ಲೋಕಸಭಾ ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ

ಲೋಕಸಭಾ ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ
ಲೋಕಸಭಾ ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ
Published on
ಲೋಕಸಭೆಯ ಬಜೆಟ್ ಅಧಿವೇಶನ ಈ ಬಾರಿ ಕೋಲಾಹಲದಿಂದಲೇ ಸುದ್ದಿಯಲ್ಲಿದೆ. ‘ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸದನದಲ್ಲಿ ಅಹಿತಕರ ಘಟನೆ ನಡೆಯಬಹುದಿತ್ತು. ಮಹಿಳಾ ಸಂಸದರು ಪ್ರಧಾನಿ ಆಸನಕ್ಕೆ ಮುತ್ತಿಗೆ ಹಾಕಿದ್ದರು. ಹಾಗಾಗಿ, ಸದನಕ್ಕೆ ಬರದಂತೆ ಪ್ರಧಾನಿಯವರನ್ನು ವಿನಂತಿಸಿದೆ’ ಎಂದು ಸ್ಪೀಕರ್ ಓಂ ಬಿರ್ಲಾ ಸ್ಪೋಟಕ ಹೇಳಿಕೆ ನೀಡುತ್ತಿದ್ದಂತೆ, ರಾಜಕೀಯ ಚಕಮಕಿ ತೀವ್ರಗೊಂಡಿತು. ಈ ಕುರಿತಾದ ವಿಡಿಯೋವನ್ನು ಸಚಿವ ಕಿರಣ್ ರಿಜಿಜು ಬಿಡುಗಡೆಗೊಳಿಸಿದ್ದು, ಪ್ರತಿಪಕ್ಷಗಳನ್ನು ಮತ್ತಷ್ಟು ಕೆರಳಿಸಿತು. ವಿಪಕ್ಷ ನಾಯಕರ ಮಾತಿಗೆ ಅವಕಾಶ ನೀಡುತ್ತಿಲ್ಲ, ಸಂಸದರ ಮೂಲ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಪ್ರತಿಪಕ್ಷಗಳು ಮಂಗಳವಾರ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ, ನೋಟಿಸ್ ಜಾರಿ ಮಾಡಿವೆ. ಲೋಕಸಭೆ ಕಲಾಪ ನಡೆಸುವಲ್ಲಿ ಬಿರ್ಲಾ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹ.
ಓಂ ಬಿರ್ಲಾ ಎರಡನೇ ಅವಧಿಗೆ ಲೋಕಸಭಾ ಅಧ್ಯಕ್ಷರಾದವರು. 2019ರ ಜೂನ್​ನಿಂದ 2024ರವರೆಗೆ ಯಶಸ್ವಿಯಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ ಓಂ ಬಿರ್ಲಾ ಅವರ ಸಂಸದೀಯ ವ್ಯವಹಾರಗಳ ಜ್ಞಾನವನ್ನು ಗೌರವಿಸಿಯೇ ಅವರನ್ನು ಎರಡನೇ ಅವಧಿಗೆ 2024ರ ಜೂನ್ 26ರಂದು ಆಯ್ಕೆ ಮಾಡಲಾಯಿತು. ಎರಡನೇ ಅವಧಿಯಲ್ಲೂ ಲೋಕಸಭೆಯ ಕಲಾಪವನ್ನು ಸುಗಮವಾಗಿ ನಡೆಸಲು ಸರಣಿ ಸಭೆಗಳನ್ನು ನಡೆಸಿರುವ ಓಂ ಬಿರ್ಲಾ, ಪ್ರತಿಪಕ್ಷ ನಾಯಕರ ಬೇಡಿಕೆ ಮತ್ತು ಮನವಿಗಳಿಗೆ ಕಿವಿಯಾಗಿದ್ದಾರೆ. ಆದರೆ, ಈ ಬಾರಿ ರಾಹುಲ್ ಗಾಂಧಿ ಭಾಷಣಕ್ಕೆ ಅವಕಾಶ ನೀಡದಿರುವುದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಪ್ರತಿಪಕ್ಷಗಳು ಓಂ ಬಿರ್ಲಾ ಪದಚ್ಯುತಿಗೆ ಮುಂದಾಗಿವೆ.

