ಫಡ್ನವೀಸ್‌, ಶಿಂಧೆಗಿಂತ ಮುಂಢೆಗೇ ಹೆಚ್ಚು ಕ್ರೇಜ್‌! Instagramನಲ್ಲಿ IAS ಅಧಿಕಾರಿ ತುಕಾರಾಮ ಮುಂಢೆ ಹೊಸ ದಾಖಲೆ! Tukaram Mundhe

ಐಎಎಸ್ ಅಧಿಕಾರಿ ತುಕಾರಾಮ ಮುಂಢೆ ಇನ್ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಐಎಎಸ್ ಅಧಿಕಾರಿ ತುಕಾರಾಮ ಮುಂಢೆ ಇನ್ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
Published on
ಮುಂಬೈ: ರಾಜ್ಯದ ರಾಜಕೀಯ ದಿಗ್ಗಜರ ಪೈಪೋಟಿ ನಡುವೆ, ಅತ್ಯಂತ ಕಟ್ಟುನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ತುಕಾರಾಮ ಮುಂಢೆ (Tukaram Mundhe) ಈಗ ಡಿಜಿಟಲ್ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹಾಗೂ ಜನರ ಜೊತೆಗಿನ ಒಡನಾಟದ ವಿಚಾರದಲ್ಲಿ ಅವರು ಮಹಾರಾಷ್ಟ್ರದ ಪ್ರಮುಖ ರಾಜಕೀಯ ನಾಯಕರಾದ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಅವರಿಗೂ ದೊಡ್ಡ ಮಟ್ಟದಲ್ಲಿ ಪೆಟ್ಟುಕೊಟ್ಟು ಮುನ್ನಡೆ ಸಾಧಿಸಿದ್ದಾರೆ.
ಇತ್ತೀಚೆಗೆ ಹೊರಬಂದಿರುವ ಅಧಿಕೃತ ಮಾಹಿತಿಯ ಪ್ರಕಾರ, ಮುಂಢೆ ಅವರ ಡಿಜಿಟಲ್ ಕ್ರೇಜ್ ಮುಗಿಲು ಮುಟ್ಟಿದೆ. ಕೇವಲ ರಾಜಕೀಯ ನಾಯಕರು ಮಾತ್ರವಲ್ಲದೆ, ಇತರೆ ಘಟಾನುಘಟಿ ಕಾನೂನು ಜಾರಿ ಅಧಿಕಾರಿಗಳಾದ ಸಮೀರ್ ವಾಂಖೆಡೆ ಮತ್ತು ವಿಶ್ವಾಸ್ ವಾಗರೆ ಪಾಟೀಲ್ ಅವರನ್ನೂ ಹಿಂದಕ್ಕಿ ಮುಂಢೆ ನಂಬರ್ ಒನ್ ಸ್ಥಾನದತ್ತ ದಾಪುಗಾಲು ಇಟ್ಟಿದ್ದಾರೆ.

ಅಂಕಿಅಂಶಗಳ ವಿವರ ಇಲ್ಲಿದೆ:

ತುಕಾರಾಂ ಮುಂಢೆ: ಇನ್‌ಸ್ಟಾಗ್ರಾಮ್ ಅನುಯಾಯಿಗಳು ಬರೋಬ್ಬರಿ 34.15 ಲಕ್ಷ ಇದ್ದರೆ, ಜನರೊಂದಿಗಿನ ಒಡನಾಟ ದರ (Engagement Rate) ಶೇ. 20.35ರಷ್ಟಿದೆ. ಅತಿ ಕಡಿಮೆ ಅಂದರೆ ಕೇವಲ 13 ಪೋಸ್ಟ್‌ಗಳನ್ನು ಹಾಕಿದರೂ ಜನರ ಪ್ರತಿಕ್ರಿಯೆ ಮಾತ್ರ ಅತಿಹೆಚ್ಚಿದೆ.
ದೇವೇಂದ್ರ ಫಡ್ನವೀಸ್: ಅನುಯಾಯಿಗಳು 29.02 ಲಕ್ಷ ಇದ್ದು, ಒಡನಾಟ ದರ ಕೇವಲ ಶೇ. 0.50ರಷ್ಟಿದೆ.
ಏಕನಾಥ್ ಶಿಂಧೆ: ಅನುಯಾಯಿಗಳು 13.01 ಲಕ್ಷ ಇದ್ದು, ಇವರ ಒಡನಾಟ ದರ ಕೇವಲ ಶೇ. 0.24ರಷ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಲು ಕಾರಣವೇನು?

ಜನಸಾಮಾನ್ಯರ ಸಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮುಂಢೆ ಯಾವುದೇ ಸಿನಿಮಾಗಳನ್ನು ಮಾಡಿಲ್ಲ ಅಥವಾ ರಾಜಕೀಯ ಭಾಷಣಗಳನ್ನು ಬಿಗಿದಿಲ್ಲ. ಬದಲಿಗೆ ಅವರ ದಿಢೀರ್ ದಾಳಿಗಳು ಮತ್ತು ರಾಜಿ ಮಾಡಿಕೊಳ್ಳದ ಕಟ್ಟುನಿಟ್ಟಿನ ಕೆಲಸದ ಶೈಲಿಯೇ ಅವರಿಗೆ ಜನಬೆಂಬಲವನ್ನು ತಂದುಕೊಟ್ಟಿದೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಕಳಪೆ ಆಹಾರ, ಕಲಬೆರಕೆ ಹಾಗೂ ಹೋಟೆಲ್‌ಗಳ ನೈರ್ಮಲ್ಯದ ವಿರುದ್ಧ ಸಮರ ಸಾರಿದ್ದಾರೆ. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು, ಜಾಗತಿಕ ಫಾಸ್ಟ್-ಫುಡ್ ಮಳಿಗೆಗಳ ಅಡುಗೆ ಮನೆಗಳಿಗೆ ನುಗ್ಗಿ ಅವರು ಮಾಡುವ ಅನಿರೀಕ್ಷಿತ ತಪಾಸಣೆಗಳ ವೀಡಿಯೊಗಳು ಈಗ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.
ಅವಧಿ ಮೀರಿದ ವಸ್ತುಗಳು, ಅಶುಚಿತ್ವ ಮತ್ತು ಕೀಟಗಳು ಪತ್ತೆಯಾದ ದೃಶ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವುದರಿಂದ ಯುವಜನತೆ ಮುಂಢೆ ಅವರ ಬೆನ್ನಿಗೆ ನಿಂತಿದೆ ಎಂದು ಹೇಳಲಾಗುತ್ತಿದೆ. ರಸ್ತೆಬದಿ ಸಿಗುವ ವಡಾ ಪಾವ್‌ ಅನ್ನು ಹಳೆ ಪತ್ರಿಕೆಗಳಲ್ಲಿ ಸುತ್ತಿ ಕೊಡುವುದನ್ನು ನಿಷೇಧಿಸುವುದು, ರಾಸಾಯನಿಕಯುಕ್ತ ನಕಲಿ ಪನೀರ್ ಮೇಲೆ ನಿಷೇಧ ಹಾಗೂ ಹೋಟೆಲ್‌ಗಳಲ್ಲಿ ಉಚಿತ ಕುಡಿಯುವ ನೀರು ಕಡ್ಡಾಯಗೊಳಿಸುವಂತಹ ಜನಪರ ಹಾಗೂ ದಿಟ್ಟ ಕ್ರಮಗಳಿಂದಾಗಿ ತುಕಾರಾಮ ಮುಂಢೆ ಇಂದು ಕೋಟ್ಯಂತರ ಜನರ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net