ಸೂಟ್ ಬಿಟ್ಟು ಅಪ್ಪಟ ಭಾರತೀಯನಾದ ಇಸ್ರೇಲ್ ಪ್ರಧಾನಿ..ಈ ಉಡುಪಿನ ಹಿಂದಿದೆಯಾ ಬಲವಾದ ಸಂದೇಶ..? | Indian Aattire

Indian Aattire | ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Indian Aattire | ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Published on
ಟೆಲ್ ಅವಿವ್: ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವು ರಾಜಕೀಯ ಸಮೀಕರಣಗಳನ್ನೂ ಮೀರಿ ವೈಯಕ್ತಿಕ ಸ್ನೇಹದ ಹೊಸ ಎತ್ತರಕ್ಕೆ ತಲುಪಿದ್ದು, ಬುಧವಾರ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಧಾನಿ ನರೇಂದ್ರ ಮೋದಿಗಾಗಿ ಆಯೋಜಿಸಿದ್ದ ಔತಣಕೂಟಕ್ಕೆ ಭಾರತದ ಸಾಂಪ್ರದಾಯಿಕ ಉಡುಪನ್ನು (Indian Aattire) ಧರಿಸುವ ಮೂಲಕ ಮೋದಿ ಸೇರಿದಂತೆ, ಅನೇಕರನ್ನು ಅಚ್ಚರಿಗೊಳಿಸಿದ್ದಾರೆ.
ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡಿದ್ದು, ನೆತನ್ಯಾಹು ನೆಹರೂ ಜಾಕೆಟ್ ಮತ್ತು ಉದ್ದ ತೋಳಿನ ಶರ್ಟ್ ತೊಟ್ಟಿದ್ದನ್ನು ಕಾಣಬಹುದು. ಅದರೊಂದಿಗೆ ಗಾಢವಾದ ನೇವಿ ಬ್ಲೂ ಪ್ಯಾಂಟ್ ಮತ್ತು ಫಾರ್ಮಲ್ ಲೆದರ್ ಶೂಗಳನ್ನು ಸಹ ಧರಿಸಿದ್ದರು. ಇತ್ತ ಪ್ರಧಾನಿ ಮೋದಿ ಬಿಳಿ ಕುರ್ತಾ ಪೈಜಾಮ, ಗಾಢವಾದ ನೇವಿ ಬ್ಲೂ ಸ್ವೆಟರ್ ಮತ್ತು ಜಾಕೆಟ್ ಧರಿಸಿದ್ದರು.
ಈ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​​ ಹಂಚಿಕೊಂಡಿರುವ ನೆತನ್ಯಾಹು, ನಮ್ಮ ಜಂಟಿ ಭೋಜನಕ್ಕೆ ಮೊದಲು, ನಾನು ನನ್ನ ಸ್ನೇಹಿತ ಪ್ರಧಾನಿ ಮೋದಿಯವರನ್ನು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸುವ ಮೂಲಕ ಅಚ್ಚರಿಗೊಳಿಸಿದೆ ಎಂದು ಹಿಂದಿಯಲ್ಲಿ​ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಇಸ್ರೇಲ್ ಭೇಟಿ
ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಆಗಮಿಸಿದ್ದು, ಮೊದಲ ದಿನದಂದು ನೆತನ್ಯಾಹುರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಎರಡೂ ದೇಶಗಳ ನಡುವಿನ ನಾಯಕತ್ವವನ್ನು ಶ್ಲಾಘಿಸಿದರು.
ಭಾರತವು ಇಸ್ರೇಲ್‌ನ ಸಂಕಲ್ಪ, ಧೈರ್ಯ ಮತ್ತು ಸಾಧನೆಗಳನ್ನು ಸದಾ ಕಾಲ ಮೆಚ್ಚುತ್ತದೆ ಎಂದು ಹೇಳಿದರು. ಎರಡೂ ರಾಷ್ಟ್ರಗಳ ನಡುವಿನ ಐತಿಹಾಸಿಕ ಸಂಪರ್ಕವನ್ನು ನೆನಪಿಸಿಕೊಂಡ ಅವರು, ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹವು ಅನಿಶ್ಚಿತ ಜಗತ್ತಿನಲ್ಲಿ ಶಕ್ತಿಯ ಮೂಲವಾಗಿ ಉಳಿಯಬೇಕು ಎಂದು ಹೇಳಿದರು.

ಪ್ರಧಾನಿ ಮೋದಿಗೆ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್' ಗೌರವ

ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗೌರವಾರ್ಥವಾಗಿ, ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್‌ನ ಸಂಸತ್ತು (ನೆಸ್ಸೆಟ್) ಬುಧವಾರ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಮೆಡಲ್' (Speaker of the Knesset Medal) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ವಿಶ್ವದ ಮೊದಲ ವಿದೇಶಿ ನಾಯಕ ಎಂಬ ಇತಿಹಾಸವನ್ನು ಮೋದಿ ನಿರ್ಮಿಸಿದ್ದಾರೆ.
ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿಯವರ ಭಾಷಣದ ಬಳಿಕ ಸ್ಪೀಕರ್ ಅಮೀರ್ ಒಹಾನಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನೆಸ್ಸೆಟ್ ಪದಕವನ್ನು ಸ್ವೀಕರಿಸಲು ನನಗೆ ತುಂಬಾ ಗೌರವವಾಗಿದೆ. ನಾನು ಅದನ್ನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net