

ಲಖನೌ: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಮತ್ತು ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಪ್ರಧಾನ ಮಂತ್ರಿಯಾಗುವುದನ್ನು ನೋಡಬೇಕೆಂಬ ಆಸೆಯಿದೆ ಎಂದು ಹೇಳಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಭಾನುವಾರ(ನ. 08) ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದು, ಅವರ ಆಸೆ ಎಂದಿಗೂ ಈಡೇರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆಜ್ತಕ್ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ಕಾರ್ಯಸೂಚಿಯನ್ನು ಹೊಂದಿರದ ಓವೈಸಿ ಅವರಂತಹ ವ್ಯಕ್ತಿಗಳಿಗೆ ಉತ್ತರ ಪ್ರದೇಶದಲ್ಲಿ ಯಾವುದೇ ಸ್ಥಾನವಿಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖ್ಯಮಂತ್ರಿಯಾಗುವ ಸಾಧ್ಯತೆ ಮತ್ತು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಪ್ರಧಾನಮಂತ್ರಿಯಾಗುವ ಆಕಾಂಕ್ಷೆಗಳು ಎಂದಿಗೂ ಈಡೇರಲ್ಲ. ಮತ್ತು ಅವರು ಎಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದಾರೆ.
ಓವೈಸಿ ಅವರು ಭಾರತ ವಿರೋಧಿ, ಹಿಂದೂ ವಿರೋಧಿ ಮತ್ತು ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದ ಅಜೆಂಡಾವನ್ನು (ಕಾರ್ಯಸೂಚಿಯನ್ನು) ತರುತ್ತಾರೆ. ಇಂತಹ ಅಜೆಂಡಾವು ಭಾರತದ ಏಕತೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತದೆ. ಇದೇ ಕಾರಣಕ್ಕಾಗಿ ಒವೈಸಿ ಅವರಂತಹ ವ್ಯಕ್ತಿಗಳಿಗೆ ಉತ್ತರ ಪ್ರದೇಶದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ತಿಳಿಸಿದ್ದಾರೆ.
ಮುಂದುವರೆದು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳನ್ನು ಗುರಿಯಾಗಿಸಿಕೊಂಡು ಟೀಕಿಸಿದ ಅವರು, ವುಗಳ ರಾಜಕೀಯ ಧೋರಣೆಗಳು ಓವೈಸಿ ಅವರ ಎಐಎಂಐಎಂ ಪಕ್ಷಕ್ಕಿಂತ ಭಿನ್ನವಾಗಿಲ್ಲ. ಈ ಮೂರೂ ಪಕ್ಷಗಳಿಗೆ ಭಾರತದ ಹಿತಾಸಕ್ತಿಗಳ ಬಗ್ಗೆ ಕಾಳಜಿಯಿಲ್ಲ ಮತ್ತು ಇವು ದೇಶದ ನಂಬಿಕೆ ಹಾಗೂ ಅಸ್ಮಿತೆಯೊಂದಿಗೆ ಚೆಲ್ಲಾಟವಾಡುತ್ತಿವೆ. ಮೂರು ಪಕ್ಷಗಳ ಕಾರ್ಯಸೂಚಿಸಿ ಒಂದೇ ಆಗಿದ್ದು, ಮೂವರು ಒಗ್ಗೂಡಬೇಕು ಎಂದು ಸಲಹೆ ನೀಡಿದ್ದಾರೆ.
2027ರ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಮುಸ್ಲಿಮರಿಗೆಂದೇ ಪ್ರತ್ಯೇಕ ರಾಜಕೀಯ ಅಸ್ತಿತ್ವವಿರಬೇಕೆಂದು ಪ್ರತಿಪಾದಿಸುವ ಸಲುವಾಗಿ ಅಸಾದುದ್ದೀನ್ ಓವೈಸಿ, ಬುಧವಾರ ಮಿಚಿಗನ್ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ಎಲ್-ಸಯೀದ್ ಜಯವನ್ನು ಉಲ್ಲೇಖಿಸಿ, ಉತ್ತರ ಪ್ರದೇಶದ ಮುಸ್ಲಿಮರು ತಮ್ಮ ಸ್ವಂತ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಮಿಚಿಗನ್ನಲ್ಲಿ ಅಬ್ದುಲ್ ಸೆನೆಟರ್ ಆಗಿ ಯಶಸ್ವಿಯಾದರು. ನಾನು ಮಾತನಾಡಿದ ನಂತರ, 'ಅಬ್ದುಲ್' ಎಂಬುದು ಒಂದು ಚರ್ಚಾ ವಿಷಯವಾಯಿತಲ್ಲವೇ? ಹಿಂದೆ ಬಿಜೆಪಿಯವರು 'ಅಬ್ದುಲ್ ಪಂಕ್ಚರ್ ಹಾಕುತ್ತಾನೆ' ಎಂದು ಹೇಳುತ್ತಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಅದೇ ಅಬ್ದುಲ್ ಸೆನೆಟರ್ ಆಗಿದ್ದಾನೆ. ಈಗ, ಉತ್ತರ ಪ್ರದೇಶದ ಅಬ್ದುಲ್ ಯಾರ ಮುಂದೆಯೂ ತಲೆಬಾಗುವುದಿಲ್ಲ, ಬದಲಾಗಿ ಶಾಸಕರಾಗುತ್ತಾನೆ ಎಂದು ಹೇಳಿದ್ದರು (ಏಜೆನ್ಸೀಸ್).