ಇದು ಬಿಜೆಪಿಯ ದುಬಾರಿ ಪ್ರಚಾರ... ಧುರಂಧರ್ 2 ಚಿತ್ರವನ್ನು ಎಲೆಕ್ಷನ್ ಅಡ್ವರ್ಟೈಸ್‌ಮೆಂಟ್ ಎಂದ ಧ್ರುವ್ ರಾಟಿ | Dhruv Rathee

Dhruv Rathee | ಧುರಂಧರ್ 2 ಚಿತ್ರವನ್ನು ಎಲೆಕ್ಷನ್ ಅಡ್ವರ್ಟೈಸ್‌ಮೆಂಟ್ ಎಂದ ಧ್ರುವ್ ರಾಟಿ
Dhruv Rathee | ಧುರಂಧರ್ 2 ಚಿತ್ರವನ್ನು ಎಲೆಕ್ಷನ್ ಅಡ್ವರ್ಟೈಸ್‌ಮೆಂಟ್ ಎಂದ ಧ್ರುವ್ ರಾಟಿ
Published on
Dhruv Rathee: ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ದಿ ರಿವೆಂಜ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಅದರ ರಾಜಕೀಯ ಆಯಾಮಗಳ ಕುರಿತು ಗಂಭೀರ ಚರ್ಚೆಗಳು ಆರಂಭವಾಗಿವೆ. ಮೊದಲ ಭಾಗದ ಬಗ್ಗೆ ಈ ಹಿಂದೆ ಟೀಕಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್​ ರಾಟಿ, ಇದೀಗ ಚಿತ್ರದ ಎರಡನೇ ಭಾಗದ ಹಿಂದಿನ ಉದ್ದೇಶಗಳ ಬಗ್ಗೆ ಕಟುವಾಗಿ ವಿಮರ್ಶಿಸಿದ್ದಾರೆ.
ಚಿತ್ರದ ಎರಡನೇ ಭಾಗವನ್ನು ವಿಶ್ಲೇಷಿಸಿ ಸುಧೀರ್ಘ ವಿಡಿಯೋ ಹಂಚಿಕೊಂಡಿರುವ ರಾಟಿ, ಈ ಚಿತ್ರವು ಕೇವಲ ಮನರಂಜನೆಗಾಗಿ ನಿರ್ಮಿತವಾದದ್ದಲ್ಲ, ಬದಲಿಗೆ ಇದು ಬಿಜೆಪಿಯ ಅತ್ಯಂತ ದುಬಾರಿ ಚುನಾವಣಾ ಜಾಹೀರಾತಿನಂತಿದೆ. ಪ್ರೇಕ್ಷಕರು 500 ರೂಪಾಯಿ ಪಾವತಿಸಿ ಈ ರಾಜಕೀಯ ಪ್ರಚಾರವನ್ನು ವೀಕ್ಷಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಚಿತ್ರದ ನಿರ್ದೇಶಕರನ್ನು ಮಹಾ ಚಾತುಕರ್ ಎಂದು ಕರೆದಿರುವ ರಾಟಿ, ಚಿತ್ರವು ಸತ್ಯ ಮತ್ತು ಕಲ್ಪನೆಯ ನಡುವಿನ ರೇಖೆಯನ್ನು ಮಸುಕುಗೊಳಿಸುವ ಮೂಲಕ ಪ್ರೇಕ್ಷಕರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನರೇಂದ್ರ ಮೋದಿಯವರ ನೈಜ ದೃಶ್ಯಗಳು ಮತ್ತು ದಾವೂದ್ ಇಬ್ರಾಹಿಂನಂತಹ ನೈಜ ಹೆಸರುಗಳನ್ನು ಬಳಸಿಕೊಂಡು, ನಂತರ ಇದು ಕೇವಲ ಕಾಲ್ಪನಿಕ ಎಂದು ಹೇಳುವುದು ಒಂದು ಕಾನೂನು ಚೀಟ್ ಕೋಡ್ ಇದ್ದಂತೆ ಎಂದಿದ್ದಾರೆ.
ಚಿತ್ರದ ಭಾವನಾತ್ಮಕ ನಿರೂಪಣೆಯನ್ನು ಎಮೋಷನಲ್​ ಪ್ರೈಮಿಂಗ್ ಎಂದು ಕರೆದಿರುವ ರಾಟಿ, ಪ್ರೇಕ್ಷಕರನ್ನು ಮೊದಲು ಭಾವನಾತ್ಮಕವಾಗಿ ಪ್ರಚೋದಿಸಿ, ಅದಾದ ಬಳಿಕ ತಮಗೆ ಬೇಕಾದ ರಾಜಕೀಯ ಸಂದೇಶವನ್ನು ತಲುಪಿಸುವ ತಂತ್ರವನ್ನು ನಿರ್ದೇಶಕರು ಬಳಸಿದ್ದಾರೆ ಎಂದು ಟೀಕಿಸಿದ್ದಾರೆ. ಯಾರಾದರೂ ಖಾರವಾದ ಮೆಣಸಿನಕಾಯಿ ತಿನ್ನಿಸಿ ನಂತರ ಸಿಹಿ ತಿನ್ನಲು ಪ್ರೇರೇಪಿಸುವ ಕ್ರಿಯೆಗೆ ಇದು ಹೋಲುತ್ತದೆ ಎಂದು ಹೇಳಿದ್ದಾರೆ.
ಇದಷ್ಟೆ ಅಲ್ಲದೆ, ಚಿತ್ರದಲ್ಲಿ ಖಳನಾಯಕರು ಭಾರತದ ನಾಯಕತ್ವವನ್ನು ಹೊಗಳುವ ದೃಶ್ಯಗಳನ್ನು ರಾಟಿ ವಿಶೇಷವಾಗಿ ಪ್ರಶ್ನಿಸಿದ್ದು, ನಾಯಕ ತನ್ನನ್ನು ತಾನು ಹೊಗಳಿಕೊಳ್ಳುವುದಕ್ಕಿಂತ, ದೊಡ್ಡ ಖಳನಾಯಕನೇ ನಾಯಕನನ್ನು ಹೊಗಳಿದಾಗ ಅದು ಪ್ರೇಕ್ಷಕರ ಮೇಲೆ ಮಾನಸಿಕವಾಗಿ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ವಿಶ್ಲೇಷಿಸಿದ್ದಾರೆ. 2016 ರ ನೋಟು ರದ್ದತಿಯಂತಹ ಘಟನೆಗಳನ್ನು ಚಿತ್ರಿಸಿರುವ ರೀತಿ ಹಾಗೂ ಅತೀಕ್ ಅಹ್ಮದ್ ಹತ್ಯೆಯಂತಹ ನೈಜ ಘಟನೆಗಳನ್ನು ಚಿತ್ರದಲ್ಲಿ ವಿಭಿನ್ನವಾಗಿ ಪ್ರಸ್ತುತಪಡಿಸಿರುವುದನ್ನು ರಾಟಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net