ಪೊಲೀಸ್​ ಅಧಿಕಾರಿಗಳನ್ನು ಗುರಿಯಾಗಿಸಿದ ಹನಿಟ್ರ್ಯಾಪ್ ಜಾಲ: ಒಂದಲ್ಲ ಎರಡಲ್ಲ ಸಾವಿರಕ್ಕೂ ಹೆಚ್ಚು ಮಂದಿ ಟ್ರ್ಯಾಪ್​! Honey Trap

ಸೈಬರ್ ಕಳ್ಳ ಕೊಂಡಬತುಲ ಪವನ್ ಕುಮಾರ್ ರಾವ್ (Kondabathula Pawan Kumar Rao) ತನ್ನ ಮಾಜಿ ಪ್ರೇಮಿ ಕವಿತಾಳೊಂದಿಗೆ ಸೇರಿಕೊಂಡು ಆನ್‌ಲೈನ್ ವಂಚನೆಯ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದನು. ಇನ್‌ಸ್ಟಾಗ್ರಾಮ್‌ನಲ್ಲಿ 33 ಮತ್ತು ಫೇಸ್‌ಬುಕ್‌ನಲ್ಲಿ 14 ಸೇರಿದಂತೆ ಸಾಕಷ್ಟು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ಆಕರ್ಷಕ ಯುವತಿಯರ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದನು.
Honey Trap
ಸಾಂದರ್ಭಿಕ ಚಿತ್ರ
Published on: 

ಹೈದರಾಬಾದ್: ಹೈದರಾಬಾದ್​ ನಗರ ಪೊಲೀಸರು ಭೇದಿಸಿರುವ ಹನಿಟ್ರ್ಯಾಪ್ (Honey Trap) ಪ್ರಕರಣವೊಂದು ಇಡೀ ತೆಲಂಗಾಣ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಕಾನೂನನ್ನು ರಕ್ಷಿಸಬೇಕಾದ ಖಾಕಿಗಳೇ ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೈಬರ್ ಕಳ್ಳ ಕೊಂಡಬತುಲ ಪವನ್ ಕುಮಾರ್ ರಾವ್ (Kondabathula Pawan Kumar Rao) ತನ್ನ ಮಾಜಿ ಪ್ರೇಮಿ ಕವಿತಾಳೊಂದಿಗೆ ಸೇರಿಕೊಂಡು ಆನ್‌ಲೈನ್ ವಂಚನೆಯ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದನು. ಇನ್‌ಸ್ಟಾಗ್ರಾಮ್‌ನಲ್ಲಿ 33 ಮತ್ತು ಫೇಸ್‌ಬುಕ್‌ನಲ್ಲಿ 14 ಸೇರಿದಂತೆ ಸಾಕಷ್ಟು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ಆಕರ್ಷಕ ಯುವತಿಯರ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದನು. ನಿರ್ದಿಷ್ಟವಾಗಿ ಪೊಲೀಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ ಈ ವಂಚಕ, ಸಂತ್ರಸ್ತರು ಪ್ರತಿಕ್ರಿಯಿಸುತ್ತಿದ್ದಂತೆ ಪ್ರಣಯ ಭರಿತ ಮಾತುಗಳ ಮೂಲಕ ಮೋಸದ ಜಾಲದಲ್ಲಿ ಬಂಧಿಸುತ್ತಿದ್ದನು.

Also Read
‘ಪ್ರೇಮದ ಊರಲಿ’ ಟಿಕೆಟ್‌ಗಾಗಿ ಮಹಿಳೆಯರ ಮಾರಾಮಾರಿ: ಜಡೆ ಹಿಡಿದು ಹೊಡೆದಾಟ, ಮಾಂಗಲ್ಯ ಸರ ಕಿತ್ತಾಟ; ವಿಡಿಯೋ ವೈರಲ್! Premada Oorali
Honey Trap

