ಮಾಡುವುದು ಹೆಡ್​ ಕಾನ್ಸ್​ಟೇಬಲ್​ ಕೆಲಸ ಆದ್ರೆ ಇವರ ಆದಾಯ ಮಾತ್ರ 64 ಕೋಟಿ ರೂ.! ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು...Head Constable

ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಈ ಬೃಹತ್ ಭ್ರಷ್ಟಾಚಾರ ಹಗರಣವು ರಾಜ್ಯದ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಇಂದೋರ್ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಹೆಡ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿರುವ ಫಿರೋಜ್ ಖಾನ್ ಎಂಬಾತನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.
Head Constable
ಹೆಡ್​ ಕಾನ್ಸ್​ಟೇಬಲ್​ ಫಿರೋಜ್ ಖಾನ್
Published on: 

ಇಂದೋರ್​: ನಮ್ಮ ದೇಶದಲ್ಲಿ ಸರ್ಕಾರಿ ಉದ್ಯೋಗಕ್ಕೆ ಇರುವ ಕ್ರೇಜ್ ಅಷ್ಟಿಷ್ಟಲ್ಲ ಏಕೆಂದರೆ, ಉತ್ತಮ ವೇತನ ಹಾಗೂ ಉದ್ಯೋಗ ಭದ್ರತೆಯ ಜತೆಗೆ ಲಂಚದ ರೂಪದಲ್ಲಿ ಅಪಾರ ಹಣ ಸಂಪಾದಿಸುವ ದುರಾಸೆ ಅನೇಕ ಜನರಲ್ಲಿದೆ. ಈ ಕಾರಣಕ್ಕಾಗಿಯೇ ಭ್ರಷ್ಟ ಅಧಿಕಾರಿಗಳ ಕರಾಳ ಮುಖಗಳು ಕಾಲಕಾಲಕ್ಕೆ ಬಯಲಾಗುತ್ತಲೇ ಇರುತ್ತವೆ. ಅದೇ ರೀತಿ​ ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಹೆಡ್​ ಕಾನ್ಸ್​ಟೇಬಲ್ ( Head Constable ) ಒಬ್ಬರು ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವುದು ಸದ್ಯ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಈ ಬೃಹತ್ ಭ್ರಷ್ಟಾಚಾರ ಹಗರಣವು ರಾಜ್ಯದ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಇಂದೋರ್ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಹೆಡ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿರುವ ಫಿರೋಜ್ ಖಾನ್ ಎಂಬಾತನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.

Also Read
ಪೊಲೀಸ್​ ಅಧಿಕಾರಿಗಳನ್ನು ಗುರಿಯಾಗಿಸಿದ ಹನಿಟ್ರ್ಯಾಪ್ ಜಾಲ: ಒಂದಲ್ಲ ಎರಡಲ್ಲ ಸಾವಿರಕ್ಕೂ ಹೆಚ್ಚು ಮಂದಿ ಟ್ರ್ಯಾಪ್​! Honey Trap
Head Constable

ಇಂದೋರ್ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ತನಿಖೆಯ ವೇಳೆ, ಫಿರೋಜ್ ಖಾನ್ ಮತ್ತು ಆತನ ಆಪ್ತರ ಬಳಿ ಒಟ್ಟು 46 ಸ್ಥಿರಾಸ್ತಿಗಳು ಇರುವುದು ಪಾಲಾಗಿದ್ದು, ಸರ್ಕಾರದ ದಾಖಲೆಗಳಲ್ಲಿ ಇದರ ಮೌಲ್ಯ 17.19 ಕೋಟಿ ರೂ. ಇದ್ದರೂ ಮಾರುಕಟ್ಟೆಯಲ್ಲಿ ಇದರ ಬೆಲೆ 64 ಕೋಟಿ ರೂ. ಗೂ ಅಧಿಕವಿರುತ್ತದೆ ಎಂದು ಅಂದಾಜಿಸಲಾಗಿದೆ.

