಿಡುತ್ತಿತ್ತು ಮತ್ತು ‘ಪಾಕಿಸ್ತಾನಕ್ಕೆ ಬುದ್ಧಿಮಾತು ಹೇಳಿ’ ಎಂದು ಅಮೆರಿಕಕ್ಕೆ ದುಂಬಾಲು ಬೀಳುತ್ತಿತ್ತು. ಆದರೆ, ಕಳೆದೊಂದು ದಶಕದಲ್ಲಿ ಭಾರತ ಭಯೋತ್ಪಾದನೆಯ ವಿರುದ್ಧ ಕಠೋರ ನಿಲುವನ್ನು ತಳೆದಿದೆ. ಭಯೋತ್ಪಾದಕ ಸಂಘಟನೆಗಳು, ಅದರಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಇವರಿಗೆ ಸಹಕಾರ ನೀಡುತ್ತಿರುವವರ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದಲೇ, ಭಯೋತ್ಪಾದನೆ ದಾಳಿಗಳು ಗಣನೀಯವಾಗಿ ಕಡಿಮೆಯಾಗಿದ್ದು, ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ಪ್ರಮಾಣವೂ ತಗ್ಗಿದೆ. ಆದರೆ, 2025ರ ಏಪ್ರಿಲ್ 22ರಂದು ಪಹಲ್ಗಾಮ್ಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ, ಭಯೋತ್ಪಾದಕರು ಹೇಡಿಗಳಂತೆ ದಾಳಿ ನಡೆಸಿದರು. ಪ್ರಕೃತಿಯ ಮಡಿಲಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರನ್ನು, ಅವರು ಹಿಂದೂಗಳಾಗಿರುವುದನ್ನು ಖಚಿತಪಡಿಸಿಕೊಂಡು ಗುಂಡು ಹೊಡೆದರು. 26 ಜನರು ಈ ಕರಾಳ ಕೃತ್ಯಕ್ಕೆ ಬಲಿಯಾದರು.
ಇಡೀ ದೇಶ ಆಕ್ರೋಶ ಮತ್ತು ದುಃಖದಿಂದ ನಲುಗಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ ದಾಳಿಯ ಹೊಣೆ ಹೊತ್ತುಕೊಂಡಿತು. ‘ಭಯೋತ್ಪಾದನೆಯನ್ನು ಪೋಷಿ ಸುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸದೆ ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದರು. ಇದಕ್ಕೂ ಮುನ್ನ, 2019ರ ಫೆಬ್ರವರಿ 14ರಂದು ಪುಲ್ವಾಮಾ ದಾಳಿಯ ನಂತರ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿಕ ಪ್ರದೇಶ (ಪಿಒಕೆ)ದಲ್ಲಿನ ಭಯೋತ್ಪಾದಕರ ಶಿಬಿರಗಳನ್ನು ನಿಖರವಾಗಿ ಪತ್ತೆ ಹಚ್ಚಿದ ಭಾರತೀಯ ಸೇನೆ ಮತ್ತು ವಾಯುಪಡೆ 2025ರ ಮೇ 7ರಂದು ಆಪರೇಷನ್ ಸಿಂಧೂರ ಆರಂಭಿಸಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂದಡಿ ಇರಿಸಿದರು. ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದ್ದು, ಗಡಿ ದಾಟುವ ಮೊದಲೇ ಹೊಡೆಯುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ದರ್ಶಿಸಿದೆ. ಇದು ಉಗ್ರರ ಸಂಘಟನೆಗಳಲ್ಲಿ ನಡುಕ ಹುಟ್ಟಿಸಿದ್ದು, ನುಸುಳುವಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮಾತ್ರವಲ್ಲ, ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದವನ್ನು ರದ್ದುಗೊಳಿಸಿದೆ.

ಭದ್ರತೆಗೆ ತಂತ್ರಜ್ಞಾನದ ಸ್ಪರ್ಶ

- ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಕಳೆದ ಒಂದು ವರ್ಷದಲ್ಲಿ ಗಡಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಕಣ್ಗಾವಲು ವ್ಯವಸ್ಥೆ, ಡ್ರೋನ್ ವಿರೋಧಿ ವ್ಯವಸ್ಥೆ ಮತ್ತು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಭದ್ರತಾ ಪಡೆಗಳ ನಡುವೆ ಸಮನ್ವಯವನ್ನು ಹೆಚ್ಚಿಸಲಾಗಿದೆ.
- ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಕ್ರಮೇಣ ಚೇತರಿಕೆ ಕಾಣುತ್ತಿವೆ.