ಸ್ಪೀಕರ್ ಅಧಿಕಾರ ಕಳೆದುಕೊಳ್ಳುತ್ತಾರಾ?

ಬಿಜೆಪಿ ನೇತೃತ್ವದ ಎನ್​ಡಿಎ ಬಳಿ ಸ್ಪಷ್ಟವಾದ ಬಹುಮತವಿದೆ. ಹೀಗಾಗಿ, ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾದರೂ, ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಮುಖ್ಯವಾಗಿ, ಕಾಂಗ್ರೆಸ್​ಗೆ ಇತರ ಪ್ರತಿಪಕ್ಷಗಳ ಬೆಂಬಲ ಸಿಗುತ್ತಿಲ್ಲ. ಬಿರ್ಲಾ ಪದಚ್ಯುತಿಯ ಬಗ್ಗೆ ಪ್ರತಿಪಕ್ಷಗಳಲ್ಲೇ ಭಿನ್ನ ಅಭಿಪ್ರಾಯಗಳಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರಸ್ತುತ 99 ಸದಸ್ಯರನ್ನು ಹೊಂದಿದೆ. ಒಂದು ವೇಳೆ ಐಎನ್​ಡಿಐಎ ಒಕ್ಕೂಟದ ಎಲ್ಲ ಮಿತ್ರಪಕ್ಷಗಳು ಬೆಂಬಲ ನೀಡಿದರೂ, ಆ ಸಂಖ್ಯಾಬಲ 235ಕ್ಕೆ ತಲುಪುತ್ತದೆ. ಆದರೆ, ಸ್ಪೀಕರ್ ಪದಚ್ಯುತಿಗೆ ಬೇಕಾದ 272 ಸಂಖ್ಯಾಬಲವನ್ನು ಕಾಂಗ್ರೆಸ್ ಸೇರಿದಂತೆ ಐನ್​ಡಿಐಎ ಒಕ್ಕೂಟ ತಲುಪುವುದಿಲ್ಲ.

ವಿಫಲ ಯತ್ನ

ಬಹುಮತ ಇಲ್ಲದಿದ್ದರೂ ಈ ಹಿಂದೆಯೂ ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಪದಚ್ಯುತಿಗೆ ಪ್ರಯತ್ನಿಸಿದ ನಿದರ್ಶನಗಳಿವೆ. ಆದರೆ, ಈ ಹಿಂದೆ ನಡೆದ ಮೂರೂ ಪ್ರಯತ್ನಗಳಲ್ಲಿ ಒಂದು ಬಾರಿಯೂ ಸ್ಪೀಕರ್ ಪದಚ್ಯುತಗೊಂಡಿಲ್ಲ. ಈಗ ನಾಲ್ಕನೇ ಬಾರಿಯೂ ಹಾಗೇ ಆಗಲಿದೆ ಎನ್ನುತ್ತಾರೆ ರಾಜಕೀಯ ಪರಿಣತರು. ಸೋಲು ಖಚಿತವಾಗಿದ್ದರೂ, ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷಗಳು ಮಂಡಿಸುತ್ತವೆ. ಏಕೆಂದರೆ, ಸ್ಪೀಕರ್ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಪ್ರತಿಪಕ್ಷಗಳು ದೇಶವನ್ನು, ಸಂಸದೀಯ ಮೌಲ್ಯವನ್ನು ರಕ್ಷಿಸಲು ಬಯಸುತ್ತಿವೆ ಎಂಬ ಸ್ಪಷ್ಟ ಸಂದೇಶವನ್ನು ದೇಶಕ್ಕೆ ರವಾನಿಸುವುದು. ಸೂಕ್ತ ಸಂಖ್ಯಾಬಲ ಇಲ್ಲದಿದ್ದರೂ ‘ಅನ್ಯಾಯ’ದ ವಿರುದ್ಧ ದನಿಎತ್ತುವ ಪ್ರಯತ್ನವಿದು ಎಂದು ಪ್ರತಿಪಕ್ಷಗಳು ಬಿಂಬಿಸುತ್ತವೆ. ಒಂದು ವೇಳೆ, ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆದರೆ, ಅದರಲ್ಲಿ ಸೋಲು ಅನುಭವಿಸಿದರೂ, ಪ್ರತಿಪಕ್ಷಗಳಿಗೆ ಅದ್ಭುತ ರಾಜಕೀಯ ಗೆಲುವೇ ಹೌದು. ‘ಸ್ಪೀಕರ್ ಸರ್ಕಾರದ ಪರವಾಗಿ ಇದ್ದಾರೆ, ಪ್ರತಿಪಕ್ಷ ನಾಯಕರನ್ನು ಮಾತನಾಡಲು ಬಿಡುತ್ತಿಲ್ಲ’ ಎಂಬ ಸಂಕಥನ ಸೃಷ್ಟಿಸಲು ಯಶಸ್ವಿಯಾಗುತ್ತಾರೆ.

