ಬೆಂಗಳೂರು: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ನಡೆಯುತ್ತಿದ್ದ ತನಿಖೆಗೆ ಕಾಂಗ್ರೆಸ್ ಪಕ್ಷದೊಳಗಿನ ಕೆಲವು ನಾಯಕರೇ ತಡೆಯೊಡ್ಡಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ (Veerappa Moily) ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ. ಅಂದು ಮಾಡಿದ ಆ ತಪ್ಪಿನಿಂದಾಗಿ ನಾವು ಇಂದು ಅನುಭವಿಸುತ್ತಿದ್ದೇವೆ ಎಂದು ಮೊಯ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೊಯ್ಲಿ, 2009ರಿಂದ 2011ರವರೆಗೆ ತಾವು ಕೇಂದ್ರ ಕಾನೂನು ಸಚಿವರಾಗಿದ್ದ ಅವಧಿಯ ಘಟನೆಗಳನ್ನು ಸ್ಮರಿಸಿದರು. ವಿಶೇಷವಾಗಿ ಅಂದಿನ ಗುಜರಾತ್ ಗೃಹ ಸಚಿವ ಅಮಿತ್ ಷಾ ಅವರ ಹೆಸರು ಕೇಳಿಬಂದಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆಯನ್ನು ಸಹ ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೊಯ್ಲಿ, ಆ ಸಂದರ್ಭದಲ್ಲಿ ನಾನು ಕೇಂದ್ರ ಕಾನೂನು ಸಚಿವನಾಗಿದ್ದೆ. ಆಗ ಸರಿಯಾದ ಕ್ರಮ ಕೈಗೊಂಡಿದ್ದರೆ ಅಮಿತ್ ಷಾ ಇಂದು ಕೇಂದ್ರ ಗೃಹ ಸಚಿವರಾಗುತ್ತಿರಲಿಲ್ಲ. ನ್ಯಾಯಾಲಯವು ಅವರನ್ನು ಗುಜರಾತ್ನಿಂದ ಗಡಿಪಾರು ಮಾಡಿತ್ತು ಮತ್ತು ಅವರ ವಿರುದ್ಧದ ಪ್ರಕರಣ ಬೇರೆ ರಾಜ್ಯದಲ್ಲಿ ನಡೆಯಬೇಕಿತ್ತು. ಜೈಲಿಗೆ ಹೋದ ಮೊದಲ ಪ್ರಭಾವಿ ನಾಯಕ ಅವರಾಗಿದ್ದರು. ಅದಾದ ಬಳಿಕ ನರೇಂದ್ರ ಮೋದಿ ಅವರೇ ಜೈಲಿಗೆ ಹೋಗಬೇಕಿತ್ತು ಮತ್ತು ಅವರನ್ನೂ ಕೂಡ ಗಡಿಪಾರು ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಈ ಕುರಿತಾಗಿ ಯಾವುದೇ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ನರೇಂದ್ರ ಮೋದಿ ವಿರುದ್ಧದ ತನಿಖೆಯನ್ನು ಯುಪಿಎ ಸರ್ಕಾರದಲ್ಲಿದ್ದವರೇ ತಡೆದರು ಎಂದು ಆರೋಪಿಸಿದ ಮೊಯ್ಲಿ, ಇವು ನಮ್ಮ ಪಕ್ಷದೊಳಗಿನ ದುರಂತಗಳು. ಮೋದಿ ವಿರುದ್ಧದ ವಿಚಾರಣೆ ಮತ್ತು ತನಿಖೆಯನ್ನು ನಮ್ಮದೇ ಸರ್ಕಾರ ತಡೆಹಿಡಿಯಿತು. ಇದಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾರಣರಲ್ಲ, ಪಕ್ಷದ ಇತರ ಕೆಲವು ನಾಯಕರು ಇದಕ್ಕೆ ಕಾರಣರಾಗಿದ್ದರು. ಅದರ ಪರಿಣಾಮವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂದು ಮೊಯ್ಲಿ ಹೇಳಿದರು.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಸ್ತಾಪಿಸಲಾಗಿದ್ದ ಸುಧಾರಣೆಗಳಿಗೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸದೆ ಇದ್ದಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯಬಹುದಿತ್ತು ಎಂದೂ ಮೊಯ್ಲಿ ಅಭಿಪ್ರಾಯಪಟ್ಟರು.
ಭವಿಷ್ಯದ ರಾಜಕೀಯ ಸವಾಲುಗಳನ್ನು ಎದುರಿಸಲು ಪಕ್ಷಕ್ಕೆ ಹೊಸ ರೂಪುರೇಷೆ ಸಿದ್ಧಪಡಿಸಲು ಸೋನಿಯಾ ಗಾಂಧಿ ಅವರು ತಮ್ಮ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು ಮತ್ತು ಪಕ್ಷದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಉತ್ಸುಕರಾಗಿದ್ದರು ಎಂದು ಮೊಯ್ಲಿ ನೆನಪಿಸಿಕೊಂಡರು. ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಸೋನಿಯಾ ಬಯಸಿದ್ದರೂ, ಯಥಾಸ್ಥಿತಿಯಿಂದ ಹೊರಬರಲು ಇಷ್ಟಪಡದ ಕೆಲವು ನಾಯಕರು ಅದಕ್ಕೆ ಅಡ್ಡಿಪಡಿಸಿದರು ಎಂದು ಮೊಯ್ಲಿ ಆರೋಪಿಸಿದರು.
ನಮ್ಮ ಕೆಲವು ನಾಯಕರ ಬಗ್ಗೆ ನಿಮಗೆ ತಿಳಿದಿದೆ. ಅವರು ಯಥಾಸ್ಥಿತಿಯಿಂದ ಒಂದು ಹೆಜ್ಜೆಯನ್ನೂ ಮುಂದಿಡಲು ಸಿದ್ಧರಿರಲಿಲ್ಲ. ನಾನು ಆ ನಾಯಕರ ಹೆಸರನ್ನು ಹೇಳಲು ಬಯಸುವುದಿಲ್ಲ. ಸೂಚಿಸಲಾದ ಬದಲಾವಣೆಗಳನ್ನು ಜಾರಿಗೆ ತರುವುದು ಕಷ್ಟ ಎಂದು ಅವರು ಹೇಳಿದರು. ಅಂತಿಮವಾಗಿ ಆ ವಿರೋಧಗಳಿಂದಾಗಿ ಆ ಪ್ರಕ್ರಿಯೆಯನ್ನೇ ಕೈಬಿಡಲಾಯಿತು. ಒಂದು ವೇಳೆ ಆ ಬದಲಾವಣೆಗಳನ್ನು ಜಾರಿಗೆ ತಂದಿದ್ದರೆ, ಇಂದು ಮೋದಿ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇರುತ್ತಿರಲಿಲ್ಲ ಎಂದು ಮೊಯ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ನು ಜಾರಿಗೆ ತರಲು ಹಿಂಜರಿಯಬಾರದು, ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ಶತ್ರುಗಳು ಬಂದು ನಮ್ಮನ್ನು ಮುಗಿಸಲು ಅವಕಾಶ ಮಾಡಿಕೊಟ್ಟಂತೆ ಎಂದು ಅವರು ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು(ಏಜೆನ್ಸೀಸ್).