ಮುಂಬೈ ಸೂಪರ್‌ ಮಾರ್ಕೆಟ್‌ನಲ್ಲಿ ದಿಢೀರ್ ಅಗ್ನಿ ದುರಂತ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿಯ ಜ್ವಾಲೆ, ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್! Goregaon Fire

ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಗೋರೆಗಾಂವ್‌ನ ಪ್ರತಿಷ್ಠಿತ ಸೂಪರ್‌ಮಾರ್ಕೆಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡರೆ, ಅಂಧೇರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಗೆ ಬಾಲಕಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ.Goregaon Fire
ಮುಂಬೈ ಸೂಪರ್‌ ಮಾರ್ಕೆಟ್‌ನಲ್ಲಿ ದಿಢೀರ್ ಅಗ್ನಿ ದುರಂತ
ಮುಂಬೈ ಸೂಪರ್‌ ಮಾರ್ಕೆಟ್‌ನಲ್ಲಿ ದಿಢೀರ್ ಅಗ್ನಿ ದುರಂತWEB
Published on: 

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಗೋರೆಗಾಂವ್‌ನ ಪ್ರತಿಷ್ಠಿತ ಸೂಪರ್‌ಮಾರ್ಕೆಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡರೆ, ಅಂಧೇರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಗೆ ಬಾಲಕಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ನೇಚರ್ಸ್ ಬಾಸ್ಕೆಟ್ ಮಳಿಗೆಯಲ್ಲಿ ಹೊತ್ತಿ ಉರಿದ ಬೆಂಕಿ

ಗೋರೆಗಾಂವ್ ಪ್ರದೇಶದ ಆದರ್ಶ್ ನಗರದಲ್ಲಿರುವ 15 ಮಹಡಿಗಳ ಸಮರ್ಥ್ ಐಶ್ವರ್ಯ ಕಟ್ಟಡದ ನೆಲಮಹಡಿಯಲ್ಲಿರುವ ನೇಚರ್ಸ್ ಬಾಸ್ಕೆಟ್ ಮಳಿಗೆಯಲ್ಲಿ ಬುಧವಾರ ಮಧ್ಯರಾತ್ರಿ ದಿಢೀರ್ ಅಗ್ನಿ ಅವಘಡ ಸಂಭವಿಸಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಜ್ವಾಲೆಗಳು ವ್ಯಾಪಿಸಿದ್ದು, ಕಟ್ಟಡದ ಸುತ್ತಮುತ್ತ ದಟ್ಟ ಕಪ್ಪು ಹೊಗೆ ಆವರಿಸಿತ್ತು. ಈ ಭಯಾನಕ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ನವೆಂಬರ್ 11ರ ಮಧ್ಯರಾತ್ರಿ 12.05ಕ್ಕೆ ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಅಗ್ನಿಶಾಮಕ ದಳಕ್ಕೆ ಈ ಕುರಿತು ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ 12.09ಕ್ಕೆ ಇದನ್ನು 'ಲೆವೆಲ್-1' ಅಗ್ನಿ ಅವಘಡ ಎಂದು ಘೋಷಿಸಿ ಕಾರ್ಯಾಚರಣೆಗೆ ಇಳಿದರು. ಅಗ್ನಿಶಾಮಕ ದಳ, ಪೊಲೀಸರು, ಆಂಬುಲೆನ್ಸ್, ವಿದ್ಯುತ್ ವಿತರಣಾ ಕಂಪನಿ ಹಾಗೂ ಬಿಎಂಸಿ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನೆಲಮಹಡಿಗೆ ಸೀಮಿತಗೊಳಿಸಲಾಯಿತು. ಇದರಿಂದ 15 ಮಹಡಿಗಳ ಕಟ್ಟಡಕ್ಕೆ ಬೆಂಕಿ ಹರಡುವುದು ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಂಧೇರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಅವಘಡ; ಬಾಲಕಿ ಸೇರಿ ಇಬ್ಬರಿಗೆ ಗಾಯ:

ಮತ್ತೊಂದೆಡೆ, ಗುರುವಾರ ಸಂಜೆ 7.35ರ ಸುಮಾರಿಗೆ ಅಂಧೇರಿ ಪೂರ್ವದ ಕಜುವಾಡಿ ಪ್ರದೇಶದ ಬೊಂಬಾರಿ ಚಾಳ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನಿಂದ ಏಕಾಏಕಿ ಫ್ಲ್ಯಾಶ್ ಫೈರ್ (ದಿಢೀರ್ ಬೆಂಕಿ) ಸಂಭವಿಸಿದೆ. ಖಂಡೇಶ್ವರ ಮಂದಿರದ ಸಮೀಪದ ನೆಲಮಹಡಿಯ ಕೊಠಡಿಯೊಂದರಲ್ಲಿ ಸಿಲಿಂಡರ್‌ದಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ : ಟಿಮ್​ ಸೀಫರ್ಟ್​ ಎದುರು ಆಕ್ರಮಣಕಾರಿಯಾಗಿ ವರ್ತಿಸಿದ ಗುರ್ನೂರ್ ಬ್ರಾರ್: ಶಾಂತಿದೂತನಾದ ಕೊಹ್ಲಿ, ಅಭಿಮಾನಿಗಳು ಅಚ್ಚರಿ! Virat Kohli

ಈ ದುರ್ಘಟನೆಯಲ್ಲಿ 35 ವರ್ಷದ ರುತಿಕಾ ಗೌಡ್ (ಶೇ. 25ರಷ್ಟು ಸುಟ್ಟ ಗಾಯ) ಹಾಗೂ 13 ವರ್ಷದ ಬಾಲಕಿ ನೇಹಾ ಗೌಡ್ (ಶೇ. 14ರಷ್ಟು ಸುಟ್ಟ ಗಾಯ) ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ಇಬ್ಬರ ಬಟ್ಟೆ ಹಾಗೂ ಅಡುಗೆಮನೆಯ ವಸ್ತುಗಳಿಗೆ ವ್ಯಾಪಿಸಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿ 8 ಗಂಟೆಯ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಗಾಯಾಳುಗಳನ್ನು ತಕ್ಷಣವೇ ಪೊಲೀಸ್ ವಾಹನದಲ್ಲಿ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.