ಕೈಗೆ ಸವಾಲು

ಈ ಬಾರಿ ಕಾಂಗ್ರೆಸ್ ಪಾಲಿಗೆ ಮತ್ತು ಐಎನ್​ಡಿಐಎ ಒಕ್ಕೂಟದ ಒಗ್ಗಟ್ಟಿಗೆ ನಿಜಕ್ಕೂ ಅಗ್ನಿಪರೀಕ್ಷೆ. ಏಕೆಂದರೆ, ಕಾಂಗ್ರೆಸ್ ಸ್ಪೀಕರ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಇತರ ಪ್ರತಿಪಕ್ಷಗಳು ಬೆಂಬಲ ನೀಡಿಲ್ಲ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಈ ವಿಷಯದಲ್ಲಿ ಕಾಂಗ್ರೆಸ್​ಗೆ ಇನ್ನೂ ಬೆಂಬಲ ಘೋಷಿಸಿಲ್ಲ. ಈ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿರುವುದು, ಈ ಎರಡೂ ಪಕ್ಷಗಳ ಸಂಬಂಧ ಬಿಗಡಾಯಿಸಿದೆ ಎಂಬುದಕ್ಕೆ ಸಾಕ್ಷಿ. ಈ ಹಿಂದೆಯೂ, ಹಲವು ಪ್ರಮುಖ ವಿಷಯಗಳಲ್ಲಿ ಟಿಎಂಸಿ ಸಂಸತ್ತಿನಲ್ಲಿ ಐಎನ್​ಡಿಐಎ ಒಕ್ಕೂಟಕ್ಕೆ ಬೆಂಬಲ ನೀಡಿಲ್ಲ.
ಲೋಕಸಭೆಯಲ್ಲಿ ಟಿಎಂಸಿಯ 29 ಸಂಸದರಿದ್ದಾರೆ. ಒಂದುವೇಳೆ, ಟಿಎಂಸಿ ಮನಸ್ಸು ಬದಲಾಯಿಸಿ ಬೆಂಬಲ ನೀಡಿದರೂ ಪದಚ್ಯುತಿ ನಿರ್ಣಯ ಅಂಗೀಕಾರವಾಗುವಷ್ಟು ಸಂಖ್ಯಾಬಲ ಐಎನ್​ಡಿಐಎ ಒಕ್ಕೂಟದ ಬಳಿ ಇಲ್ಲ. ಸದ್ಯದ ಮಟ್ಟಿಗೆ ಕಾಂಗ್ರೆಸ್​ಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಶರದ್ ಪವಾರ್ ಬಣದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಮತ್ತು ತೇಜಸ್ವಿ ಯಾದವ್ ಸಾರಥ್ಯದ ರಾಷ್ಟ್ರೀಯ ಜನತಾ ದಳ ಪಕ್ಷಗಳು ಬೆಂಬಲ ಸೂಚಿಸಿವೆ. ಇನ್ನಷ್ಟು ಪಕ್ಷಗಳ ಬೆಂಬಲ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.

