ಬಿಹಾರದಲ್ಲಿ ಹೈ-ಡ್ರಾಮಾ: Z+ ಭದ್ರತೆ ಕಡಿತಕ್ಕೆ ಕೆರಳಿದ ಲಾಲು-ರಾಬ್ರಿ! ಸರ್ಕಾರಿ ಸೆಕ್ಯೂರಿಟಿ ವಾಪಸ್ ಕಳಿಸಿ ಲಾಠಿ ಹಿಡಿದು ನಿಂತ ಆರ್‌ಜೆಡಿ ಕಾರ್ಯಕರ್ತರು! Lalu-Rabri Security Downgrade

ಬಿಹಾರದಲ್ಲಿ ಹೈ-ಡ್ರಾಮಾ: Z+ ಭದ್ರತೆ ಕಡಿತಕ್ಕೆ ಕೆರಳಿದ ಲಾಲು-ರಾಬ್ರಿ! ಸರ್ಕಾರಿ ಸೆಕ್ಯೂರಿಟಿ ವಾಪಸ್ ಕಳಿಸಿ ಲಾಠಿ ಹಿಡಿದು ಆರ್‌ಜೆಡಿ ನಿಂತ ಕಾರ್ಯಕರ್ತರು!
ಬಿಹಾರದಲ್ಲಿ ಹೈ-ಡ್ರಾಮಾ: Z+ ಭದ್ರತೆ ಕಡಿತಕ್ಕೆ ಕೆರಳಿದ ಲಾಲು-ರಾಬ್ರಿ! ಸರ್ಕಾರಿ ಸೆಕ್ಯೂರಿಟಿ ವಾಪಸ್ ಕಳಿಸಿ ಲಾಠಿ ಹಿಡಿದು ಆರ್‌ಜೆಡಿ ನಿಂತ ಕಾರ್ಯಕರ್ತರು!
Published on
ಪಟ್ನಾ: ಬಿಹಾರದ ರಾಜಕೀಯ ಅಖಾಡದಲ್ಲಿ ಮತ್ತೊಂದು ದೊಡ್ಡ ವಿವಾದ ಭುಗಿಲೆದ್ದಿದೆ. ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ(Lalu-Rabri Security Downgrade) ಅವರಿಗೆ ನೀಡಲಾಗಿದ್ದ ಅತ್ಯುನ್ನತ 'Z-ಪ್ಲಸ್' ದರ್ಜೆಯ ಭದ್ರತೆಯನ್ನು ಬಿಹಾರ ಸರ್ಕಾರವು 'Y' ದರ್ಜೆಗೆ ಇಳಿಸಿದೆ. ಸರ್ಕಾರದ ಈ ದಿಢೀರ್ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲಾಲು ಕುಟುಂಬ, ತಮಗೆ ನೀಡಲಾದ ಹೊಸ ಸರ್ಕಾರಿ ಭದ್ರತೆಯನ್ನು ಸ್ವೀಕರಿಸಲು ನಿರಾಕರಿಸಿದ್ದು, ಬಂದಿದ್ದ ರಕ್ಷಣಾ ಸಿಬ್ಬಂದಿಯನ್ನೇ ಬಂಗಲೆಯಿಂದ ವಾಪಸ್ ಕಳುಹಿಸಿದೆ.
ಸರ್ಕಾರಿ ಭದ್ರತೆಯನ್ನು ತಿರಸ್ಕರಿಸಿದ ಬೆನ್ನಲ್ಲೇ, ಪಟ್ನಾದ ೧೦, ಸರ್ಕ್ಯುಲರ್ ರೋಡ್‌ನಲ್ಲಿರುವ ರಾಬ್ರಿ ದೇವಿ ಅವರ ನಿವಾಸದ ಮುಂದೆ ನೂರಾರು ಆರ್‌ಜೆಡಿ ಕಾರ್ಯಕರ್ತರು ಕೈಯಲ್ಲಿ ಲಾಠಿ ಹಿಡಿದು ಜಮಾಯಿಸಿದ್ದಾರೆ. ತಮ್ಮ ನಾಯಕರ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದಾಗಿ ಘೋಷಿಸಿರುವ ಕಾರ್ಯಕರ್ತರು ಬಂಗಲೆಯ ಸುತ್ತಲೂ ಅನೌಪಚಾರಿಕವಾಗಿ ಕಾವಲು ನಿಂತಿದ್ದು, ಬಿಹಾರದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮಗ ತೇಜಸ್ವಿಗೂ ಶಾಕ್; ಬಂಗಲೆ ಖಾಲಿ ಮಾಡುವಂತೆ ನೋಟಿಸ್!

