ಸರ್ವಪಕ್ಷ ಸಭೆಗೆ ಪ್ರಧಾನಿ ಗೈರು; ಖರ್ಗೆ ಕಿಡಿ.. ಸಂಘರ್ಷದ ಕಾಲದಲ್ಲೂ ರಾಜಕೀಯ ಮಾಡಬೇಡಿ ಎಂದು ರಿಜಿಜು ತಿರುಗೇಟು! | All Party Meeting

All Party Meeting | ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡುವೆ ವಾಗ್ವಾದ
All Party Meeting | ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡುವೆ ವಾಗ್ವಾದ
Published on
ನವದೆಹಲಿ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಜೋರಾದ ಮಾತಿನ ಚಕಮಕಿ ನಡೆದಿದ್ದು, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪರಸ್ಪರ ವಾಕ್ಸಮರಕ್ಕಿಳಿದಿದ್ದರು ಎಂದು ವರದಿಯಾಗಿದೆ.
ಮಧ್ಯಪ್ರಾಚ್ಯ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದು, ಈ ವಿಷಯದ ಕುರಿತು ಚರ್ಚೆ ಕೋರಿ ತಾವು ಸಭಾಧ್ಯಕ್ಷರಿಗೆ ಎರಡು ಬಾರಿ ಪತ್ರ ಬರೆದಿದ್ದರೂ ಸಮಯ ನಿಗದಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯದ ಕುರಿತು ನಡೆದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗದಿದ್ದನ್ನು ಟೀಕಿಸಿರುವ ಖರ್ಗೆ, ಇಡೀ ಜಗತ್ತು ಎಲ್‌ಪಿಜಿ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದ ಬಳಲುತ್ತಿದೆ, ಭಾರತದಲ್ಲೂ ಬೆಲೆಗಳು ಏರುತ್ತಿವೆ. ಆದರೆ ಸರ್ಕಾರ ಚರ್ಚೆಗೆ ಏಕೆ ಒಪ್ಪುತ್ತಿಲ್ಲ? ನೀವು ಏನು ಬೇಕಾದರೂ ಕಾರ್ಯಸೂಚಿಯಲ್ಲಿ ಇರಿಸಿ ಧ್ವನಿ ಮತದ ಮೂಲಕ ಬಲವಂತವಾಗಿ ಘೋಷಿಸುತ್ತೀರಿ. ಇದು ಪ್ರಜಾಪ್ರಭುತ್ವವೇ? ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.

ರಿಜಿಜು ತಿರುಗೇಟು

ಮಲ್ಲಿಕಾರ್ಜುನ ಖರ್ಗೆ ಆರೋಪಗಳನ್ನು ತಳ್ಳಿಹಾಕಿದ ಸಚಿವ ಕಿರಣ್ ರಿಜಿಜು, ದೇಶ ಒಗ್ಗಟ್ಟಾಗಿ ನಿಲ್ಲಬೇಕಾದ ಸಮಯದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ಸಂಬಂಧಪಟ್ಟ ಸಚಿವರು ಮತ್ತು ಪ್ರಧಾನಿಯವರು ಈಗಾಗಲೇ ಸಂಸತ್ತಿನಲ್ಲಿ ವಿವರವಾದ ಹೇಳಿಕೆಗಳನ್ನು ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆದಾಗ ಕಾಂಗ್ರೆಸ್ ಸದಸ್ಯರು ಬಂದಿದ್ದರೂ, ಲೋಕಸಭೆ ಅಥವಾ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಜರಾಗಲಿಲ್ಲ ಎಂದು ರಿಜಿಜು ಈ ವೇಳೆ ಉಲ್ಲೇಖಿಸಿದ್ದಾರೆ.
ಇದಷ್ಟೆ ಅಲ್ಲದೇ ಹಣಕಾಸು ಸಚಿವರು ಬೆಲೆ ಏರಿಕೆ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಈಗಾಗಲೇ ವಿವರಿಸಿದ್ದಾರೆ. ಜಗತ್ತಿನಾದ್ಯಂತ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ ಮಾಡುವುದು ದುರದೃಷ್ಟಕರ ಎಂದು ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಕಲಿ ಮಂತ್ರಿಗಳು ಎಂದ ಖರ್ಗೆ

ವಾಗ್ದಾಳಿ ತಾರಕಕ್ಕೇರಿದಾಗ ಮತ್ತೇ ಮಾತು ಆರಂಭಿಸಿದ ಖರ್ಗೆ, ನಿಮ್ಮ ಉಪನ್ಯಾಸ ಕೇಳಲು ನಾವು ಹಾಜರಾಗಬೇಕೇ? ನಿಮಗೆ ಯಾವ ಅಧಿಕಾರವಿದೆ? ನೀವೆಲ್ಲರೂ ನಕಲಿ (ಡಮ್ಮಿ) ಮಂತ್ರಿಗಳು, ನಿಮಗೆ ಅಧಿಕಾರವಿಲ್ಲ ಎಂದು ಟೀಕಿಸಿದರು. ವಿಪಕ್ಷ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಜಿಜು, ಖರ್ಗೆ ಅವರು ತಮ್ಮ ಸ್ಥಾನದ ಘನತೆಯನ್ನು ಎತ್ತಿಹಿಡಿಯಲು ವಿಫಲರಾಗಿದ್ದಾರೆ ಮತ್ತು ಪ್ರಧಾನಿಯನ್ನು ನಿಂದಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ, ಅವರು ಹಿರಿಯರೆಂದು ನಾವು ಗೌರವಿಸುತ್ತೇವೆ, ಆದರೆ ಅವರು ಮತ್ತು ಲೋಕಸಭೆಯ ವಿಪಕ್ಷ ನಾಯಕರು ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ರಿಜಿಜು ಕಿಡಿ ಕಾರಿದರು.

ಸದನದ ಕಾರ್ಯಸೂಚಿ ಮತ್ತು ಮಸೂದೆಗಳು

ರಾಜ್ಯಸಭೆಯ ಸಭಾಪತಿಗಳಾದ ಸಿ ಪಿ ರಾಧಾಕೃಷ್ಣನ್ ಅವರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಮಸೂದೆ 2026 ಮತ್ತು ದಿವಾಳಿತನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸದನವು ಊಟದ ವಿರಾಮವಿಲ್ಲದೆ ಸಂಜೆ ತಡರಾತ್ರಿಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ವಿಮಾನ ಇಂಧನದ ಮೇಲಿನ ಸುಂಕ ವಿಧಿಸುವ ಕುರಿತೂ ಚರ್ಚೆ ನಡೆಸಲು ನಿರ್ಧರಿಸಲಾಯಿತು. ಈ ವೇಳೆ ಸಚಿವ ರಿಜಿಜು, ಮಸೂದೆಗಳ ಚರ್ಚೆಗೆ ಬಿಜೆಪಿ ತನ್ನ ಸಮಯವನ್ನು ತ್ಯಾಗ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.
ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಬೆಲೆ ಏರಿಕೆ ಕುರಿತ ಈ ಸಂಸದೀಯ ಸಂಘರ್ಷವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಗಂಭೀರ ಚರ್ಚೆಗೆ ನಾಂದಿ ಹಾಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net