

ನವದೆಹಲಿ: ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಎನ್‌ಡಿಎ ಸರ್ಕಾರ ಹೀನಾಯವಾಗಿ ಸೋಲಲಿದ್ದು, ಕೇಂದ್ರದಲ್ಲಿ ಅಧಿಕಾರ ಬದಲಾವಣೆಯಾಗಲಿದೆ ಎಂದು ಕಾಕ್ರೋಚ್ ಜನತಾ ಪಕ್ಷದ ( ಸಿಜೆಪಿ ) ಸಂಸ್ಥಾಪಕ ಅಭೀಜಿತ್ ದೀಪ್ಕೆ ( Abhijeet Dipke ) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಶನಿವಾರ ಸಿಜೆಪಿ ಹಮ್ಮಿಕೊಂಡಿದ್ದ 'ಕೊಚ್ಚಿಯಲ್ಲಿ ಜಂತರ್ ಮಂತರ್' ಅಭಿಯಾನದ ಭಾಗವಾಗಿ ಕೊಚ್ಚಿಯ ರಾಜೇಂದ್ರ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ದೀಪ್ಕೆ, ಕೇಂದ್ರದ ಎನ್‌ಡಿಎ ಸರ್ಕಾರವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ದೇಶದ ಯುವಜನರ ವಿರುದ್ಧವೇ ಯುದ್ಧ ಸಾರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ, ಸರ್ಕಾರಕ್ಕೆ ಜ್ಞಾನೇಶ್ ಕುಮಾರ್ ಅವರೇಕೆ ಇಷ್ಟೊಂದು ಪ್ರಮುಖ ವ್ಯಕ್ತಿಯಾಗಿದ್ದಾರೆ ಎಂದು ಪ್ರಶ್ನಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ಪ್ರತಿಭಟನೆಗೆ ಇಳಿದಾಗ ತಮ್ಮನ್ನು ಹಾಗೂ ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಬಂಧಿಸಿದ ಘಟನೆಯನ್ನು ಅಭೀಜಿತ್ ಸ್ಮರಿಸಿಕೊಂಡರು. "ರಾಷ್ಟ್ರಧ್ವಜವನ್ನು ಎತ್ತಿ ಹಿಡಿದಿದ್ದಕ್ಕಾಗಿ ನನ್ನನ್ನು ಹಾಗೂ ನನ್ನ ಸಹೋದರರಾದ ಸೌರವ್ ಮತ್ತು ಅಶು ಅವರನ್ನು ಜೈಲಿಗೆ ಕಳುಹಿಸಲಾಯಿತು. ಭಾರತದಲ್ಲಿ ಇಂತಹ ಘಟನೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಕೊನೆಯದಾಗಿ ನಡೆದಿತ್ತು" ಎಂದು ಹೋಲಿಕೆ ಮಾಡುತ್ತಾ, ತಾವು ದೇಶದ ಯಾವುದೇ ಭಾಗಕ್ಕೆ ಹೋದರೂ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುವುದನ್ನು ಮುಂದುವರಿಸುವುದಾಗಿ ಹೇಳಿದರು.
ಪ್ರಸ್ತುತ ಎನ್‌ಡಿಎ ಸರ್ಕಾರದ ಆಡಳಿತ ಶೈಲಿಯನ್ನು ಬ್ರಿಟಿಷರ ಆಡಳಿತಕ್ಕೆ ಹೋಲಿಸಿದ ಅವರು, ಸರ್ಕಾರವು ಸಾರ್ವಜನಿಕರ ಸ್ವಾತಂತ್ರ್ಯವನ್ನು ಹಂತ ಹಂತವಾಗಿ ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. "ನೀವು ನನ್ನನ್ನು ದೆಹಲಿ, ಮಹಾರಾಷ್ಟ್ರ, ಕೇರಳ ಅಥವಾ ತಮಿಳುನಾಡಿನಲ್ಲಿ ಎಲ್ಲಿ ಬೇಕಾದರೂ ಬಂಧಿಸಬಹುದು. ದೇಶದ ಪ್ರತಿಯೊಂದು ಮೂಲೆಯಲ್ಲೂ ನನ್ನನ್ನು ಬಂಧಿಸಿದರೂ ನಾನು ಮತ್ತೆ ಹಿಂತಿರುಗಿ ಬಂದು ರಾಷ್ಟ್ರಧ್ವಜವನ್ನು ಹಾರಿಸುತ್ತೇನೆ" ಎಂದು ಸರ್ಕಾರಕ್ಕೆ ಸವಾಲು ಎಸೆದರು.
