20 ವರ್ಷಗಳ ಆಡಳಿತಕ್ಕೆ ತೆರೆ.. ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆಗೆ ಮುಹೂರ್ತ ಫಿಕ್ಸ್! | Nitish Kumar

Nitish Kumar | ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
Nitish Kumar | ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
Published on
ಪಟನಾ: ಬಿಹಾರದ ಮುಖ್ಯಮಂತ್ರಿಯಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ (Nitish Kumar), ಮಾರ್ಚ್ 30 ರಂದು ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 16 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ ಬೆನ್ನಲೆ ಇದು ಅನಿವಾರ್ಯವಾಗಿದ್ದು, ಸಂವಿಧಾನದ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದುವಂತಿಲ್ಲ.
ರಾಜ್ಯಸಭೆಗೆ ಆಯ್ಕೆಯಾದ 14 ದಿನಗಳ ಒಳಗಾಗಿ ಯಾವುದಾದರೊಂದು ಸ್ಥಾನಕ್ಕೆ ರಾಜೀನಾಮೆ ನೀಡುವುದು ಕಡ್ಡಾಯವಾಗಿರುವುದರಿಂದ, ನಿತೀಶ್ ಕುಮಾರ್ ಅವರು ಬಿಹಾರ ವಿಧಾನ ಪರಿಷತ್ತಿನ (MLC) ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸದ್ಯ ಬಿಹಾರದ ಎರಡೂ ಸದನಗಳಿಗೆ ಮಾರ್ಚ್ 29 ರವರೆಗೆ ರಜೆ ಇರುವುದರಿಂದ, ಮಾರ್ಚ್ 30 ರಂದು ಸದನಗಳು ಪುನರಾರಂಭವಾದಾಗ ಅವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ನಿತೀಶ್​, ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದರು. ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿರಂತರವಾಗಿ ನನ್ನ ಮೇಲೆ ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ಇರಿಸಿದ್ದೀರಿ. ಆ ನಂಬಿಕೆಯ ಬಲದ ಮೇಲೆ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಿತೀಶ್​ ಕುಮಾರ್​ ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಸಹ ಅನೇಕ ಸಲ ನಿಮಗೆ ನನ್ನ ಕೃತಜ್ಞತೆ ಸಲ್ಲಿಸಿದ್ದೇನೆ, ನನ್ನ ಸಂಸದೀಯ ಪ್ರಯಾಣದ ಆರಂಭದಿಂದಲೂ, ಬಿಹಾರ ವಿಧಾನಸಭೆಯ ಎರಡೂ ಸದನಗಳ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯನಾಗಬೇಕೆಂಬ ಬಯಕೆ ಮನಸ್ಸಲ್ಲಿ ಮನೆ ಮಾಡಿತ್ತು, ಅದಕ್ಕನುಗುಣವಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಮುಂದೆಯೂ ನಿಮ್ಮೊಂದಿಗಿನ ನನ್ನ ಸಂಬಂಧ ಮೊದಲಿನಂತೆ ಮುಂದುವರಿಯುತ್ತದೆ, ಬಿಹಾರ ಅಭಿವೃದ್ದಿಗಾಗಿ ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುವ ನನ್ನ ಸಂಕಲ್ಪ ದೃಢವಾಗಿರುತ್ತದೆ ಮತ್ತು ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ ಎಂದು ನಿತೀಶ್​ ಕುಮಾರ್​ ತಿಳಿಸಿದ್ದಾರೆ.
ನಿತೀಶ್ ಕುಮಾರ್ ರಾಜಕೀಯವಾಗಿ ಮತ್ತಷ್ಟು ಬಲಗೊಂಡಿದ್ದು, ಇತ್ತೀಚೆಗಷ್ಟೇ ಜನತಾದಳ ಯುನೈಟೆಡ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲಾಲನ್ ಸಿಂಗ್ ರಾಜೀನಾಮೆಯ ಬಳಿಕ ಪಕ್ಷದ ಚುಕ್ಕಾಣಿ ಹಿಡಿದಿದ್ದ ಕುಮಾರ್, ಈಗ ಅಧಿಕೃತವಾಗಿ ಅಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net