ಕಿರುಕುಳ ಪ್ರಶ್ನಿಸಿದ್ದೇ ತಪ್ಪಾಯ್ತಾ? ಲೈಂಗಿಕ ಕಿರುಕುಳ ವಿರೋಧಿಸಿದ್ದಕ್ಕೆ ಮಹಿಳೆಯನ್ನು ಹಳಿಗೆ ತಳ್ಳಿದ ದುರುಳ! Mumbai Local Horror

ಮಹಿಳೆಯರ ಸುರಕ್ಷತೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳದ ಘಟನೆಗಳು ನಿಲ್ಲುತ್ತಿಲ್ಲ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಕಾರಣಕ್ಕೆ ರೈಲ್ವೆ ಹಳಿಗೆ ತಳ್ಳಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲಿನ ಚಕ್ರಗಳ ಅಡಿಯಲ್ಲಿ ಸಿಲುಕಿದ ಮಹಿಳೆಯ ಎಡಗೈಯನ್ನು ಮೊಣಕೈ ಸಮೀಪದಿಂದ ಕತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.Mumbai Local Horror
ಲೈಂಗಿಕ ಕಿರುಕುಳ ವಿರೋಧಿಸಿದ್ದಕ್ಕೆ ಮಹಿಳೆಯನ್ನು ಹಳಿಗೆ ತಳ್ಳಿದ ದುರುಳ
ಲೈಂಗಿಕ ಕಿರುಕುಳ ವಿರೋಧಿಸಿದ್ದಕ್ಕೆ ಮಹಿಳೆಯನ್ನು ಹಳಿಗೆ ತಳ್ಳಿದ ದುರುಳWEB
Published on: 

ಮುಂಬೈ: ಮಹಿಳೆಯರ ಸುರಕ್ಷತೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳದ ಘಟನೆಗಳು ನಿಲ್ಲುತ್ತಿಲ್ಲ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಕಾರಣಕ್ಕೆ ರೈಲ್ವೆ ಹಳಿಗೆ ತಳ್ಳಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲಿನ ಚಕ್ರಗಳ ಅಡಿಯಲ್ಲಿ ಸಿಲುಕಿದ ಮಹಿಳೆಯ ಎಡಗೈಯನ್ನು ಮೊಣಕೈ ಸಮೀಪದಿಂದ ಕತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಪ್ರಯಾಣದ ವೇಳೆ ಆರಂಭವಾದ ಕಿರುಕುಳ

ಸಂತ್ರಸ್ತ ಮಹಿಳೆ ಬೊರಿವಲಿ ನಿಲ್ದಾಣದಿಂದ ನಾಯಗಾಂವ್‌ಗೆ ತೆರಳಲು ವಿರಾರ್‌ ಕಡೆಗೆ ಸಾಗುತ್ತಿದ್ದ ಲೋಕಲ್ ರೈಲು ಹತ್ತಿದ್ದರು. ಈ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಮಹಿಳೆ ಇದನ್ನು ವಿರೋಧಿಸಿದರೂ ಆತ ತನ್ನ ವರ್ತನೆಯನ್ನು ಮುಂದುವರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಾಯಗಾಂವ್ ನಿಲ್ದಾಣದಲ್ಲಿ ಮಹಿಳೆ ರೈಲಿನಿಂದ ಕೆಳಗಿಳಿದ ಬಳಿಕವೂ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ತನ್ನ ಚಪ್ಪಲಿಯಿಂದ ಆತನಿಗೆ ಹೊಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿದ್ದ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಆರೋಪಿ ಮಹಿಳೆಯನ್ನು ನಿಂದಿಸಿ, ತನ್ನ ಚಪ್ಪಲಿಯಿಂದಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ; ಈ ಪ್ರದೇಶದಲ್ಲಿ 2 ದಿನ ಮದ್ಯ-ಮಾಂಸ ಮಾರಾಟಕ್ಕೆ ಬ್ರೇಕ್!..PM Modi

