

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಳಗೆ ಬಿಕ್ಕಟ್ಟು (National Conference Revolt) ಸೃಷ್ಟಿಯಾಗಿದ್ದು, ಪಕ್ಷೇತರರು ಸೇರಿದಂತೆ 19 ಶಾಸಕರು ಶ್ರೀನಗರದಲ್ಲಿ ನಾಲ್ಕು ಗಂಟೆಗಳ ಕಾಲ ರಹಸ್ಯ ಸಭೆ ನಡೆಸಿರುವುದು ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಡಳಿತ ವೈಖರಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯಿಂದ ಕಂಗೆಟ್ಟು ಹೋಗಿರುವ ಎನ್ಸಿ ಹಿರಿಯ ನಾಯಕರು ತಕ್ಷಣವೇ ಎಚ್ಚೆತ್ತುಕೊಂಡು ಅಸಮಾಧಾನ ತಣಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಗುರುವಾರ (ಅಕ್ಟೋಬರ್ 29) ಶ್ರೀನಗರದಲ್ಲಿರುವ ಲೋಲಾಬ್ ಕ್ಷೇತ್ರದ ಶಾಸಕ ಕೈಸರ್ ಜಮ್ಶೀದ್ ಲೋನ್ ಅವರ ನಿವಾಸದಲ್ಲಿ ಒಟ್ಟು 19 ಶಾಸಕರು ಸಭೆ ನಡೆಸಿದರು. ಈ ಸಭೆಯಲ್ಲಿ ಕೇವಲ ಕಾಶ್ಮೀರ ಮಾತ್ರವಲ್ಲದೆ ಜಮ್ಮು ಮತ್ತು ಪೀರ್ ಪಂಜಾಲ್ ಪ್ರದೇಶದ ಶಾಸಕರೂ ಭಾಗವಹಿಸಿದ್ದರು.
ಸಚಿವ ಸಂಪುಟ ಪುನಾರಚನೆ: ಎರಡು ವರ್ಷಗಳನ್ನು ಪೂರೈಸಿರುವ ಎಲ್ಲಾ ನಾಲ್ಕು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು.
ದಚಿಗಾಂವ್ ಘೋಷಣೆ ಅನುಷ್ಠಾನ: ಪಕ್ಷವು ಒಪ್ಪಿಕೊಂಡಿರುವ ದಚಿಗಾಂವ್ ಘೋಷಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಇದು ಉಲ್ಲಂಘನೆಯಾಗಿದೆ ಎಂಬ ಆರೋಪವಿದೆ.
ಸಲಹೆಗಾರರ ವಜಾ: ಮುಖ್ಯಮಂತ್ರಿ ರಾಜಕೀಯ ಸಲಹೆಗಾರರು ಮತ್ತು ಪ್ರಮುಖ ಪದಾಧಿಕಾರಿಗಳನ್ನು (ಶೌಕತ್ ಅಹ್ಮದ್ ಮಿರ್ ಮತ್ತು ಶಮ್ಮಿ ಒಬೆರಾಯ್) ಕೂಡಲೇ ಹುದ್ದೆಯಿಂದ ಕೆಳಗಿಳಿಸಬೇಕು. ಕಾಶ್ಮೀರದ ಪ್ರಾಂತೀಯ ಅಧ್ಯಕ್ಷರು ಸಿಎಂ ಒಮರ್ ಅಬ್ದುಲ್ಲಾ ಅವರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಪೀರ್ ಪಂಜಾಲ್ ಪ್ರದೇಶದ ಶಾಸಕರು ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅನುದಾನವನ್ನು ಕೇವಲ ಅವರ ಸ್ವಂತ ಕ್ಷೇತ್ರಕ್ಕೆ ಮಾತ್ರ ಬಳಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.
