

ಪ್ರಧಾನಿ ನರೇಂದ್ರ ಮೋದಿ ಜಿಗಣಿಗೆ ಭೇಟಿ ಹಿನ್ನೆಲೆ
ಇಂದು, ನಾಳೆ ಮದ್ಯ, ಮಾಂಸದಂಗಡಿ ಬಂದ್ ಎಲ್ಲೆಲ್ಲೆ ಸಿಗೋದಿಲ್ಲ?
ಪ್ರಶಾಂತಿ ಕುಟೀರದಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಬೆಂಗಳೂರು: ಜಿಗಣಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆ, ಈ ಪ್ರದೇಶದ ಸುತ್ತ-ಮುತ್ತ ಮಾಂಸ ಮತ್ತು ಮದ್ಯದ ಮಾರಾಟವನ್ನು ಇಂದು ಮತ್ತು ನಾಳೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೌದು, ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿರುವ ವಿವೇಕಾನಂದ ಯೋಗ ಅನುಸಂಧಾನ ಸಂಸ್ಕಾರದ ವತಿಯಿಂದ ಪ್ರಶಾಂತಿ ಕುಟೀರದಲ್ಲಿ ನ.13ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿರುವ ಹಿನ್ನೆಲೆ ಈ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಂಡಿದ್ದಾರೆ.
ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮ ಹಾಗೂ ಭದ್ರತಾ ಹಿತದೃಷ್ಟಿಯಿಂದ ಜಿಗಣಿ ಹೋಬಳಿಯ ಕಲ್ಲುಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಸಂಜೆ 4 ಗಂಟೆಯವರೆಗೆ ಮಾಂಸದ ಅಂಗಡಿ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನ.12ರ ಬೆಳಿಗ್ಗೆ 6ರಿಂದ ನ.13ರ ಸಂಜೆ 4ವರೆಗೆ ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮಾಂಸ ಹಾಗೂ ಮದ್ಯ ಸಿಗುವುದಿಲ್ಲ ಎಂದ ಜಿಲ್ಲಾಧಿಕಾರಿ ಮಾಹಿತಿ ಹೊರಡಿಸಿದ್ದಾರೆ, (ಏಜೆನ್ಸೀಸ್).