ಸ್ಪೀಕರ್ ಪದಚ್ಯುತಿಗೆ ಈ ಹಿಂದೆ ನಡೆದ ಯತ್ನಗಳು

ಮೊದಲ ಸಂದರ್ಭ

ಅವಿಶ್ವಾಸ ನಿರ್ಣಯ ಮಂಡನೆ 1954ರ ಡಿಸೆಂಬರ್ 18
ಅವಿಶ್ವಾಸ ನಿರ್ಣಯ ಮಂಡಿಸಿದವರು ಎಂ ವಿಘ್ನೇಶ್ವರ (ಸೋಶಲಿಸ್ಟ್ ಪಾರ್ಟಿ)
ಯಾರ ವಿರುದ್ಧ ಮಂಡನೆ?
ಜಿ.ವಿ.ಮಾವಲಂಕರ್
ಫಲಿತಾಂಶ ತಿರಸ್ಕೃತ
ಎರಡನೇ ಸಂದರ್ಭ
ಪದಚ್ಯುತಿ ನಿರ್ಣಯ ಮಂಡನೆ
1966ರ ನವೆಂಬರ್ 24
ನಿರ್ಣಯ ಮಂಡಿಸಿದವರು - ಮಧು ಲಿಮಯೆ (ಸಮಾಜವಾದಿ ನಾಯಕ)
ಯಾರ ವಿರುದ್ಧ ಮಂಡನೆ?
ಹುಕುಮ್ ಸಿಂಗ್
ಫಲಿತಾಂಶ ತಿರಸ್ಕೃತ
ಮೂರನೇ ಸಂದರ್ಭ
ನಿರ್ಣಯ ಮಂಡನೆ
1987ರ ಏಪ್ರಿಲ್ 15
ನಿರ್ಣಯ ಮಂಡಿಸಿದವರು
ಸೋಮನಾಥ ಚಟರ್ಜಿ
ಯಾರ ವಿರುದ್ಧ ಮಂಡನೆ?
ಬಲರಾಮ್ ಜಾಖಡ್ (ಸಿಪಿಐ (ಎಂ) ನಾಯಕ)