ಕೇಂದ್ರ ಸರ್ಕಾರವು ದಿನನಿತ್ಯದ ಸಾರ್ವಜನಿಕ ಜೀವನದ ಮೇಲೂ ನಿಯಂತ್ರಣ ಸಾಧಿಸಲು ಹೊರಟಿದೆ ಎಂದು ಅವರು ಕಿಡಿಕಾರಿದರು. "ಆರಂಭದಲ್ಲಿ ಜನರು ಏನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು ಮತ್ತು ಪ್ರೀತಿಸಬೇಕು ಎಂಬುದನ್ನು ನಿಯಂತ್ರಿಸಲು ಯತ್ನಿಸಿದ ಸರ್ಕಾರ, ಈಗ ನೀವು ಯಾರಿಗೆ ಮತ ಹಾಕಬೇಕು ಎಂಬುದನ್ನೂ ನಿರ್ಧರಿಸುವ ಮಟ್ಟಕ್ಕೆ ತಲುಪಿದೆ" ಎಂದು ದೀಪ್ಕೆ ಆರೋಪಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಬಳಸಲಾಗುತ್ತಿದೆ ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದರು.
ಭಾರತ ದೇಶವು ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ಆದರ್ಶ ತತ್ವಗಳ ಮೇಲೆ ನಿರ್ಮಾಣಗೊಂಡಿದೆ ಎಂಬುದನ್ನು ದೀಪ್ಕೆ ಸ್ಮರಿಸಿದರು. ಕಳೆದೆರಡು ದಶಕಗಳಲ್ಲಿ ಅಂದರೆ 10 ರಿಂದ 12 ವರ್ಷಗಳಿಂದ ದೇಶದ ಸಾರ್ವಜನಿಕರು ಮೌನಕ್ಕೆ ಶರಣಾಗಿದ್ದರು, ಆದರೆ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯು ಜನರಿಗೆ ಮತ್ತೆ ದ್ವನಿ ಎತ್ತುವ ಶಕ್ತಿ ಹಾಗೂ ಧೈರ್ಯವನ್ನು ನೀಡಿದೆ ಎಂದು ಅಭಿಪ್ರಾಯಪಟ್ಟರು. ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸಲು ಪ್ರಾರಂಭಿಸಿರುವ ಯುವಕರನ್ನು ಸರ್ಕಾರ ಹತೋಟಿಗೆ ತರಲು ಯತ್ನಿಸುತ್ತಿದೆ ಎಂದರು.
ಹೋರಾಟದಲ್ಲಿ ನಿರತರಾಗಿರುವ ಯುವಜನರನ್ನು ಅರಾಜಕತಾವಾದಿಗಳು ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರದ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ನಾವು ಯಾವುದೇ ಕಾರಣಕ್ಕೂ ಅರಾಜಕತಾವಾದಿಗಳಲ್ಲ, ನಾವು ಅಂಬೇಡ್ಕರ್‌ವಾದಿಗಳು ಮತ್ತು ಗಾಂಧಿವಾದಿಗಳು. ನಮ್ಮನ್ನು ಅರಾಜಕತಾವಾದಿಗಳು ಎಂದು ಕರೆಯುವ ಧೈರ್ಯ ಮಾಡಬೇಡಿ" ಎಂದು ಎಚ್ಚರಿಸಿದರು. ಹಾಗೆಯೇ ಬಿಜೆಪಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದ್ದು, ಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕೊಚ್ಚಿಯ ರಾಜೇಂದ್ರ ಮೈದಾನದಲ್ಲಿ ನಡೆದ ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ವಿವಿಧ ವಯೋಮಾನದ ಸಾರ್ವಜನಿಕರು ಹಾಗೂ ಯುವ ಉದ್ಯಮಿಗಳು, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ನಾಯಕರು ಭಾಗವಹಿಸಿದ್ದರು. ಸಭೆಯ ಆರಂಭಕ್ಕೂ ಮುನ್ನ ನಟ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ಮರೀನ್ ಡ್ರೈವ್‌ನಿಂದ ರಾಜೇಂದ್ರ ಮೈದಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆಗೆ ಆಗ್ರಹಿಸಿದ ಅಭೀಜಿತ್ ದೀಪ್ಕೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, 2029ರ ಚುನಾವಣೆಯಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದರು, (ಏಜೆನ್ಸೀಸ್).