ಆಕೆಯನ್ನು ತಳ್ಳಿ ಹಳಿಗೆ ಬೀಳಿಸಿದ ಆರೋಪಿ

ವಾಗ್ವಾದದ ಬಳಿಕ ಆರೋಪಿ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯ ಸಮೀಪಕ್ಕೆ ಬಂದು ಎರಡೂ ಕೈಗಳಿಂದ ಬಲವಾಗಿ ತಳ್ಳಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಮಹಿಳೆ ಎರಡು ರೈಲು ಬೋಗಿಗಳ ನಡುವಿನ ಅಂತರದ ಮೂಲಕ ಹಳಿಗೆ ಬಿದ್ದಿದ್ದಾರೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಹಳಿಯಿಂದ ಮತ್ತೆ ಪ್ಲಾಟ್‌ಫಾರ್ಮ್‌ಗೆ ಏರಲು ಪ್ರಯತ್ನಿಸುತ್ತಿದ್ದಾಗ ಆಕೆಯ ಎಡಗೈ ರೈಲಿನ ಚಕ್ರಗಳ ಅಡಿಯಲ್ಲಿ ಸಿಲುಕಿದೆ.

ರೈಲು ನಿಲ್ದಾಣದಿಂದ ಮುಂದೆ ಸಾಗಿದ ಬಳಿಕ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಮಹಿಳೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಆಕೆಯ ಎಡಗೈಯನ್ನು ಮೊಣಕೈ ಸಮೀಪದಿಂದ ಕತ್ತರಿಸಬೇಕಾಗಿದೆ. ತಲೆಗೂ ಗಾಯವಾಗಿದ್ದು, 16 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ.

ನನ್ನ ಇಡೀ ಜೀವನವೇ ಹಾಳಾಗಿದೆ, ನ್ಯಾಯ ಬೇಕು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ತನ್ನ ನೋವನ್ನು ಹಂಚಿಕೊಂಡಿದ್ದಾರೆ. "ನಾನು ಆ ವ್ಯಕ್ತಿಯ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದೆ. ಆದರೂ ಆತ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಚಪ್ಪಲಿಯಿಂದ ಹೊಡೆದು ಆತನನ್ನು ದೂರ ಮಾಡಲು ಪ್ರಯತ್ನಿಸಿದೆ. ಆದರೆ ಆತ ನನ್ನ ಮೇಲೆಯೇ ಹಲ್ಲೆ ಮಾಡಿ ಕೆಳಕ್ಕೆ ತಳ್ಳಿದ. ನನ್ನ ಇಡೀ ಜೀವನವೇ ಹಾಳಾಗಿದೆ. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೊಬ್ಬಳೇ ನಿಭಾಯಿಸುತ್ತಿದ್ದೆ. ಈಗ ಒಂದು ಕೈಯನ್ನು ಕಳೆದುಕೊಂಡಿದ್ದೇನೆ. ಒಂದು ಕೈಯಿಂದ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ನ್ಯಾಯ ಬೇಕು ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಕೊಲೆ ಯತ್ನದ ಸೆಕ್ಷನ್‌ಗಾಗಿ ಕುಟುಂಬದ ಒತ್ತಾಯ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರಂಭದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ 74, 117(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆರೋಪಿಯ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದರೂ ಕೊಲೆ ಯತ್ನಕ್ಕೆ ಸಂಬಂಧಿಸಿದ ಸೆಕ್ಷನ್‌ 109 ಅನ್ನು ಆರಂಭದಲ್ಲಿ ಸೇರಿಸದಿರುವ ಬಗ್ಗೆ ಸಂತ್ರಸ್ತೆಯ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ನಂತರ ಕುಟುಂಬದವರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಪ್ರತಿನಿಧಿಗಳ ಸಹಾಯ ಕೋರಿದ್ದಾರೆ. ಪಕ್ಷದ ಪ್ರತಿನಿಧಿಗಳು ಸರ್ಕಾರಿ ರೈಲ್ವೆ ಪೊಲೀಸರ ಹಿರಿಯ ಅಧಿಕಾರಿಯನ್ನು ಭೇಟಿಯಾಗಿ ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದಾರೆ. ಈ ವೇಳೆ ಸೂಕ್ತ ಕಾನೂನು ಸೆಕ್ಷನ್‌ಗಳನ್ನು ಶೀಘ್ರದಲ್ಲೇ ಸೇರಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಮಹಿಳೆಯ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ನಡೆಯುವ ಕಿರುಕುಳದ ಘಟನೆಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಸಂತ್ರಸ್ತೆಗೆ ನ್ಯಾಯ ದೊರೆಯುವುದರ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ, (ಏಜೆನ್ಸೀಸ್​).