ಪ್ರಕ್ರಿಯೆ ಹೀಗಿದೆ

ಸಂವಿಧಾನದ ಆರ್ಟಿಕಲ್ 94 (ಸಿ) ಪ್ರಕಾರ ಲೋಕಸಭೆಯ ಸದಸ್ಯರು ಸ್ಪೀಕರ್ ವಿರುದ್ಧ ಅವಿಶ್ವಾಸ ಅಥವಾ ಪದಚ್ಯುತಿ ನಿರ್ಣಯ ಮಂಡಿಸಿ, ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬಹುದು. ಸಂವಿಧಾನದಲ್ಲಿ ಇದನ್ನು Resolution of Removal ಎಂದು ಕರೆಯಲಾಗುತ್ತದೆ. ಈ ನಿರ್ಣಯ ಬಹುಮತದಿಂದ ಅಂಗೀಕರಿಸಲಾಗುತ್ತದೆ. ಬಹುಮತ ಇಲ್ಲದಿದ್ದರೆ ನಿರ್ಣಯ ಸೋಲು ಅನುಭವಿಸುತ್ತದೆ.
- ಅವಿಶ್ವಾಸ ನಿರ್ಣಯದ ನೋಟಿಸ್ ನೀಡಲು ಕನಿಷ್ಠ 50 ಸಂಸದರ ಸಹಿ ಅಗತ್ಯ.
- ಪದಚ್ಯುತಿ ನಿರ್ಣಯದ ನೋಟಿಸ್​ನ್ನು ಕನಿಷ್ಠ 14 ದಿನ ಮುಂಚೆ ನೀಡುವುದು ಕಡ್ಡಾಯ.
- ಸಾಮಾನ್ಯವಾಗಿ, ನೋಟಿಸ್​ನ್ನು ಲೋಕಸಭೆಯ ಸಚಿವಾಲಯದಲ್ಲಿ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗುತ್ತದೆ.
- ನೋಟಿಸ್ ನಿಯಮಾನುಸಾರ ಇದೆಯೋ, ಇಲ್ಲವೋ ಎಂಬುದನ್ನು ಲೋಕಸಭೆ ಸಚಿವಾಲಯ ಪರಿಶೀಲಿಸುತ್ತದೆ. ಅಗತ್ಯ 50 ಸಂಸದರ ಸಹಿ ಒಳಗೊಂಡಿದೆಯೋ ಇಲ್ಲವೋ ಎಂಬುದನ್ನು ಪರಾಮಶಿಸಲಾಗುತ್ತದೆ.
- ನಿಯಮಗಳ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ನೋಟಿಸ್ ಸ್ವೀಕರಿಸಲಾಗುತ್ತದೆ.
- ನೋಟಿಸ್ ಸ್ವೀಕರಿಸಿದ ಮೇಲೆ ಇದರ ಸೂಚನೆಯನ್ನು ಲೋಕಸಭೆಗೆ ನೀಡಲಾಗುತ್ತದೆ ಮತ್ತು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸಲು ದಿನಾಂಕ ನಿಗದಿ ಪಡಿಸಲಾಗುತ್ತದೆ.
- ಈ ನಿರ್ಣಯ ಚರ್ಚೆಗೆ ಬರುವ ದಿನದಂದು ಸ್ಪೀಕರ್ ಸದನದ ಅಧ್ಯಕ್ಷತೆ ವಹಿಸುವುದಿಲ್ಲ. ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಅಥವಾ ಸದನದಿಂದ ನಿಯೋಜಿ ಸಲ್ಪಟ್ಟ ಹಿರಿಯ ಸದಸ್ಯ ಕಲಾಪವನ್ನು ನಡೆಸುತ್ತಾರೆ.
- ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಸದಸ್ಯ ಚರ್ಚೆಯಲ್ಲಿ ಮೊದಲು ಮಾತನಾಡುತ್ತಾರೆ. ಇದಾದ ಬಳಿಕ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸಂಸದರು ತಮ್ಮ ನಿಲುವುಗಳನ್ನು ಮಂಡಿಸುತ್ತಾರೆ.
- ಕಲಾಪದಲ್ಲಿ ಭಾಗವಹಿಸುವ, ತಮ್ಮ ಅಭಿಪ್ರಾಯ ಮಂಡಿಸುವ ಹಾಗೂ ಸ್ಪಷ್ಟನೆ ನೀಡುವ ಅಧಿಕಾರ ಸ್ಪೀಕರ್​ಗಿದೆ. ಚರ್ಚೆಯ ದಿನ ಅವರು ಕಲಾಪದಲ್ಲಿ ಭಾಗವಹಿಸಬಹುದೆ ಹೊರತು ಸದನದ ಅಧ್ಯಕ್ಷತೆ ವಹಿಸುವಂತಿಲ್ಲ.
- ಚರ್ಚೆ ಪೂರ್ಣಗೊಂಡ ನಂತರ ಮತಕ್ಕೆ ಹಾಕಲಾಗುತ್ತದೆ. ಲೋಕಸಭೆಯ ಅರ್ಧಕ್ಕಿಂತಲೂ ಹೆಚ್ಚು ಸಂಸದರ ಮತದಿಂದ ಅವಿಶ್ವಾಸ ನಿರ್ಣಯ ಅಂಗೀಕಾರವಾಗುತ್ತದೆ. ಈ ಸಂಖ್ಯಾಬಲ ಇಲ್ಲದಿದ್ದರೆ ನಿರ್ಣಯಕ್ಕೆ ಸೋಲು ಉಂಟಾಗಿ ಸ್ಪೀಕರ್ ಅದೇ ಸ್ಥಾನದಲ್ಲಿ ಮುಂದುವರಿಯುತ್ತಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಪದಚ್ಯುತಿ ನಿರ್ಣಯ ಅಂಗೀಕಾರವಾಗಬೇಕಾದರೆ 272 ಮತಗಳು ಅವಶ್ಯ. ನಿರ್ಣಯ ಅಂಗೀಕಾರವಾದರೆ ಸ್ಪೀಕರ್ ಕೂಡಲೇ ಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ ಮತ್ತು ಹೊಸ ಸ್ಪೀಕರ್ ಆಯ್ಕೆ ಆರಂಭವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net