

ತಿರುವನಂತಪುರಂ: ಮಕ್ಕಳ ನಗುವೇ ಮನೆಯ ಬೆಳಕು, ತಾಯಿಯ ( Mother ) ಮಡಿಲೇ ಅವರಿಗೆ ಜಗತ್ತಿನ ಸುರಕ್ಷಿತ ತಾಣ ಎನ್ನುತ್ತಾರೆ. ಆದರೆ, ಜೀವನದುದ್ದಕ್ಕೂ ಮಕ್ಕಳಿಗೆ ತನ್ನ ಪ್ರೀತಿಯನ್ನು ಧಾರೆ ಎರೆಯಬೇಕಾದ ಹೆತ್ತ ತಾಯಿಯೇ ತನ್ನ ಮುಗ್ಧ ಮಕ್ಕಳ ಪಾಲಿಗೆ ಯಮನಾಗಿ ಬದಲಾದ ಭೀಕರ ಘಟನೆಯೊಂದು ಕೇರಳದ ಪಾಲಕ್ಕಾಡ್‌ನಲ್ಲಿ ವರದಿಯಾಗಿದೆ.
ಭವಿಷ್ಯದಲ್ಲಿ ತನ್ನ ಸ್ವಾತಂತ್ರ್ಯಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆಂಬ ವಿಕೃತ ಯೋಚನೆಯನ್ನು ತಲೆಗೆ ಅಂಟಿಸಿಕೊಂಡ ತಾಯಿಯೊಬ್ಬಳು, ತನ್ನ ಐದು ಮತ್ತು ಮೂರು ವರ್ಷದ ಹಸುಗೂಸುಗಳನ್ನು ಸ್ನಾನಗೃಹದ ನೀರಿನ ಟ್ಯಾಂಕ್‌ನಲ್ಲಿ ಮುಳುಸಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಸುದ್ದಿ ಇದೀಗ ಎಲ್ಲೆಡೆ ಆಘಾತ ಮೂಡಿಸಿದೆ.
ಕೇರಳದ ಪಾಲಕ್ಕಾಡ್‌ನ ಕೊಝಿಂಜಾಂಪರ ಬಳಿಯ ಕೂರಂಗಟ್ಟು ಮೆನನ್‌ಪಾರಾದಲ್ಲಿ ಜಾನ್ ಕುಮಾರ್ ಮತ್ತು ನಿವೇದ್ಯ ದಂಪತಿಯು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ಮುದ್ದಿನ ಮಕ್ಕಳಾದ ಐದು ವರ್ಷದ ಜೇನಿಫರ್ ಜೂಲಿಯೆಟ್ ಹಾಗೂ ಮೂರು ವರ್ಷದ ರಾಬಿನ್ ಕ್ರಿಸ್ಟೋಫರ್ ಮಂಗಳವಾರ ಶವವಾಗಿ ಪತ್ತೆಯಾಗಿದ್ದರು.
ಆರಂಭದಲ್ಲಿ ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಟ್ಯಾಂಕ್‌ಗೆ ಬಿದ್ದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃತ ಮಕ್ಕಳ ತಂದೆಯ ಸಹೋದರಿ ಬೆನ್ಸಿ ಹಾಗೂ ಇತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಬಯಲಾದ ಸತ್ಯ ಕೇಳಿದವರ ಮೈ ಜುಮ್ಮೆನಿಸುವಂತಿದೆ.
ಆರಂಭದಲ್ಲಿ ಪೊಲೀಸರ ವಿಚಾರಣೆಯ ವೇಳೆ ಬಾಯಿಬಿಡದ 33 ವರ್ಷದ ನಿವೇದ್ಯ, ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ತನ್ನ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ತಾನು ಬಯಸಿದ ಸ್ವತಂತ್ರ ಜೀವನಕ್ಕೆ ತನ್ನ ಈ ಪುಟ್ಟ ಮಕ್ಕಳು ಭವಿಷ್ಯದಲ್ಲಿ ಅಡ್ಡಿಯಾಗುತ್ತಾರೆ ಎಂಬ ಕುರುಡು ಯೋಚನೆಯೇ ಈ ಅಮಾನುಷ ಕೃತ್ಯಕ್ಕೆ ಕಾರಣ ಎಂದು ಆಕೆ ಪೋಲಿಸರ ಮುಂದೆ ಕಣ್ಣೀರಿಡದೆ ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಈ ಸ್ವಾರ್ಥದ ಕಾರಣಕ್ಕಾಗಿ ಆಕೆ ತನ್ನ ಕರುಳಬಳ್ಳಿಯನ್ನೇ ಕತ್ತರಿಸಿದ್ದಾಳೆ ಎಂಬುದು ಸಮಾಜ ತಲೆತಗ್ಗಿಸುವ ವಿಷಯವಾಗಿದೆ.
ಸ್ನಾನಗೃಹದ ಸಿಮೆಂಟ್ ಟ್ಯಾಂಕ್ ಬಳಿ ಆಟವಾಡುತ್ತಿದ್ದ ಹಿರಿಯ ಮಗಳು ಜೇನಿಫರ್ ತಲೆಯನ್ನು ಬಲವಂತವಾಗಿ ನೀರಿನಲ್ಲಿ ಮುಳುಸಿ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮಗಳು ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಬಳಿಕ, ಅಲ್ಲೇ ಸಮೀಪದಲ್ಲೇ ಆಟವಾಡುತ್ತಿದ್ದ ಮೂರು ವರ್ಷದ ಮಗ ರಾಬಿನ್ ಕ್ರಿಸ್ಟೋಫರ್‌ನ ಬೆನ್ನ ಹಿಡಿದು ಅದೇ ನೀರಿನೊಳಗೆ ಇಳಿಸಿ ಆತನ ಪ್ರಾಣವನ್ನೂ ಕೊನೆಗೊಳಿಸಿದ್ದಾಳೆ. ಟ್ಯಾಂಕ್‌ನಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಮಾತ್ರ ನೀರು ಇತ್ತಾದರೂ, ಪೋಸ್ಟ್‌ಮಾರ್ಟಮ್ ವರದಿ ಪ್ರಕಾರ ಶ್ವಾಸಕೋಶದೊಳಗೆ ನೀರು ಸೇರಿ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿರುವುದು ದೃಢಪಟ್ಟಿದೆ.
ಮಕ್ಕಳ ಶವಪರೀಕ್ಷಾ ವರದಿ ಮತ್ತು ಪೊಲೀಸರ ವಿಚಾರಣೆಯಿಂದ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬಂದಿದ್ದು, ಕೊಲೆ ಮಾಡಿರುವ ಆರೋಪಿ ನಿವೇದ್ಯಳನ್ನು ಪೊಲೀಸರು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ರಿಮಾಂಡ್ ಮಾಡಿದ್ದಾರೆ. ಮುಗ್ಧ ಮಕ್ಕಳ ಬಲಿ ಪಡೆದ ಈ ಪೈಶಾಚಿಕ ಕೃತ್ಯವು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಹೆತ್ತ ತಾಯಿಯೇ ಮಕ್ಕಳ ಜೀವ ತೆಗೆದಿರುವ ಈ ಘಟನೆಯು ಮಾತೃತ್ವದ ಮೇಲಿನ ನಂಬಿಕೆಯನ್ನು ಹುಸಿಗೊಳಿಸಿದ್ದು, ತಪ್ಪಿತಸ್ಥ ತಾಯಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್).