ಅಸ್ಸಾಂನಲ್ಲಿ ಪಂಚ ಗ್ಯಾರಂಟಿ ಹವಾ...ಈ ನಾಯಕನನ್ನು ಕಡೆಗಣಿಸಿ ಕುರ್ಚಿ ಏರಿದ ಶರ್ಮಾ..ಬಿಜೆಪಿಯ 5 ವರ್ಷದ ಹಿಂದಿನ ಕಥೆ ಬಿಚ್ಚಿಟ್ಟ ಎಐಸಿಸಿ ಅಧ್ಯಕ್ಷ ಖರ್ಗೆ! | Mallikarjun Kharge

 Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Published on
ದಿಸ್ಪೂರ್​: ಅಸ್ಸಾಂನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭಾನುವಾರ (ಮಾ.29) ಪಕ್ಷದ ಅಧಿಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಐದು ಪ್ರಮುಖ ಭರವಸೆಗಳನ್ನು ಈಡೇರಿಸುವುದಾಗಿ ಘೋಷಿಸಿದರು.
ಲಖಿಂಪುರ ಜಿಲ್ಲೆಯ ನವೋಬೊಯಿಚಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಖರ್ಗೆ, ಮಹಿಳೆಯರ ಕಲ್ಯಾಣ, ಆರೋಗ್ಯ ರಕ್ಷಣೆ, ಭೂ ಹಕ್ಕುಗಳು ಮತ್ತು ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ನ್ಯಾಯ ಒದಗಿಸುವುದು ತಮ್ಮ ಪಕ್ಷದ ಮುಖ್ಯ ಆದ್ಯತೆಗಳಾಗಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಮಾಡುವುದರ ಜೊತೆಗೆ, ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವ ಮಹಿಳೆಯರಿಗೆ ಹೆಚ್ಚುವರಿಯಾಗಿ 50,000 ರೂಪಾಯಿಗಳ ನೆರವು ನೀಡಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.
ಇದರೊಂದಿಗೆ ಪ್ರತಿಯೊಂದು ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ನಗದು ರಹಿತ ಆರೋಗ್ಯ ವಿಮೆ, 10 ಲಕ್ಷ ಸ್ಥಳೀಯ ಜನರಿಗೆ ಶಾಶ್ವತ ಭೂಮಿಯ ಪಟ್ಟಾ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ 1,250 ರೂಪಾಯಿಗಳ ಗೌರವಧನವನ್ನು ನೀಡುವುದಾಗಿ ಘೋಷಿಸಿದರು. ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 100 ದಿನಗಳಲ್ಲೇ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಹಿಮಂತ್​​ ಶರ್ಮಾ ನಕಲಿ ಸಿಎಂ

ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಅಸ್ಸಾಂನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಬಿಜೆಪಿ ಅಸ್ಸಾಂ ಅನ್ನು ಲೂಟಿ ಮಾಡಲು ಡಬಲ್ ಎಂಜಿನ್ ಸರ್ಕಾರವನ್ನು ಬಳಸುತ್ತಿದೆ ಮತ್ತು ತನ್ನ ನಾಯಕರ ಕುಟುಂಬಗಳ ಖಜಾನೆ ತುಂಬಿಸುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರನ್ನು ನಕಲಿ ಸಿಎಂ ಎಂದು ಕರೆದ ಖರ್ಗೆ, 2021 ರ ಚುನಾವಣೆಯಲ್ಲಿ ಬುಡಕಟ್ಟು ನಾಯಕ ಸರ್ಬಾನಂದ ಸೋನೋವಾಲ್ ನೇತೃತ್ವದಲ್ಲಿ ಬಿಜೆಪಿ ಸ್ಪರ್ಧಿಸಿದ್ದರೂ, ಶರ್ಮಾ ಅಧಿಕಾರಕ್ಕಾಗಿ ಸೋನೋವಾಲ್​ರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.​ ಶರ್ಮಾ ಸರ್ಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್​​ ಅಧ್ಯಕ್ಷರು, ಈ ಚುನಾವಣೆಯಲ್ಲಿ ಅಸ್ಸಾಂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
26 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net