- ಗಡಿ ಭದ್ರತೆಯಲ್ಲಿ ಸಾಂಪ್ರದಾಯಿಕ ಕಣ್ಗಾವಲು ಪದ್ಧತಿಯ ಬದಲಿಗೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಗಡಿ ನಿಯಂತ್ರಣ ರೇಖೆಯ (ಎಲ್​ಒಸಿ) ಉದ್ದಕ್ಕೂ ಲೇಸರ್ ಆಧಾರಿತ ಕಾಂಪ್ರಹೆನ್ಸಿವ್ ಇಂಟಿಗ್ರೇಟೆಡ್ ಬಾರ್ಡರ್ ಮ್ಯಾನೇಜ್​ವೆುಂಟ್ ಸಿಸ್ಟಮ್ ಅಳವಡಿಸಲಾಗಿದೆ. ಇದು ಕತ್ತಲಲ್ಲಿ ಅಥವಾ ಮಂಜಿನಲ್ಲೂ ನುಸುಳುವಿಕೆಯನ್ನು ಪತ್ತೆ ಮಾಡುತ್ತದೆ.
- ದಿನದ 24 ಗಂಟೆಯೂ ಗಡಿಯ ಮೇಲೆ ನಿಗಾ ಇಡಲು ಸ್ವದೇಶಿ ನಿರ್ವಿುತ ಮಧ್ಯಮ ಎತ್ತರದ ‘ಲಾಂಗ್ ಎಂಡ್ಯೂರೆನ್ಸ್’ ಡ್ರೋನ್​ಗಳನ್ನು ಬಳಸಲಾಗುತ್ತಿದೆ. ಈ ಹಿಂದೆ ಭಾರತವು ದಾಳಿ ನಡೆದ ನಂತರ ಪ್ರತಿಕ್ರಿಯಿಸುತ್ತಿತ್ತು. ಆದರೆ ಆಪರೇಷನ್ ಸಿಂಧೂರದ ನಂತರ ಉಗ್ರರು ಗಡಿ ದಾಟುವ ಮೊದಲೇ ಅವರ ಉಡಾವಣಾ ಕೇಂದ್ರಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸುವ ಅಧಿಕಾರವನ್ನು ಸ್ಥಳೀಯ ಕಮಾಂಡರ್​ಗಳಿಗೆ ನೀಡಲಾಗಿದೆ.
- ಸ್ಥಳೀಯ ಪೊಲೀಸರು, ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ನಡುವೆ ತ್ವರಿತ ಮಾಹಿತಿ ವಿನಿಮಯಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಬಲಗೊಂಡಿದೆ. ಗಡಿ ಹಳ್ಳಿಗಳಲ್ಲಿನ ನಾಗರಿಕರ ಭದ್ರತೆಗೆ ಆದ್ಯತೆ ನೀಡಲಾಗಿದೆ. ಗಡಿ ಭಾಗದ ಹಳ್ಳಿಗಳಲ್ಲಿ ಗ್ರಾಮ ರಕ್ಷಣಾ ಗುಂಪುಗಳನ್ನು ಬಲವರ್ಧನೆಗೊಳಿಸಿ, ಅವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಇದರಿಂದ ಉಗ್ರರು ಹಳ್ಳಿಗಳಿಗೆ ನುಗ್ಗಿದಾಗ ಸೇನೆ ಬರುವ ಮೊದಲೇ ಜನರು ಪ್ರತಿರೋಧ ಒಡ್ಡಲು ಸಾಧ್ಯವಾಗುತ್ತದೆ.
- ಸೇನಾ ಚಲನವಲನವನ್ನು ವೇಗಗೊಳಿಸಲು ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಹತ್ತಾರು ಸುರಂಗ ಮಾರ್ಗಗಳು ಮತ್ತು ಸರ್ವಋತು ರಸ್ತೆಗಳನ್ನು ನಿರ್ವಿುಸಲಾಗಿದೆ. ಇದು ಕಠಿಣ ಹವಾಮಾನದಲ್ಲೂ ಸೇನೆಗೆ ಅಗತ್ಯ ಶಸ್ತ್ರಾಸ್ತ್ರ ಪೂರೈಸಲು ಸಹಕಾರಿಯಾಗಿದೆ.

ಕಾರ್ಯಾಚರಣೆಯ ಹಂತಗಳು

2025ರ ಮೇ 7-8 (ಮಧ್ಯರಾತ್ರಿ): ಭಾರತೀಯ ಸೇನೆ ಮತ್ತು ವಾಯುಪಡೆ ಜಂಟಿಯಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಏಕಕಾಲದಲ್ಲಿ ದಾಳಿ ನಡೆಸಿದವು. ಒಟ್ಟು 9 ಪ್ರಮುಖ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಗುರಿಯಾಗಿಸಲಾಯಿತು. ಇದರಲ್ಲಿ ಲಷ್ಕರ್-ಎ-ತೊಯ್ಬಾ (ಎಲ್​ಇಟಿ), ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಶಿಬಿರಗಳು ಸೇರಿದ್ದವು. ಈ ದಾಳಿಯು ಕೇವಲ ಗಡಿ ನಿಯಂತ್ರಣ ರೇಖೆಗೆ (ಎಲ್​ಒಸಿ) ಸೀಮಿತವಾಗದೆ, ಪಾಕಿಸ್ತಾನದ ಒಳಗಿನ ಬಹಾವಲ್ಪುರ್ ಮತ್ತು ಮುರಿದ್ಕೆಯಂತಹ ಸ್ಥಳಗಳ ಮೇಲೂ ನಡೆಯಿತು.
ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನಗಳು ಸ್ಕಾಲ್ಪ್ ಮಿಸೈಲ್​ಗಳನ್ನು ಬಳಸಿ ಕೇವಲ 23 ನಿಮಿಷಗಳಲ್ಲಿ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದವು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು ಮತ್ತು ಅವರ ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡವು. ಭಾರತದ ಯಾವುದೇ ಸೇನಾ ಆಸ್ತಿಗೆ ಅಥವಾ ಯೋಧರಿಗೆ ಹಾನಿಯಾಗಲಿಲ್ಲ.
ಮೇ 8: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ರಾತ್ರಿ ಇಡೀ ನಿಗಾ ಇಟ್ಟಿದ್ದರು. ದಾಳಿಯ ಕುರಿತು ಇಂಚಿಂಚೂ ಮಾಹಿತಿಯನ್ನು ಮೋದಿ ಪಡೆದುಕೊಂಡರು. ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಧಾನಿಗೆ ನಿರಂತರ ಮಾಹಿತಿ ಒದಗಿಸಿದರು.
ಮೇ 9: ಭಾರತ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟ ಭಯೋತ್ಪಾದಕರ ಅಂತ್ಯಸಂಸ್ಕಾರದಲ್ಲಿ ಪಾಕ್ ಸೇನೆಯ ಅಧಿಕಾರಿಗಳು ಭಾಗವಹಿಸುವ ಮೂಲಕ, ಅವರ ‘ಉಗ್ರಸ್ನೇಹ ನೀತಿ’ ಮತ್ತೊಮ್ಮೆ ಬಯಲಾಯಿತು.
ಮೇ 9: ಪಾಕಿಸ್ತಾನದ ನಾಲ್ಕು ಏರ್ ಡಿಫೆನ್ಸ್ ಪ್ರದೇಶಗಳ ಮೇಲೆ ಭಾರತೀಯ ವಾಯುಪಡೆಯಿಂದ ದಾಳಿ. ರಾವಲ್ಪಿಂಡಿ ನಗರದಲ್ಲೂ ತೀವ್ರ ಹಾನಿ.
ಮೇ 10: ಇನ್ನು ಮುಂದೆ ಭಾರತದ ನೆಲದಲ್ಲಿ ನಡೆಯುವ ಯಾವುದೇ ಭಯೋತ್ಪಾದನೆ ಚಟುವಟಿಕೆಯನ್ನು ‘ಯುದ್ಧಕೃತ್ಯ’ವೆಂದು ಪರಿಗಣಿಸಲು ಹಾಗೂ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ ನಿರ್ಧಾರ. ಈ ನಿರ್ಧಾರವು ಭವಿಷ್ಯದ ಯಾವುದೇ ಭಯೋತ್ಪಾದನಾ ಕೃತ್ಯಗಳಿಗೆ ಭಾರತದ ದೃಢ ಪ್ರತಿಕ್ರಿಯೆಯನ್ನು ಅಧಿಕೃತಗೊಳಿಸಿದೆ.
ಮೇ 12: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ‘ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ, ಇದು ಭಾರತದ ನ್ಯಾಯದ ಸಂಕೇತ’ ಎಂದು ಘೊಷಿಸಿದರು.
ಈ ಹಿಂದೆ ನಡೆದ ಸರ್ಜಿಕಲ್ ಸ್ಟ್ರೈಕ್​ಗಿಂತಲೂ ಆಪರೇಷನ್ ಸಿಂಧೂರ ಭಿನ್ನವಾಗಿತ್ತು. ಏಕೆಂದರೆ, ಪಾಕಿಸ್ತಾನದ ಒಳಗಿನ ಪ್ರಮುಖ ನಗರಗಳ ಬಳಿ ಇರುವ ಉಗ್ರ ನೆಲೆಗಳನ್ನು ಭಾರತ ಧ್ವಂಸಗೊಳಿಸಿತ್ತು. ಇದು ಭಯೋತ್ಪಾದನೆ ವಿರುದ್ಧ ಭಾರತದ ‘ಶೂನ್ಯ ಸಹನೆ’ ನೀತಿಯನ್ನು ಜಗತ್ತಿಗೆ ಸಾರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net