ದಾದಾ ಪಟ್ಟಕ್ಕೆ ವೈನಿ ಎಂಟ್ರಿ..?; ಸುನೇತ್ರಾ ಸಂಪುಟ ಸೇರ್ಪಡೆಯ ಸುಳಿವು ನೀಡಿದ ಸಚಿವ ಜಿರ್ವಾಲ್​ ಹೇಳಿದ್ದೇನು ಗೊತ್ತಾ..? | Sunetra Pawar

Sunetra Pawar | ಅಜಿತ್​ ಪವಾರ್​​ ಮತ್ತು ಪತ್ನಿ ಸುನೇತ್ರಾ ಪವಾರ್
Sunetra Pawar | ಅಜಿತ್​ ಪವಾರ್​​ ಮತ್ತು ಪತ್ನಿ ಸುನೇತ್ರಾ ಪವಾರ್
Published on
ದೆಹಲಿ: ಅಜಿತ್​ ಪವಾರ್​​ ನಿಧನದ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದ್ದು, ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಲು ಪಕ್ಷ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪಿಟಿಐ ಜೊತೆ ಮಾತನಾಡಿರುವ ಎನ್​ಸಿಪಿ ಹಿರಿಯ ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್, ಸುನೇತ್ರಾ ಪವಾರ್ ಅವರನ್ನು ರಾಜ್ಯದ ಸಂಪುಟಕ್ಕೆ ತರಬೇಕೆಂದು ಸಾರ್ವಜನಿಕರು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಧನಂಜಯ್ ಮುಂಡೆ ಮತ್ತು ಸುನಿಲ್ ತತ್ಕರೆ ಅವರು ಆಂತರಿಕ ಸಮಾಲೋಚನೆಯ ಭಾಗವಾಗಿ ಸುನೇತ್ರಾ ಪವಾರ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಅಜಿತ್ ಪವಾರ್​​ರಿಂದ ತೆರವಾದ ಬಾರಾಮತಿ ಕ್ಷೇತ್ರದಿಂದ ಸುನೇತ್ರಾ ಪವಾರ್ ಉಪಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆಯಲ್ಲಿ ಸುನೇತ್ರಾ ಪವಾರ್​​ರನ್ನು ಉಪಮುಖ್ಯಮಂತ್ರಿಯಾಗಿಯೂ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆದಿದ್ದು, ಭವಿಷ್ಯದ ಕ್ರಮಗಳ ಕುರಿತು ಚರ್ಚಿಸಲು ಎನ್‌ಸಿಪಿ ನಾಯಕರು ದೇವೇಂದ್ರ ಫಡ್ನವೀಸ್​​ರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಪಕ್ಷವನ್ನು ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮುನ್ನಡೆಸಬಹುದು ಎನ್ನಲಾಗಿದ್ದು, ಶರದ್​ ಪವಾರ್​ ಬಣದೊಂದಿಗೆ ವಿಲೀನದ ಕುರಿತಾಗಿಯೂ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.
ಇತ್ತೀಚಿನ ಪುರಸಭೆ ಚುನಾವಣೆಯ ಬಳಿಕ ಅಜಿತ್ ಪವಾರ್, ಶರದ್​ ಬಣದೊಂದಿಗೆ ತಮ್ಮ ಬಣವನ್ನು ವಿಲೀನ ಮಾಡುವ ಕುರಿತು ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಜಿರ್ವಾಲ್​, ಎರಡೂ ಬಣಗಳು ಈಗಾಗಲೇ ಒಟ್ಟಿಗೆ ಇವೆ. ಚದುರಿಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ಒಟ್ಟಿಗೆ ಇರಬೇಕಾಗುತ್ತದೆ ಎನ್ನುವ ಅನಿವಾರ್ಯತೆಯನ್ನು ಎಲ್ಲರೂ ಅರಿತುಕೊಂಡಿದ್ದಾರೆ ಎಂದು ಹೇಳಿದರು.
ಅಜಿತ್ ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ರಾಜ್ಯದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಒಂದು ಘಟಕವಾಗಿದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net