ಈ ಶೋಧ ಕಾರ್ಯಾಚರಣೆಯಲ್ಲಿ ಕೇವಲ ಮನೆ ಮತ್ತು ಪ್ಲಾಟ್‌ಗಳು ಮಾತ್ರವಲ್ಲದೆ, ಭಾರಿ ಪ್ರಮಾಣದ ಹಣಕಾಸು ವ್ಯವಹಾರಗಳ ಪಟ್ಟಿಯೇ ಹೊರಬಂದಿದೆ. ಫಿರೋಜ್ ಖಾನ್‌ಗೆ ಸೇರಿದ 21 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳು, ಹಲವಾರು ಖಾಸಗಿ ಕಂಪನಿಗಳಲ್ಲಿ ಪಾಲುದಾರಿಕೆ ಹಾಗೂ ಭೂ ವ್ಯವಹಾರಗಳಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಸಾಲದ ವಿವರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇನ್ನು ಫಿರೋಜ್ ಖಾನ್ ಅವರ ಪತ್ನಿ ಹೀನಾ ಹಾಗೂ ಯುವರಾಜ್ ಪನ್ವಾರ್ ಅವರು ತಮ್ಮೊಂದಿಗೆ ನಂಟು ಹೊಂದಿರುವ ಖಾಸಗಿ ಕಂಪನಿಯ ಮೂಲಕ ಇಂದೋರ್ ಜಿಲ್ಲೆಯ ಪ್ರಮುಖ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ಖರೀದಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಅಲ್ಲದೆ, ಈತ ದೀರ್ಘಕಾಲದಿಂದ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರುಹಾಜರಾಗಿ, ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ವ್ಯವಹಾರಗಳನ್ನು ನಡೆಸುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.

ಇತ್ತೀಚೆಗೆ ಫಿರೋಜ್ ಖಾನ್ ತಮ್ಮ ಮಗಳ ಮದುವೆ ಸಮಾರಂಭದಲ್ಲಿ ನೋಟುಗಳ ಕಟ್ಟುಗಳನ್ನು ಗಾಳಿಯಲ್ಲಿ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಲೋಕಾಯುಕ್ತರು ಫಿರೋಜ್ ಖಾನ್ ಮತ್ತು ಆತನ ಸಹಚರಿ ರೋಶ್ನಿ ವರ್ಮಾ ವಿರುದ್ಧ 'ಭ್ರಷ್ಟಾಚಾರ ತಡೆ ಕಾಯ್ದೆ'ಯಡಿ ಪ್ರಕರಣ ದಾಖಲಿಸಿ, ಇಂದೋರ್ ಹಾಗೂ ದೇವಾಸ್‌ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತರ ಅಧಿಕೃತ ಪತ್ರದ ಆಧಾರದ ಮೇಲೆ ಇಂದೋರ್ ಪೊಲೀಸ್ ತರಬೇತಿ ಕಾಲೇಜಿನ ಅಧಿಕಾರಿಗಳು ಫಿರೋಜ್ ಖಾನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Also Read
ಬಡ ಮಹಿಳೆಯರ ಜೀವದ ಜೊತೆ ಚೆಲ್ಲಾಟ: ಅಕ್ರಮ IVF, ಮಾನವ ಅಂಡಾಣು ಮಾಫಿಯಾ ಬಯಲು; 5 ವೈದ್ಯರು ಸೇರಿ 15 ಜನರ ಮೇಲೆ FIR ದಾಖಲು! Illegal Egg Donation
Head Constable

ಸಾಮಾನ್ಯ ಹೆಡ್ ಕಾನ್ಸ್​ಟೇಬಲ್ ಮಟ್ಟದ ವ್ಯಕ್ತಿಯೇ 64 ಕೋಟಿ ರೂ.ಗಳಿಗೂ ಅಧಿಕ ಅಕ್ರಮ ಆಸ್ತಿ ಸಂಪಾದಿಸಿರುವುದು ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರದ ಮಿತಿಯನ್ನು ತೋರಿಸುತ್ತದೆ ಎಂದು ವಿಪಕ್ಷವಾದ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೆಳಗಿನ ಹಂತದ ಸಿಬ್ಬಂದಿಯ ಬಳಿಯೇ ಇಷ್ಟು ಕೋಟಿ ಅಕ್ರಮ ಆಸ್ತಿ ಇದ್ದರೆ, ಇನ್ನು ಉನ್ನತ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಮಂತ್ರಿಗಳ ಬಳಿ ಎಷ್ಟಿರಬಹುದು ಎಂದು ಕಾಂಗ್ರೆಸ್ ನಾಯಕರು ನೇರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಹಗರಣದಿಂದಾಗಿ ಮಧ್ಯಪ್ರದೇಶ ಪೊಲೀಸ್ ಇಲಾಖೆಯು ತಲೆತಗ್ಗಿಸುವಂತಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net