ವಾಹನ ಸವಾರರೇ ಗಮನಿಸಿ: ಹೊಸ E85 ಇಂಧನ ಎಲ್ಲ ಕಾರುಗಳಿಗಲ್ಲ! ಕೇಂದ್ರ ಸರ್ಕಾರ ಸ್ಪಷ್ಟನೆ! E85 Fuel

ವಾಹನ ಸವಾರರೇ ಗಮನಿಸಿ: ಹೊಸ E85 ಇಂಧನ ಎಲ್ಲ ಕಾರುಗಳಿಗಲ್ಲ! ಕೇಂದ್ರ ಸರ್ಕಾರ ಸ್ಪಷ್ಟನೆ!
ವಾಹನ ಸವಾರರೇ ಗಮನಿಸಿ: ಹೊಸ E85 ಇಂಧನ ಎಲ್ಲ ಕಾರುಗಳಿಗಲ್ಲ! ಕೇಂದ್ರ ಸರ್ಕಾರ ಸ್ಪಷ್ಟನೆ!
Published on
ನವದೆಹಲಿ: ದೇಶದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಶೇ. ೮೫ ರಷ್ಟು ಎಥನಾಲ್ ಮಿಶ್ರಿತ 'E85' ಇಂಧನದ(E85 Fuel) ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಹೊಸ E85 ಇಂಧನವು ಕೇವಲ ವಿಶೇಷವಾಗಿ ವಿನ್ಯಾಸಗೊಳಿಸಲಾದ 'ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ (Flex-Fuel Vehicles - FFVs) ಮಾತ್ರ ಸೀಮಿತವಾಗಿದ್ದು, ಇದನ್ನು ಸಾಮಾನ್ಯ ಪೆಟ್ರೋಲ್ ಅಥವಾ E20 ಕಾರುಗಳಲ್ಲಿ ಬಳಸಬಾರದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಈ ಇಂಧನವನ್ನು ಹಾಕಿಸಿದರೆ, ಇಂಜಿನ್ ಸಂಪೂರ್ಣವಾಗಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಏನಿದು E20 ಮತ್ತು E85 ಇಂಧನದ ನಡುವಿನ ವ್ಯತ್ಯಾಸ?

ಹೆಸರೇ ಸೂಚಿಸುವಂತೆ ಈ ಇರಡೂ ಇಂಧನಗಳಲ್ಲಿ ಎಥನಾಲ್ ಮಿಶ್ರಣದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ.
E20 ಇಂಧನ: ಪ್ರಸ್ತುತ ಭಾರತದಲ್ಲಿ ಬಳಕೆಯಲ್ಲಿರುವ ಗುಣಮಟ್ಟದ ಇಂಧನ ಇದಾಗಿದ್ದು, ಇದರಲ್ಲಿ ಶೇ. 20 ರಷ್ಟು ಎಥನಾಲ್ ಮತ್ತು ಶೇ. 80 ರಷ್ಟು ಸಾಮಾನ್ಯ ಪೆಟ್ರೋಲ್ ಇರುತ್ತದೆ.
E85 ಇಂಧನ: ಈ ಹೊಸ ಇಂಧನದಲ್ಲಿ ಬರೋಬ್ಬರಿ ಶೇ. 80 ರಿಂದ 85 ರಷ್ಟು ಎಥನಾಲ್ ಇರಲಿದ್ದು, ಕೇವಲ ಶೇ. 14 ರಿಂದ 19 ರಷ್ಟು ಮಾತ್ರ ಸಾಂಪ್ರದಾಯಿಕ ಪೆಟ್ರೋಲ್ ಇರುತ್ತದೆ.
ಫ್ಲೆಕ್ಸ್-ಫ್ಯುಯೆಲ್ ವಾಹನಗಳು (FFV) ಮಾತ್ರ E20 ಇಂಧನದಿಂದ ಹಿಡಿದು ಇಡೀ ಶೇ. 100 ರಷ್ಟು ಎಥನಾಲ್ ಇಂಧನಕ್ಕೂ ತಾವಾಗಿಯೇ ಸ್ವಯಂಚಾಲಿತವಾಗಿ ಹೊಂದಿಕೊಳ್ಳುವ ವಿಶೇಷ ತಂತ್ರಜ್ಞಾನವನ್ನು ಹೊಂದಿರುತ್ತವೆ.

