ಮನೆಯಲ್ಲಿ 56 ಎಟಿಎಂ ಕಾರ್ಡ್ ಜಪ್ತಿ: ಸೈಬರ್ ವಂಚಕನಿಗೆ ಬ್ರೇಕ್‌ಹಾಕಿದ ಮುಂಬೈ ಕ್ರೈಂ ಬ್ರಾಂಚ್! Mumbai Crime Branch

ಆನ್‌ಲೈನ್ ವಂಚನೆ, ಗೇಮಿಂಗ್ ವಹಿವಾಟು ಹಾಗೂ ಸೈಬರ್ ಅಪರಾಧಗಳಿಗೆ ಬ್ಯಾಂಕ್ ಖಾತೆಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಜಾಲವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಹಣಕಾಸು ವಂಚನೆಗಳಿಗೆ ಬಳಸಲು ಇತರರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ, ಅವುಗಳಿಗೆ ಸಂಬಂಧಿಸಿದ ಎಟಿಎಂ ಕಾರ್ಡ್ ಹಾಗೂ ಸಿಮ್‌ಕಾರ್ಡ್‌ಗಳನ್ನು ಪೂರೈಸುತ್ತಿದ್ದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.Mumbai Crime Branch
ಸೈಬರ್ ವಂಚಕನಿಗೆ ಬ್ರೇಕ್‌ಹಾಕಿದ ಮುಂಬೈ ಕ್ರೈಂ ಬ್ರಾಂಚ್
ಸೈಬರ್ ವಂಚಕನಿಗೆ ಬ್ರೇಕ್‌ಹಾಕಿದ ಮುಂಬೈ ಕ್ರೈಂ ಬ್ರಾಂಚ್WEB
Published on: 

ಮುಂಬೈ: ಆನ್‌ಲೈನ್ ವಂಚನೆ, ಗೇಮಿಂಗ್ ವಹಿವಾಟು ಹಾಗೂ ಸೈಬರ್ ಅಪರಾಧಗಳಿಗೆ ಬ್ಯಾಂಕ್ ಖಾತೆಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಜಾಲವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಹಣಕಾಸು ವಂಚನೆಗಳಿಗೆ ಬಳಸಲು ಇತರರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ, ಅವುಗಳಿಗೆ ಸಂಬಂಧಿಸಿದ ಎಟಿಎಂ ಕಾರ್ಡ್ ಹಾಗೂ ಸಿಮ್‌ಕಾರ್ಡ್‌ಗಳನ್ನು ಪೂರೈಸುತ್ತಿದ್ದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಧಾರಾವಿ ನಿವಾಸಿ ವಾಸಿಂ ಜಾವೇದ್ ಖಾನ್ ಬಂಧಿತ ಆರೋಪಿ. ಈತ ಗೋವಾದ ಸಾಗರ್ ಎಂಬಾತನೊಂದಿಗೆ ಸೇರಿ ಅಕ್ರಮ ಜಾಲ ನಡೆಸುತ್ತಿದ್ದ ಆರೋಪವಿದೆ. ಖಾನ್ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಬರೋಬ್ಬರಿ 56 ಎಟಿಎಂ ಕಾರ್ಡ್‌ಗಳು, ವಿವಿಧ ಕಂಪನಿಗಳ 32 ಪ್ರತ್ಯೇಕ ಸಿಮ್‌ಕಾರ್ಡ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಚೆಕ್‌ಬುಕ್‌ಗಳು ಸೇರಿದಂತೆ ಹಲವು ದಾಖಲೆಗಳು ಸಿಕ್ಕಿವೆ. 56 ಎಟಿಎಂ ಕಾರ್ಡ್‌ಗಳ ಪೈಕಿ 23 ಕಾರ್ಡ್‌ಗಳಲ್ಲಿ ಸಿಮ್‌ಕಾರ್ಡ್‌ಗಳೂ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 14ರಂದು ರಾತ್ರಿ ಸುಮಾರು 9.30ರ ವೇಳೆಗೆ ಅಪರಾಧ ವಿಭಾಗದ ಘಟಕ 8ರ ಪೊಲೀಸರು ಖಾನ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪತ್ನಿ ರುಬಿನಾ ಜೊತೆ ಮನೆಯಲ್ಲಿದ್ದ ಆತನನ್ನು ವಶಕ್ಕೆ ಪಡೆದರು. ಪರಿಶೀಲನೆ ವೇಳೆ ಮೊಬೈಲ್ ಫೋನ್, ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳು, ಮೆಮೊರಿ ಕಾರ್ಡ್‌ಗಳು, ಚೆಕ್‌ಗಳು, ಬ್ಯಾಂಕ್ ಖಾತೆ ತೆರೆಯುವ ಅರ್ಜಿಗಳು ಹಾಗೂ ಗುರುತಿನ ಚೀಟಿಗಳ ನಕಲು ಪ್ರತಿಗಳು ಪತ್ತೆಯಾಗಿವೆ. ಬ್ಯಾಂಕ್ ಖಾತೆಗಳ ವಿವರಗಳಿದ್ದ ನೋಟ್‌ಬುಕ್ ಮತ್ತು ಡೈರಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಛತ್ ಪೂಜಾ ಸಂಭ್ರಮದಲ್ಲಿ ನಟಿ ತಮನ್ನಾ ಭಾಟಿಯಾ! ಲುಕ್​ ವೈರಲ್​|Tamannaah Bhatia

