ಮುಂಬೈ: ಬಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ನಟನೆಯಷ್ಟೇ ವಿಭಿನ್ನ ಫ್ಯಾಷನ್ ಆಯ್ಕೆಗಳಿಂದಲೂ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ಮುಂಬೈನ ಜುಹು ಕಡಲತೀರದಲ್ಲಿ ನಡೆದ ಛತ್ ಪೂಜಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಅಪ್ಪಟ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ.ಹಬ್ಬದ ಸಡಗರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದ ತಮನ್ನಾ, ತಮ್ಮ ಸರಳ ಹಾಗೂ ಆಕರ್ಷಕ ಸಾಂಪ್ರದಾಯಿಕ ನೋಟದಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ನಟಿಯ ಈ ಸುಂದರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಛತ್ ಪೂಜೆಯ ಪ್ರಯುಕ್ತ ಜುಹು ಬೀಚ್ನಲ್ಲಿ ನೆರೆದಿದ್ದ ಭಕ್ತರೊಂದಿಗೆ ತಮನ್ನಾ ಆತ್ಮೀಯವಾಗಿ ಬೆರೆತರು. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಸ್ಥಳೀಯರು ನಟಿಗೆ ಪ್ರೀತಿಯಿಂದ ಸ್ವಾಗತ ಕೋರಿದರು. ಈ ವಿಶೇಷ ಕ್ಷಣಗಳ ವಿಡಿಯೊಗಳನ್ನು ತಮನ್ನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ತಮನ್ನಾ ಆಯ್ಕೆ ಮಾಡಿಕೊಂಡಿದ್ದು ಸುಂದರವಾದ ಸಾಸಿವೆ ಹಳದಿ ಬಣ್ಣದ ಅನಾರ್ಕಲಿ ಉಡುಪನ್ನು. ಉಡುಪಿನ ಕಂಠದ ಭಾಗ, ತೋಳುಗಳು ಹಾಗೂ ಅಂಚಿನಲ್ಲಿ ಅಳವಡಿಸಿದ್ದ ಬೆಳ್ಳಿ ಮತ್ತು ಬಿಳಿ ಬಣ್ಣದ ಕಸೂತಿ ಕೆಲಸ ಅದರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಹಳದಿ ಬಣ್ಣದ ಹೊಳಪು ಮತ್ತು ಸೂಕ್ಷ್ಮ ಕಸೂತಿಯ ವಿನ್ಯಾಸ ಒಟ್ಟಾಗಿ ಅವರಿಗೆ ಸೊಗಸಾದ ಸಾಂಪ್ರದಾಯಿಕ ಲುಕ್ ನೀಡಿತ್ತು.
ಉಡುಪಿನ ಅಂದವೇ ಎದ್ದು ಕಾಣಬೇಕೆಂಬಂತೆ ನಟಿ ಆಭರಣಗಳ ಬಳಕೆಯನ್ನು ಮಿತವಾಗಿಟ್ಟಿದ್ದರು. ಕಿವಿಗೆ ಆಕರ್ಷಕವಾದ ದೊಡ್ಡ ಓಲೆಗಳನ್ನು ಧರಿಸಿದ್ದು, ಕೂದಲನ್ನು ಅಚ್ಚುಕಟ್ಟಾಗಿ ಹಿಂದಕ್ಕೆ ಕಟ್ಟಿಕೊಂಡಿದ್ದರು. ಸರಳ ಮೇಕಪ್ ಹಾಗೂ ಕಡಿಮೆ ಪರಿಕರಗಳೊಂದಿಗೆ ಹಬ್ಬದ ಸಂಭ್ರಮಕ್ಕೆ ತಕ್ಕಂತೆ ಸಾಂಪ್ರದಾಯಿಕ ಸೌಂದರ್ಯದಲ್ಲಿ ಮಿಂಚಿದರು.
ಛತ್ ಪೂಜೆಯ ಸಂಭ್ರಮದ ವಿಡಿಯೊಗಳನ್ನು ಹಂಚಿಕೊಂಡಿರುವ ತಮನ್ನಾ, ಜನರಿಂದ ದೊರೆತ ಪ್ರೀತಿ ಮತ್ತು ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿಯ ಆಶೀರ್ವಾದ ಮತ್ತು ನಿಮ್ಮೆಲ್ಲರ ಪ್ರೀತಿ ಸದಾ ಇರಲಿ. ಛತ್ ಮೈಯಾ ಕೃಪೆ ಎಲ್ಲರ ಮೇಲೂ ಇರಲಿ. ಛತ್ ಮೈಯಾ ಕೀ ಜೈ ಎಂದು ಬರೆದುಕೊಂಡಿದ್ದಾರೆ.
ಇನ್ನು ತಮ್ಮದೇ ಊರಾದ ಮುಂಬೈನಲ್ಲಿ ಇಷ್ಟೊಂದು ಜನರೊಂದಿಗೆ ಛತ್ ಪೂಜೆಯನ್ನು ಆಚರಿಸಿದ್ದು ವಿಶೇಷ ಸಂತಸ ತಂದಿದೆ ಎಂದು ತಮನ್ನಾ ಹೇಳಿದ್ದಾರೆ. ಈ ಮಹಾಪರ್ವದ ಮಹತ್ವ ಸದಾ ತಮ್ಮ ಮನಸ್ಸಿನಲ್ಲಿ ಉಳಿಯಲಿದೆ. ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಕ್ಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.