ತಿರುವನಂತಪುರಂ: ಇತ್ತೀಚೆಗಷ್ಟೇ ಕರ್ನಾಟಕದ ಬಂಕ್‌ಗಳಲ್ಲಿ ನಿಗದಿತ ಮಿತಿಗಿಂತ ಅಂದರೆ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಬೆರಸಿದ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿರುವ ಬಗ್ಗೆ ದಾಖಲೆ ಸಮೇತ ಮುಂದಿಟ್ಟ ಸಚಿವ ರಿಜ್ವಾನ್ ಅರ್ಷದ್ ಆರೋಪಗಳ ಬೆನ್ನಲ್ಲೇ ಇದೀಗ ಕೇರಳಂ ಕೂಡ ಎಚ್ಚೆತ್ತುಕೊಂಡಿದೆ.
ನಿಯಮಗಳ ಪ್ರಕಾರ, ಇ20 ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಅನ್ನು ಮಾತ್ರ ಮಿಶ್ರಣ ಮಾಡಬೇಕು. ದೇಶಾದ್ಯಂತ ಈ ಕುರಿತು ಭಾರಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಯೋಗಾಲಯ ವರದಿಯೊಂದನ್ನು ಮುಂದಿಟ್ಟು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿದರು.
ವಾಹನ ಸವಾರರಿಗೆ ಇದರಿಂದ ಅನ್ಯಾಯ ಆಗುತ್ತಿದೆ ಮತ್ತು ಅವರ ನಂಬಿಕೆಗೆ ಧಕ್ಕೆ ತರಲಾಗುತ್ತಿದೆ ಎಂಬ ರಾಜ್ಯ ಸರ್ಕಾರ ಆರೋಪಗಳನ್ನು ಗಮನಿಸಿದ ಕೇರಳ, ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಲು ಆದೇಶ ಹೊರಡಿಸಿದೆ. ಕೇರಳದ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಕಮಿಷನರ್‌ಗೆ ತಕ್ಷಣವೇ ತನಿಖೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಅನೂಪ್ ಜೇಕಬ್ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸಚಿವರು ಈ ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿದ್ದು, ಎಲ್ಲೆಲ್ಲಿ ಮತ್ತು ಎಷ್ಟೆಷ್ಟು ಪ್ರಮಾಣ ಎಥೆನಾಲ್ ಪೆಟ್ರೋಲ್‌ನಲ್ಲಿ ಬೆರೆಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಕರ್ನಾಟಕದ ಹಾದಿಯಲ್ಲೇ ಈಗ ಕೇರಳವು ರಿಯಾಲಿಟಿ ಚೆಕ್ಗೆ ಕೈಹಾಕಿದೆ.
ಸದ್ಯಕ್ಕೆ ಕೇರಳದಲ್ಲಿ ಇಂತಹ ಯಾವುದೇ ಅಕ್ರಮ ಮಿಶ್ರಣದ ಬಗ್ಗೆ ಇಲ್ಲಿಯವರೆಗೆ ವರದಿಯಾಗಿಲ್ಲವಾದರೂ, ನೆರೆ ರಾಜ್ಯ ಕರ್ನಾಟಕದಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಈ ತನಿಖೆಗೆ ಆದೇಶಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ತಿರುವನಂತಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಸೇರಿದಂತೆ ವಿವಿಧ ಜಿಲ್ಲೆಗಳ ಪೆಟ್ರೋಲ್ ಬಂಕ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ.
ನಾಗರಿಕ ಸರಬರಾಜು ಕಮಿಷನರ್‌ನಿಂದ ಹಿಡಿದು ತಾಲೂಕು ಸರಬರಾಜು ಅಧಿಕಾರಿಗಳವರೆಗೆ (TSO) ತಪಾಸಣೆ ನಡೆಸಲು ಮತ್ತು ಕಾನೂನು ಕ್ರಮ ಜರುಗಿಸಲು ಅಧಿಕಾರ ನೀಡಲಾಗಿದೆ. ಪೆಟ್ರೋಲ್‌ನಲ್ಲಿ ನಿಯಮ ಮೀರಿ ಎಥೆನಾಲ್ ಬೆರೆಸಿ ಕಳಪೆ ಇಂಧನ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅನೂಪ್ ಜೇಕಬ್ ಖಡಕ್ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).