ಎಸ್​ಐಆರ್​ ಪ್ರಕ್ರಿಯೆ ಹಳಿತಪ್ಪಿಸಲು ಸ್ಕೆಚ್..? ನ್ಯಾಯಾಂಗ ಅಧಿಕಾರಿಗಳನ್ನೇ ಒತ್ತೆಯಾಳಾಗಿಸಿದ ದುರುಳರು!..ಕೇಂದ್ರ ಪಡೆ ನಿಯೋಜನೆಗೆ ಸುಪ್ರೀಂ ಆರ್ಡರ್ | Malda Violence

Malda Violence
Malda Violence
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮಾಲ್ಡಾ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು (Malda Violence) ನಡೆದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿದ್ದ ಮೂವರು ಮಹಿಳೆಯರು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಘೇರಾವ್ ಮಾಡಿ ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ವರದಿಯಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಅಧಿಕಾರಿಗಳ ಸುರಕ್ಷತೆಗಾಗಿ ತಕ್ಷಣವೇ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಘಟನೆಯ ಹಿನ್ನಲೆ

ಮಾಲ್ಡಾ ಜಿಲ್ಲೆಯ ಕಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿ ಹೊರಗೆ ಬುಧವಾರ ಈ ಗದ್ದಲ ಆರಂಭವಾಗಿದ್ದು, ಎಸ್​ಐಆರ್​​ ಪ್ರಕ್ರಿಯೆಯ ಭಾಗವಾಗಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಳಿಸಿಹಾಕುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಮೊದಲು ನ್ಯಾಯಾಂಗ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕೋರಿದ್ದರು. ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸಂಜೆ 4 ಗಂಟೆ ಸುಮಾರಿಗೆ ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿದ ಗುಂಪು, ಅಧಿಕಾರಿಗಳನ್ನು ಹೊರಬರದಂತೆ ತಡೆದು ಒತ್ತೆಯಾಳಾಗಿ ಇರಿಸಿಕೊಂಡಿತು ಎನ್ನಲಾಗಿದೆ. ಅಂತಿಮವಾಗಿ ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಪೊಲೀಸ್ ತಂಡವೊಂದು ಭಾರಿ ಹರಸಾಹಸ ಪಟ್ಟು ಅಧಿಕಾರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಅಧಿಕಾರಿಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಪರಿಸ್ಥಿತಿ ರಣರಂಗದಂತಾಗಿತ್ತು, ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ತೀವ್ರವಾದ ಕಲ್ಲು ತೂರಾಟ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಅಧಿಕಾರಿಗಳಿದ್ದ ಕಾರಿನ ಕಿಟಕಿ ಗಾಜುಗಳು ಪುಡಿಯಾಗಿರುವುದು ಮತ್ತು ಕೋಪಗೊಂಡ ಗುಂಪು ಪೊಲೀಸ್ ವಾಹನಗಳನ್ನು ಬೆನ್ನಟ್ಟುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳ ರಕ್ಷಣೆಯ ನಂತರವೂ ಹಿಂಸಾಚಾರ ನಿಲ್ಲದೆ ಹತ್ತಿರದ ಪ್ರದೇಶಗಳಿಗೂ ಹರಡಿದ್ದು, ಪ್ರತಿಭಟನಾಕಾರರು ಬಿದಿರು ಮತ್ತು ಪೀಠೋಪಕರಣಗಳನ್ನು ಬಳಸಿ ರಾಷ್ಟ್ರೀಯ ಹೆದ್ದಾರಿ 12 (NH 12) ಅನ್ನು ತಡೆದರು ಮತ್ತು ರಸ್ತೆಯ ಮಧ್ಯೆ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ದೀರ್ಘಕಾಲದವರೆಗೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.

ಸುಪ್ರೀಂ ಕೆಂಡ

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳವನ್ನು ಅತ್ಯಂತ ಧ್ರುವೀಕೃತ ರಾಜ್ಯ ಎಂದು ಕರೆದಿದೆ. ಇದು ಎಸ್‌ಐಆರ್ ಪ್ರಕ್ರಿಯೆಯನ್ನು ಹಳಿತಪ್ಪಿಸಲು ನಡೆಸಿದ ಪೂರ್ವ ಯೋಜಿತ ಸಂಚಾಗಿದ್ದು, ಆಕಸ್ಮಿಕವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಧಿಕಾರಿಗಳ ರಕ್ಷಣೆಗೆ ರಾಜ್ಯ ಪೊಲೀಸರ ಬದಲಾಗಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ.

ಬಿಜೆಪಿ ಟೀಕೆ

ಈ ಘಟನೆಯ ಕುರಿತು ಕೇಂದ್ರ ಸಚಿವೆ ಸುಕಾಂತ ಮಜುಂದಾರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಮತ್ತು ಈ ದುಸ್ಥಿತಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಮುತ್ತಿಗೆಯ ಸಮಯದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ನಿರಂತರವಾಗಿ ಪ್ರಾಣ ಬೆದರಿಕೆ ಹಾಕಲಾಗಿತ್ತು ಮತ್ತು ಅವರ ಮೇಲೆ ಭೀಕರ ಹಲ್ಲೆ ನಡೆಸಲು ಪ್ರತಿಭಟನಾಕಾರರು ಮೊದಲೇ ಯೋಜನೆ ರೂಪಿಸಿದ್ದರು ಎಂದು ದೂರಿದ್ದಾರೆ.

ಎಸ್‌ಐಆರ್ ವಿವಾದ

ಬಂಗಾಳ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ಈ ಎಸ್‌ಐಆರ್ ಪ್ರಕ್ರಿಯೆ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 63 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇನ್ನೂ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು "ತೀರ್ಪಿನ ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದ್ದು, ಘೇರಾವ್ ಮಾಡಲ್ಪಟ್ಟ ನ್ಯಾಯಾಂಗ ಅಧಿಕಾರಿಗಳು ಈ 60 ಲಕ್ಷ ಮತದಾರರ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಹೊತ್ತಿದ್ದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net