ವಿಡಿಯೋ ಕಾಲ್‌ಗಳ ಸಂದರ್ಭದಲ್ಲಿ ಸಂತ್ರಸ್ತರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಪವನ್, ನಂತರ ಅವುಗಳನ್ನು ಅಸಭ್ಯ ವಿಡಿಯೋಗಳಾಗಿ ಮಾರ್ಫ್ ಮಾಡುತ್ತಿದ್ದನು. ನಿಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಮತ್ತು ಇಲಾಖೆಗೆ ದೂರು ನೀಡಿ ನಿಮ್ಮ ಉದ್ಯೋಗ ಕಸಿದುಕೊಳ್ಳುತ್ತೇವೆ ಎಂದು ಬೆದರಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿದ್ದನು. ವಿಶೇಷವೆಂದರೆ, ತಾವು ಚಾಟ್ ಮಾಡುತ್ತಿರುವ ವ್ಯಕ್ತಿ ನಿಜವಾದ ಯುವತಿಯಲ್ಲ ಎಂದು ತಿಳಿದ ಮೇಲೂ ಕೆಲ ಅಧಿಕಾರಿಗಳು ಆತನೊಂದಿಗೆ ಸಂಪರ್ಕ ಮುಂದುವರಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ವಂಚನಾ ಜಾಲಕ್ಕೆ ಬಲಿಯಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವ ಖೈರತಾಬಾದ್ ಡಿಟೆಕ್ಟಿವ್ ಇನ್ಸ್‌ಪೆಕ್ಟರ್ (DI) ಬಾಲಸ್ವಾಮಿ ಅವರ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿದೆ. 'ಚಂದನಾ' ಎಂಬ ನಕಲಿ ಹೆಸರಿನಲ್ಲಿ ಅಕೌಂಟ್ ತೆರೆದಿದ್ದ ಪವನ್, ತಾನು ಬಾಲಸ್ವಾಮಿ ಅವರ ಸಂಬಂಧಿಕಳಾಗಿದ್ದು ಮದುವೆಯಾಗುವುದಾಗಿ ನಂಬಿಸಿದ್ದನು. ಚಂದನಾ ಎಂಬುವವರು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಂಬಿಸಿ, ವೈದ್ಯಕೀಯ ವೆಚ್ಚದ ಹೆಸರಿನಲ್ಲಿ ಬಾಲಸ್ವಾಮಿ ಅವರಿಂದ ಬರೋಬ್ಬರಿ 8 ರಿಂದ 10 ಲಕ್ಷ ರೂಪಾಯಿಗಳನ್ನು ದೋಚಲಾಗಿದೆ.

ಅಷ್ಟಕ್ಕೆ ಸುಮ್ಮನಾಗದೆ, ಡಿಐ ಬಾಲಸ್ವಾಮಿಯನ್ನು ಸುಮಾರು ಆರು ತಿಂಗಳುಗಳ ಕಾಲ ಲಾಡ್ಜ್‌ನಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಲಾಗಿದ್ದು, ಹೆಂಡತಿ-ಮಕ್ಕಳ ಬಳಿಗೆ ಹೋಗದಂತೆ ತಡೆಯಲಾಗಿತ್ತು. ಮನೆಗೆ ಹೋದರೆ ಅಕ್ರಮ ಪ್ರಕರಣಗಳನ್ನು ದಾಖಲಿಸಿ ಕೆಲಸ ಕಳೆದುಕೊಳ್ಳುವಂತೆ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದನು. ಅಂತಿಮವಾಗಿ ಸಂತ್ರಸ್ತ ಅಧಿಕಾರಿಯ ಪತ್ನಿ ಹರಿತಾ ಅವರು ಖೈರತಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರವಷ್ಟೇ ಈ ಸಂಪೂರ್ಣ ಹಗರಣ ಹೊರಬಂದಿದ್ದು, ಪ್ರಸ್ತುತ ಡಿಐ ಬಾಲಸ್ವಾಮಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Also Read
ಮದುವೆಯಾಗಲು ಹಣವಿಲ್ಲದಿದ್ದಕ್ಕೆ ವೃದ್ಧೆಯ ಮಾಂಗಲ್ಯ ಸರವನ್ನೇ ಎಗರಿಸಿದ ಪ್ರೇಮಿಗಳು! ನಂತರ ನಡೆದಿದ್ದಿಷ್ಟು...Gold Theft
Honey Trap

ಆರೋಪಿ ಪವನ್ ಕುಮಾರ್ ಕೃತ್ಯದಿಂದ ಮೋಸ ಹೋದವರ ಒಟ್ಟು ಸಂಖ್ಯೆ ಸಾವಿರ ಗಡಿ ದಾಟಿದೆ ಎಂದು ಪೊಲೀಸರು ಗುರುತಿಸಿದ್ದಾರೆ. ತೆಲುಗು ರಾಜ್ಯಗಳಲ್ಲದೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಂಜಾಬ್‌ನಲ್ಲೂ ಸಂತ್ರಸ್ತರು ನೆಲೆಸಿದ್ದಾರೆ. ಯುಎಇ (UAE), ಒಮಾನ್, ಪಾಕಿಸ್ತಾನ ಮತ್ತು ಕೀನ್ಯಾದಂತಹ ದೇಶಗಳಿಗೂ ಈ ಜಾಲ ವಿಸ್ತರಿಸಿರುವುದು ಅಧಿಕಾರಿಗಳಿಗೆ ದಿಗಿಲು ತಂದಿದೆ. ಒಟ್ಟು ಸಂತ್ರಸ್ತರಲ್ಲಿ ಬರೋಬ್ಬರಿ 82 ಮಂದಿ ಪೊಲೀಸ್ ಇಲಾಖೆಗೆ ಸೇರಿದವರಾಗಿರುವುದು ಗಮನಾರ್ಹ ಅಂಶವಾಗಿದೆ. ಆರೋಪಿಯ ಬ್ಯಾಂಕ್ ಖಾತೆಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಂಡಿರುವ ಸೈಬರ್ ಕ್ರೈಮ್ ಪೊಲೀಸರು, ಪವನ್‌ಗೆ ಸಾಥ್ ನೀಡಿದ್ದ ಕವಿತಾ ಹಾಗೂ ಇತರ ಸಹಚರರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net