ಪಂಜಾಬ್ ಟಿಕೆಟ್ ಹಂಚಿಕೆ ಸಮಿತಿಗೆ ಯುಪಿ ಸಂಸದನ ನೇಮಕ! ಕಿಶೋರಿ ಲಾಲ್ ಶರ್ಮಾ ರಾಜೀವ್​ ಗಾಂಧಿಗಾಗಿ ಏನ್​ ಮಾಡಿದ್ರು ಗೊತ್ತಾ? | Kishori Lal Sharma

ಪಂಜಾಬ್ ಟಿಕೆಟ್ ಹಂಚಿಕೆ ಸಮಿತಿಗೆ ಯುಪಿ ಸಂಸದನ ನೇಮಕ! ಕಿಶೋರಿ ಲಾಲ್ ಶರ್ಮಾ ರಾಜೀವ್​ ಗಾಂಧಿಗಾಗಿ ಏನ್​ ಮಾಡಿದ್ರು ಗೊತ್ತಾ? | Kishori Lal Sharma
Published on: 

ನವದೆಹಲಿ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷ ರಚಿಸಿರುವ 42 ಸದಸ್ಯರ ಪ್ರದೇಶ ಚುನಾವಣಾ ಸಮಿತಿಯಲ್ಲಿ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ (Kishori Lal Sharma) ಅವರಿಗೆ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಸಮಿತಿಯಲ್ಲಿರುವ 41 ನಾಯಕರು ಪಂಜಾಬ್ ರಾಜ್ಯ ರಾಜಕಾರಣದಲ್ಲೇ ಬೆಳೆದವರಾಗಿದ್ದರೆ, 42ನೇ ಸದಸ್ಯರಾದ ಕಿಶೋರಿ ಲಾಲ್ ಶರ್ಮಾ ಅವರು ಉತ್ತರ ಪ್ರದೇಶದ ಅಮೇಥಿಯ ಸಂಸದರಾಗಿದ್ದಾರೆ. 1983ರಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ಕೆಲಸ ಮಾಡಲು ಲುಧಿಯಾನ ಬಿಟ್ಟು ಬಂದ ಶರ್ಮಾ, ದಶಕಗಳಿಂದ ಗಾಂಧಿ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದಾರೆ. ವಿಶೇಷವೆಂದರೆ, ಇಂದಿಗೂ ಅವರ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಲುಧಿಯಾನದಲ್ಲೇ ಇದೆ.

ಬುಧವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರಮುಖ ಸಮಿತಿಯನ್ನು ಪ್ರಕಟಿಸಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ಪರ್ಗತ್ ಸಿಂಗ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರತಿಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಹಿರಿಯ ನಾಯಕಿ ಅಂಬಿಕಾ ಸೋನಿ ಸೇರಿದಂತೆ ಪ್ರಮುಖರು ಇದರಲ್ಲಿದ್ದಾರೆ. ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲಟ್ ಅವರು ಪದನಿಮಿತ್ತ ಸದಸ್ಯರಾಗಿದ್ದಾರೆ.

Also Read
ಮೋದಿ-ಷಾ ಅಂದೇ ಜೈಲಿಗೆ ಹೋಗಬೇಕಿತ್ತು, ಆದ್ರೆ ನಮ್ಮವರೇ ಅಡ್ಡಗಾಲು ಹಾಕಿದ್ರು: ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೊಸ ಬಾಂಬ್! | Veerappa Moily
ಪಂಜಾಬ್ ಟಿಕೆಟ್ ಹಂಚಿಕೆ ಸಮಿತಿಗೆ ಯುಪಿ ಸಂಸದನ ನೇಮಕ! ಕಿಶೋರಿ ಲಾಲ್ ಶರ್ಮಾ ರಾಜೀವ್​ ಗಾಂಧಿಗಾಗಿ ಏನ್​ ಮಾಡಿದ್ರು ಗೊತ್ತಾ? | Kishori Lal Sharma

ಕಿಶೋರಿ ಲಾಲ್ ಶರ್ಮಾ ನೇಮಕದ ಮಹತ್ವವೇನು?

66 ವರ್ಷದ ಕಿಶೋರಿ ಲಾಲ್ ಶರ್ಮಾ ಮೂಲತಃ ಲುಧಿಯಾನದವರು. ಆರ್ಯ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು, 1983ರಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ಅಮೇಥಿಗೆ ತೆರಳಿದ್ದರು. ಬಳಿಕ ಗಾಂಧಿ ಕುಟುಂಬದ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಪಕ್ಷದ ಸಂಘಟನಾ ಜವಾಬ್ದಾರಿ ನಿರ್ವಹಿಸಿ, ಸೋನಿಯಾ ಗಾಂಧಿ ಅವರ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಬದಲಿಗೆ ಅಮೇಥಿಯಿಂದ ಕಣಕ್ಕಿಳಿದ ಶರ್ಮಾ, ಅಂದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 1.6 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ನಾನು ಪಕ್ಷದ ಅಥವಾ ಗಾಂಧಿ ಕುಟುಂಬದ ಸೇವಕನಲ್ಲ, ಒಬ್ಬ ಸ್ವಯಂಸೇವಕ ಮತ್ತು ನಿಷ್ಠಾವಂತ ಕಾರ್ಯಕರ್ತ ಎಂದು ಅವರು ತಮ್ಮ ನಿಷ್ಠೆಯನ್ನು ಸ್ಪಷ್ಟಪಡಿಸಿದ್ದರು.

ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ತೀವ್ರವಾಗಿರುವ ಬಣ ರಾಜಕೀಯವನ್ನು ಹತ್ತಿಕ್ಕಲು ಗಾಂಧಿ ಕುಟುಂಬ ಹರಸಾಹಸ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಪಂಜಾಬ್ ಮೂಲದವರೇ ಆಗಿರುವ, ಗಾಂಧಿ ಕುಟುಂಬದ ಅತ್ಯಂತ ನಂಬಿಕಸ್ಥರಾದ ಶರ್ಮಾ ಅವರನ್ನು ಸಮಿತಿಗೆ ಸೇರಿಸಿರುವುದು ಹೈಕಮಾಂಡ್‌ನ ಸಮನ್ವಯದ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ.

ಬಣ ರಾಜಕೀಯಕ್ಕೆ ಸಮಿತಿಗಳೇ ಪರಿಹಾರವೇ?

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಈ ಸಮಿತಿ ಮೊದಲ ಹಂತವಾಗಿದೆ. ಇದು ಶಿಫಾರಸು ಮಾಡುವ ಹೆಸರುಗಳನ್ನು ಎಐಸಿಸಿ ನೇಮಿಸಿದ ಸ್ಕ್ರೀನಿಂಗ್ ಕಮಿಟಿ ಪರಿಶೀಲಿಸಿ, ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಈಗಾಗಲೇ 70ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಘೋಷಿಸಿದ್ದು, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿ ಮಾತುಕತೆಯಲ್ಲಿ ತೊಡಗಿವೆ.

ಇತ್ತ ಪಂಜಾಬ್ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಮಾಜಿ ಅಧ್ಯಕ್ಷ ರಾಜಾ ವಾರಿಂಗ್ ನಡುವಿನ ನಾಯಕತ್ವದ ತಿಕ್ಕಾಟ ಇನ್ನೂ ತಣ್ಣಗಾಗಿಲ್ಲ. ಈ ಹಿಂದೆ ಭಿನ್ನಾಭಿಪ್ರಾಯ ಶಮನಕ್ಕೆ ನೇಮಕವಾಗಿದ್ದ ಭೂಪೇಶ್ ಬಘೇಲ್ ಅವರೇ ಬಣ ರಾಜಕೀಯದ ಭಾಗವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ, ಸೆಪ್ಟೆಂಬರ್‌ನಲ್ಲಿ ಅವರ ಬದಲಿಗೆ ಸಚಿನ್ ಪೈಲಟ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ಅಕ್ಟೋಬರ್ 2ರಂದು ರಾಜಾ ವಾರಿಂಗ್ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ಅವರನ್ನು ನೇಮಿಸಲಾಯಿತು. ಆದರೂ, ಇತ್ತೀಚೆಗೆ ಚನ್ನಿ ನೇತೃತ್ವದ ಪ್ರಚಾರ ಸಭೆಗೆ ವಾರಿಂಗ್ ಗೈರಾಗುವ ಮೂಲಕ ಅಸಮಾಧಾನ ಇನ್ನೂ ಜೀವಂತವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಬಣಗಳನ್ನು ತೃಪ್ತಿಪಡಿಸಲು ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಲ್, ಚಂಡೀಗಢ ಸಂಸದ ಮನೀಶ್ ತಿವಾರಿ ಸೇರಿದಂತೆ ಪಂಜಾಬ್‌ನ ಎಲ್ಲಾ ಏಳು ಕಾಂಗ್ರೆಸ್ ಲೋಕಸಭಾ ಸಂಸದರು, ಜುಲೈನಲ್ಲಿ ರಚಿಸಲಾದ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಮೂವರು ಕಾರ್ಯಾಧ್ಯಕ್ಷರಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ, ಇತರ ಪಕ್ಷಗಳಿಂದ ಬರುವ ನಾಯಕರ ಸೇರ್ಪಡೆಯಿಂದ ಪಕ್ಷದಲ್ಲಿ ಹೊಸದಾಗಿ ಭಿನ್ನಮತ ಸ್ಫೋಟಗೊಳ್ಳದಂತೆ ತಡೆಯಲು ಹೈಕಮಾಂಡ್ ಪ್ರತ್ಯೇಕವಾಗಿ ನಾಲ್ವರು ಸದಸ್ಯರ ಸಮಿತಿಯನ್ನೂ ರಚಿಸಿದೆ. ಒಟ್ಟಿನಲ್ಲಿ, ಎಲ್ಲಾ ನಾಯಕರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಲು ಕಾಂಗ್ರೆಸ್ ಮುಂದಾಗಿದೆ(ಏಜೆನ್ಸೀಸ್​).