ವಿಚಾರಣೆ ವೇಳೆ ಖಾನ್ ನೀಡಿದ ಮಾಹಿತಿ ಪೊಲೀಸರ ತನಿಖೆಗೆ ಮತ್ತಷ್ಟು ಸುಳಿವು ನೀಡಿದೆ ಎನ್ನಲಾಗಿದೆ. ಗೋವಾದ ಸಾಗರ್ ಎಂಬಾತ ಪ್ರತಿ ಬ್ಯಾಂಕ್ ಖಾತೆಗೆ 25ರಿಂದ 30 ಸಾವಿರ ರೂ. ನೀಡುವ ಆಮಿಷವೊಡ್ಡಿದ್ದ ಎಂದು ಖಾನ್ ಹೇಳಿರುವುದಾಗಿ ವರದಿಯಾಗಿದೆ. ಬಳಿಕ ತನ್ನ ಪರಿಚಿತರು ಹಾಗೂ ಸ್ನೇಹಿತರ ಮೂಲಕ ಹಣದ ಆಸೆ ತೋರಿಸಿ ಬ್ಯಾಂಕ್ ಖಾತೆ ತೆರೆಯಲು ಜನರನ್ನು ಹುಡುಕುತ್ತಿದ್ದ ಎನ್ನಲಾಗಿದೆ.

ಖಾತೆ ತೆರೆಯಲು ಒಪ್ಪಿದ ವ್ಯಕ್ತಿಗಳಿಗೆ ತಲಾ 15 ಸಾವಿರ ರೂ. ನೀಡಿ, ಅವರ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ಮತ್ತು ಅದಕ್ಕೆ ಸಂಪರ್ಕ ಹೊಂದಿದ ಸಿಮ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದ. ನಂತರ ಅವುಗಳನ್ನು ಗೋವಾದಲ್ಲಿರುವ ಸಾಗರ್‌ಗೆ ಕಳುಹಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಖಾತೆಗಳನ್ನು ಆನ್‌ಲೈನ್ ವಂಚನೆ, ಗೇಮಿಂಗ್ ವಹಿವಾಟು ಹಾಗೂ ಇತರ ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿತ್ತು ಎಂಬ ಆರೋಪವಿದೆ.

ಇದಲ್ಲದೆ, ಖಾನ್ ಮೊಬೈಲ್ ಫೋನ್‌ನಲ್ಲಿ ವಿವಿಧ ಬ್ಯಾಂಕ್ ಖಾತೆಗಳ ವಿವರಗಳಿದ್ದ ಛಾಯಾಚಿತ್ರಗಳೂ ಪತ್ತೆಯಾಗಿವೆ. ಧಾರಾವಿ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಪೊಲೀಸ್ ಕಾನ್‌ಸ್ಟೆಬಲ್ ಯೋಗೇಶ್ ಶಿವಾಜಿ ಸತಾಲೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಖಾನ್ ಮತ್ತು ತಲೆಮರೆಸಿಕೊಂಡಿರುವ ಸಾಗರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಜಾಲಕ್ಕೆ ಇನ್ನೆಷ್ಟು ಮಂದಿ ಖಾತೆದಾರರು ಸಿಲುಕಿದ್ದಾರೆ? ಈ ಖಾತೆಗಳ ಮೂಲಕ ಎಷ್ಟು ಹಣದ ವಹಿವಾಟು ನಡೆದಿದೆ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.