ಪೆಟ್ರೋಲ್‌ಗಿಂತ ೨೦ ರೂ. ಅಗ್ಗ! ಆದರೆ ಕಟ್ಟುನಿಟ್ಟಿನ ನಿಯಮ

ಫ್ಲೆಕ್ಸ್-ಫ್ಯುಯೆಲ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರವು E85 ಇಂಧನದ ಬೆಲೆಯನ್ನು ಸಾಮಾನ್ಯ ಪೆಟ್ರೋಲ್‌ಗಿಂತ ಸುಮಾರು 20 ರೂಪಾಯಿಗಳಷ್ಟು ಕಡಿಮೆ ಇಟ್ಟಿದೆ. ಸದ್ಯ ದೇಶದ ರಾಜಧಾನಿ ದೆಹಲಿಯಲ್ಲಿ ಇದರ ಬೆಲೆಯನ್ನು ಪ್ರತಿ ಲೀಟರ್‌ಗೆ 82.12 ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ.
ಸಾಮಾನ್ಯ ವಾಹನ ಸವಾರರು ತಿಳಿವಳಿಕೆಯಿಲ್ಲದೆ ತಪ್ಪು ಇಂಧನ ತುಂಬಿಸುವುದನ್ನು ತಡೆಯಲು, ಪೆಟ್ರೋಲ್ ಬಂಕ್‌ಗಳಲ್ಲಿರುವ E85 ಡಿಸ್ಪೆನ್ಸರ್‌ಗಳ ಮೇಲೆ "E85 ಇಂಧನಕ್ಕೆ ಸೂಕ್ತವಾದ ಕಾರುಗಳಿಗೆ ಮಾತ್ರ (E85-compliant cars only) ಎಂಬ ಬೋರ್ಡ್‌ಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.

ಪರಿಸರಕ್ಕೆ ವರ, ರೈತರಿಗೆ ಆದಾಯದ ಆಸರೆ!

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ದೇಶಕ್ಕೆ ಹಲವು ಲಾಭಗಳಿವೆ. ಸಾಂಪ್ರದಾಯಿಕ ಪೆಟ್ರೋಲ್‌ಗೆ ಹೋಲಿಸಿದರೆ E85 ಇಂಧನ ಬಳಕೆಯಿಂದ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಶೇ. 61 ರಷ್ಟು ಕಡಿಮೆಯಾಗಲಿದ್ದು, ವಾಯು ಮಾಲಿನ್ಯಕ್ಕೆ ದೊಡ್ಡ ಬ್ರೇಕ್ ಬೀಳಲಿದೆ.
ಇದರ ಜೊತೆಗೆ, ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಿ ದೇಶದ ಇಂಧನ ಭದ್ರತೆ ಗಟ್ಟಿಯಾಗಲಿದೆ. ಅತಿ ಮುಖ್ಯವಾಗಿ, ಎಥನಾಲ್ ಅನ್ನು ಕಬ್ಬು ಹಾಗೂ ಧಾನ್ಯಗಳಿಂದ ತಯಾರಿಸುವುದರಿಂದ ದೇಶದ ರೈತರಿಗೆ ಹೆಚ್ಚಿನ ಬೇಡಿಕೆ ಸಿಗಲಿದ್ದು, ಅವರ ಆದಾಯವೂ ವೃದ್ಧಿಸಲಿದೆ.

ಹಳೇ ವಾಹನ ಸವಾರರು ಆತಂಕ ಪಡಬೇಕಿಲ್ಲ

ಹೊಸ ಇಂಧನ ಬಂದ ತಕ್ಷಣ ಹಳೆಯ ಇಂಧನ ನಿಲ್ಲುವುದಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳಿಗಾಗಿ E20 ಪೆಟ್ರೋಲ್ ಹಾಗೂ ಸಾಮಾನ್ಯ ಪೆಟ್ರೋಲ್ ಎಂದಿನಂತೆ ದೀರ್ಘಕಾಲದವರೆಗೆ ಲಭ್ಯವಿರಲಿದೆ. ಭಾರತೀಯ ವಾಹನ ತಯಾರಕ ಕಂಪನಿಗಳು ಶೇ. 100 ರಷ್ಟು ದೇಶೀಯ ತಂತ್ರಜ್ಞಾನದ ಫ್ಲೆಕ್ಸ್-ಫ್ಯುಯೆಲ್ ಕಾರುಗಳನ್ನು ಮಾರುಕಟ್ಟೆಗೆ ತರಲು ಸರ್ಕಾರ ಸಕಲ ಉತ್ತೇಜನ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net