ಶಾಸಕರ ಸಭೆಯ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ದೆಹಲಿಯಿಂದ ತಮ್ಮ ಆಪ್ತ ಸಹಾಯಕನನ್ನು ಶಾಸಕರ ಬಳಿಗೆ ಕಳುಹಿಸಿ ಮಾತುಕತೆಗೆ ಯತ್ನಿಸಿದರು. ಆದರೆ, ನಾಯಕನ ಆಪ್ತರ ಜತೆ ಮಾತನಾಡಲು ನಿರಾಕರಿಸಿದ ಬಂಡಾಯ ಶಾಸಕರು, ನಾವು ನೇರವಾಗಿ ಮುಖ್ಯಮಂತ್ರಿಯವರೊಂದಿಗೇ ಮಾತನಾಡುತ್ತೇವೆ ಎಂದು ಪಟ್ಟು ಹಿಡಿದರು. ಇದು ಎನ್ಸಿ ನಾಯಕರಿಗೆ ತಲೆ ನೋವು ತಂದಿದೆ.
ಪಕ್ಷದೊಳಗಿನ ಬಿಕ್ಕಟ್ಟನ್ನು ಶಮನಗೊಳಿಸಲು ರಾಷ್ಟ್ರೀಯ ಅಧ್ಯಕ್ಷ ಡಾ. ಫರೂಕ್ ಅಬ್ದುಲ್ಲಾ ಸ್ವತಃ ಹಲವಾರು ಬಂಡಾಯ ಶಾಸಕರೊಂದಿಗೆ ಮಾತನಾಡಿದ್ದಾರೆ. ಒಂದೂವರೆ ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಲಾಗುವುದು ಮತ್ತು ಈ ಹಿಂದೆ ಅವಕಾಶ ಸಿಗದವರಿಗೆ ಆಗ ಸಚಿವ ಸ್ಥಾನ ನೀಡಲಾಗುವುದು ಎಂದು ಅವರು ಪ್ರಸ್ತಾಪ ಮುಂದೊಡ್ಡಿದರು. ಆದರೆ, ಈ ಪ್ರಸ್ತಾವನೆಯನ್ನು ಬಂಡಾಯ ಶಾಸಕರು ಸಾರಾಸಗಟಾಗಿ ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.
ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಎನ್ಸಿ ಪ್ರಾಂತೀಯ ಅಧ್ಯಕ್ಷ ಶೌಕತ್ ಅಹ್ಮದ್ ಮಿರ್, ಶಾಸಕರ ಭೋಜನ ಕೂಟವು ಸಾಮಾನ್ಯ ಸಭೆಯಾಗಿದ್ದು, ಇದರಲ್ಲಿ ಯಾವುದೇ ಬಂಡಾಯವಿಲ್ಲ ಎಂದಿದ್ದಾರೆ. ಸಚಿವ ಜಾವೀದ್ ಅಹ್ಮದ್ ರಾಣಾ ಮಾತನಾಡಿ, ಶಾಸಕರು ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲರ ಕುಂದುಕೊರತೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.
ಈ ಬಂಡಾಯದ ಗುಂಪಿನಲ್ಲಿ ಹನ್ಸಿನ್ ಮಸೂದಿ, ಮುಬಾರಕ್ ಗುಲ್, ಬಶೀರ್ ಅಹ್ಮದ್ ವೀರಿ ಸೇರಿದಂತೆ ಪ್ರಮುಖ ಶಾಸಕರು ಭಾಗಿಯಾಗಿದ್ದಾರೆ. ತಾವು ಯಾವುದೇ ಕಾರಣಕ್ಕೂ ಬಿಜೆಪಿಯ ಬೆಂಬಲ ಪಡೆಯುವುದಿಲ್ಲ ಮತ್ತು ಪಕ್ಷದ ಚೌಕಟ್ಟಿನೊಳಗೆಯೇ ತಮ್ಮ ಹಕ್ಕುಗಳಿಗಾಗಿ ಹೋರಾಡುವುದಾಗಿ ಶಾಸಕರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಎನ್ಸಿ ಸರ್ಕಾರವು ಆಂತರಿಕ ಭಿನ್ನಮತದ ಬಿರುಗಾಳಿಗೆ ಸಿಲುಕಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್).