ಜನ್ಮದಿನದಂದು ಸಾರ್ಥಕತೆ ಮೆರೆದ "ನೀತಾ ಅಂಬಾನಿ" 5,000 ಅನಾಥರ ಬದುಕಿಗೆ ಬೆಳಕಾಗಲಿರುವ ‘ಅನಂತ ಆಶ್ರಯ’ ಕ್ಕೆ ಭೂಮಿಪೂಜೆ ಸಲ್ಲಿಸಿದ ರಿಲಯನ್ಸ್ ಒಡತಿ! Nita Ambani

A scene showing Nita Ambani and Isha Ambani performing the groundbreaking ceremony for the 'Anant Ashraya' project in Karjat.
ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಕರ್ಜತ್‌ನಲ್ಲಿ ಅನಂತ ಆಶ್ರಯ ಯೋಜನೆಗೆ ಭೂಮಿಪೂಜೆ ನೆರವೇರಿಸುತ್ತಿರುವ ದೃಶ್ಯ.
Published on: 

ಮುಂಬೈ: ದೇಶದ ನಂ.1 ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ, ಸಮಾಜ ಸೇವಕಿ ನೀತಾ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ದುಬಾರಿ ಪಾರ್ಟಿ, ಸಂಭ್ರಮಾಚರಣೆಗಳ ಬದಲು ಸಮಾಜದ ನಿಸ್ಸಹಾಯಕರ ಕಣ್ಣೀರು ಒರೆಸುವ ಮಹತ್ವದ ಹೆಜ್ಜೆಯಿಟ್ಟಿದ್ದು, ಮಹಾರಾಷ್ಟ್ರದ ಕರ್ಜತ್‌ನಲ್ಲಿ ಬೃಹತ್ ಆಶ್ರಮವೊಂದಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ.

100 ಎಕರೆಯಲ್ಲಿ ತಲೆಯೆತ್ತಲಿದೆ ‘ಅನಂತ ಆಶ್ರಯ’

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರ ಜನ್ಮದಿನದ ಅಂಗವಾಗಿ, ಮುಖೇಶ್ ಅಂಬಾನಿ ಮತ್ತು ಇಡೀ ಅಂಬಾನಿ ಕುಟುಂಬ ಒಟ್ಟಾಗಿ ಕರ್ಜತ್‌ನಲ್ಲಿ ‘ನೀತಾ ಮುಕೇಶ್ ಅಂಬಾನಿ ಅನಂತ ಆಶ್ರಯ’ (Nita Mukesh Ambani Anant Ashray) ಯೋಜನೆಗೆ ಇಂದು ವಿಧ್ಯುಕ್ತವಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಇಲ್ಲಿ ಅನಾಥ ಮಕ್ಕಳು, ಆಸರೆಯಿಲ್ಲದ ಹಿರಿಯ ಜೀವಗಳು ಮತ್ತು ವಿಶೇಷ ಚೇತನರಿಗೆ ಪ್ರೀತಿಯ ಬೆಚ್ಚನೆಯ ಗೂಡನ್ನು ನಿರ್ಮಿಸಲಾಗುತ್ತಿದೆ. ಬರೋಬ್ಬರಿ 100 ಎಕರೆ ವಿಶಾಲ ಪ್ರದೇಶದಲ್ಲಿ ಈ ಬೃಹತ್ ಆವರಣ ನಿರ್ಮಾಣವಾಗಲಿದ್ದು, ಬರೋಬ್ಬರಿ 5,000 ಜನರಿಗೆ ಜೀವನಪರ್ಯಂತ ಗೌರವಯುತವಾಗಿ ನೆಲೆಸಲು ಶಾಶ್ವತ ಆಶ್ರಯ ಕಲ್ಪಿಸಲು ನೀತಾ ಅಂಬಾನಿ ಮುಂದಾಗಿದ್ದಾರೆ.

ಆಶ್ರಮದಲ್ಲಿ ಏನೆಲ್ಲಾ ಇರಲಿದೆ?

ಇಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ಕೇವಲ ಊಟ, ವಸತಿಯಷ್ಟೇ ಅಲ್ಲದೆ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು ಮತ್ತು ಅತ್ಯಾಧುನಿಕ ಆರೈಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಅನಾಥ ಮಕ್ಕಳಿಗೆ ಭವಿಷ್ಯ: ಪೋಷಕರಿಲ್ಲದ ಮಕ್ಕಳಿಗೆ ಪ್ರೀತಿ, ಉತ್ತಮ ಶಿಕ್ಷಣ ಹಾಗೂ ಬದುಕು ಕಟ್ಟಿಕೊಳ್ಳಲು ಬೇಕಾದ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಹಿರಿಯರಿಗೆ ನೆಮ್ಮದಿಯ ತಾಣ: ವೃದ್ಧಾಪ್ಯದಲ್ಲಿ ಯಾರೂ ಇಲ್ಲದೆ ಒಂಟಿಯಾದ ವೃದ್ಧ-ವೃದ್ಧೆಯರಿಗೆ ಪ್ರೀತಿಯ ಕುಟುಂಬದ ವಾತಾವರಣ, ದಿನದ 24 ಗಂಟೆಯೂ ಅತ್ಯುತ್ತಮ ವೈದ್ಯಕೀಯ ಸೇವೆ ಇರಲಿದೆ.

ವಿಶೇಷ ಚೇತನರಿಗೆ ಗೌರವ: ವಿಶೇಷ ಅಗತ್ಯವುಳ್ಳ ವ್ಯಕ್ತಿಗಳು ಯಾರ ಮೇಲೂ ಅವಲಂಬಿತರಾಗದೆ ಸ್ವಾಭಿಮಾನದಿಂದ ಬಾಳಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

Also Read
"ನನಗೆ ಯಾರೂ ಇಲ್ಲ, ನೀವೇ ಬನ್ನಿ": ಅನಾಥ ವರನ ಕರೆಗೆ ಸ್ಪಂದಿಸಿದ ಜನ; ಮದುವೆ ಮಂಟಪಕ್ಕೆ ಹರಿದುಬಂದ ನೆಟ್ಟಿಗರ ಮಹಾಪೂರ! China Orphan Wedding
A scene showing Nita Ambani and Isha Ambani performing the groundbreaking ceremony for the 'Anant Ashraya' project in Karjat.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ

ಸಾಮಾನ್ಯವಾಗಿ ಕೋಟ್ಯಧಿಪತಿಗಳ ಹುಟ್ಟುಹಬ್ಬವೆಂದರೆ ದುಬಾರಿ ಉಡುಗೊರೆಗಳು, ಲಕ್ಸುರಿ ಸಮಾರಂಭಗಳೇ ನೆನಪಾಗುತ್ತವೆ. ಆದರೆ ಅಂಬಾನಿ ಕುಟುಂಬ ಸಮಾಜದಲ್ಲಿ ತೊಂದರೆಗೆ ಸಿಲುಕಿದವರ ಬದುಕಿಗೆ ಬೆಳಕಾಗಲು ಇಂಥದ್ದೊಂದು ಬೃಹತ್ ಯೋಜನೆ ಕೈಗೆತ್ತಿಕೊಂಡಿರುವುದು ನೆಟ್ಟಿಗರ ಮನಗೆದ್ದಿದೆ.

ಭೂಮಿ ಪೂಜೆಯ ಫೋಟೋಗಳು ಹೊರಬೀಳುತ್ತಿದ್ದಂತೆ, "ಹುಟ್ಟುಹಬ್ಬವನ್ನು ಹೀಗೂ ಸಾರ್ಥಕವಾಗಿ ಆಚರಿಸಿಕೊಳ್ಳಬಹುದು ಎಂಬುದಕ್ಕೆ ಇದುವೇ ನೈಜ ಉದಾಹರಣೆ" ಎಂದು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಶ್ರಯವಿಲ್ಲದ ಜೀವಗಳಿಗೆ ನೆಮ್ಮದಿ, ನೋವಿನಲ್ಲಿರುವವರಿಗೆ ಪ್ರೀತಿ ಹಂಚುವ ಈ ‘ಅನಂತ ಆಶ್ರಯ’ ಮುಂದಿನ ದಿನಗಳಲ್ಲಿ ಸಾವಿರಾರು ಜನರ ಪಾಲಿಗೆ ಆಸರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.