ಬಿಹಾರದ ಗೃಹ ಇಲಾಖೆಯು ಇತ್ತೀಚೆಗೆ ವಿಐಪಿಗಳ ಭದ್ರತೆಯನ್ನು ಪರಿಷ್ಕರಿಸಿದ್ದು, ಲಾಲು ಪ್ರಸಾದ್, ರಾಬ್ರಿ ದೇವಿ ಮಾತ್ರವಲ್ಲದೆ ಅವರ ಮಗ, ವಿಧಾನಸಭೆಯ ವಿಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ಭದ್ರತೆಯನ್ನೂ ಕಡಿತಗೊಳಿಸಿದೆ. ತೇಜಸ್ವಿ ಯಾದವ್ ಕೂಡ ತಮಗೆ ನೀಡಲಾದ 'Y' ದರ್ಜೆಯ ಸೆಕ್ಯೂರಿಟಿಯನ್ನು ತಿರಸ್ಕರಿಸಿದ್ದಾರೆ.
ಈ ಭದ್ರತೆ ಕಡಿತದ ವಿವಾದದ ಜೊತೆಗೆ ಮತ್ತೊಂದು ದೊಡ್ಡ ರಾಜಕೀಯ ದಾಳವನ್ನು ಸರ್ಕಾರ ಉರುಳಿಸಿದೆ. ಲಾಲು ಕುಟುಂಬ ದಶಕಗಳಿಂದ ವಾಸಿಸುತ್ತಿರುವ ಪಟ್ನಾದ ಪ್ರಸಿದ್ಧ '೧೦, ಸರ್ಕ್ಯುಲರ್ ರೋಡ್' ಬಂಗಲೆಯನ್ನು ಸಚಿವ ನಂದ ಕಿಶೋರ್ ರಾಮ್ ಅವರಿಗೆ ಹಂಚಿಕೆ ಮಾಡಲಾಗಿದ್ದು, ತಕ್ಷಣವೇ ಬಂಗಲೆಯನ್ನು ಖಾಲಿ ಮಾಡುವಂತೆ ರಾಬ್ರಿ ದೇವಿ ಅವರಿಗೆ ನೋಟಿಸ್ ನೀಡಲಾಗಿದೆ. ಇದು ಆರ್‌ಜೆಡಿ ನಾಯಕರ ಕೆರಳಿಕೆಗೆ ತುಪ್ಪ ಸುರಿದಂತಾಗಿದೆ.

"ನಮ್ಮ ನಾಯಕರನ್ನು ಕೊಲ್ಲಲು ಸರ್ಕಾರ ಸಂಚು ಹೂಡಿದೆ" – ಆರ್‌ಜೆಡಿ ಆಕ್ರೋಶ

ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಆರ್‌ಜೆಡಿ ವಕ್ತಾರ ಶಕ್ತಿ ಯಾದವ್, ಬಿಜೆಪಿ-ಜೆಡಿಯು ಸರ್ಕಾರವು ನಮ್ಮ ಹಿರಿಯ ನಾಯಕರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಭದ್ರತೆ ಹಾಗೂ ಬಂಗಲೆಯ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ನಾಯಕರನ್ನು ಕೊಲ್ಲಲು ಸರ್ಕಾರ ಸಂಚು ಹೂಡಿದೆ ಅನಿಸುತ್ತಿದೆ. ಅವರ ರಕ್ಷಣೆಗೆ ಸರ್ಕಾರ ಬೇಡ, ನಮ್ಮ ಕಾರ್ಯಕರ್ತರೇ ಸಾಕು. ನಾವು ನಮ್ಮ ನಾಯಕರನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತೇವೆ ಎಂದು ಗುಡುಗಿದ್ದಾರೆ.
ಆರ್‌ಜೆಡಿ ತನ್ನ ಅಧಿಕೃತ 'X' ಖಾತೆಯಲ್ಲಿ, ಸರ್ವಾಧಿಕಾರಿಯ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತದೆ. ಸಂವಿಧಾನದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಗೌರವವಿದೆ. ಆದರೆ ಸರ್ವಾಧಿಕಾರಿಗಳಿಗೆ ಇದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಪೋಸ್ಟ್ ಮಾಡಿದೆ.

ಥ್ರೇಟ್ ಪರ್ಸೆಪ್ಷನ್' ಆಧಾರದಲ್ಲೇ ನಿರ್ಧಾರ: ಎನ್‌ಡಿಎ ಸಮರ್ಥನೆ

ಆರ್‌ಜೆಡಿಯ ಈ ಗಂಭೀರ ಆರೋಪಗಳನ್ನು ಆಡಳಿತಾರೂಢ ಎನ್‌ಡಿಎ ನಾಯಕರು ತಳ್ಳಿಹಾಕಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಸರಾಫ್ ಮಾತನಾಡಿ, ರಾಜ್ಯದಲ್ಲಿ ಭದ್ರತೆ ಪರಿಶೀಲನೆ ನಡೆಸಲು ಒಂದು ವಿಶೇಷ ಸಮಿತಿ ಇರುತ್ತದೆ. ಆ ಸಮಿತಿಯ ನಿರ್ಧಾರದಂತೆಯೇ ಮಾಜಿ ಮುಖ್ಯಮಂತ್ರಿಗಳಿಗೆ ಸಿಗಬೇಕಾದ ಕಾನೂನಾತ್ಮಕ ಭದ್ರತೆಯನ್ನು ನೀಡಲಾಗಿದೆ. ಇದರಲ್ಲಿ ರಾಜಕೀಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಕೂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ವ್ಯಕ್ತಿಗಳ ಮೇಲಿರುವ ಜೀವಬೆದರಿಕೆಯ ಮೌಲ್ಯಮಾಪನ ನಡೆಸಿ ಭದ್ರತೆ ನಿಗದಿಪಡಿಸಲಾಗುತ್ತದೆ. ಇದರಲ್ಲಿ ರಾಬ್ರಿ ದೇವಿ ಅವರೊಬ್ಬರೇ ವಿನಾಯಿತಿಯಲ್ಲ, ಅವರು ಸರ್ಕಾರದ ಆದೇಶವನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಬಿಹಾರದಲ್ಲಿ ಭದ್ರತೆಯ ಸುತ್ತ ಸುತ್ತುತ್ತಿರುವ ಈ ರಾಜಕೀಯ ಹಗ್ಗಜಗ್ಗಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net