ಬಿಜೆಪಿಯೇ ಎ-ಟೀಮ್...ಎಲ್‌ಡಿಎಫ್-ಯುಡಿಎಫ್ ಪೊಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ ಅಂದ್ರು ಪ್ರಧಾನಿ ಮೋದಿ | Narendra Modi

Narendra Modi | ಪಾಲಕ್ಕಾಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
Narendra Modi | ಪಾಲಕ್ಕಾಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
Published on
ತಿರುವನಂತಪುರಂ: ಕೇರಳದ ರಾಜಕೀಯ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದ್ದು, ರಾಜ್ಯವು ಈಗ ಬದಲಾವಣೆಯ ಸಂದೇಶವನ್ನು ಇಡೀ ದೇಶಕ್ಕೆ ಕಳುಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಾಲಕ್ಕಾಡ್‌ನಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೇರಳದ ಯುವಕರು, ಮಹಿಳೆಯರು ಮತ್ತು ರೈತರು ಈಗ ಎನ್‌ಡಿಎ ಮೇಲೆ ಹೆಚ್ಚಿನ ನಂಬಿಕೆ ಇಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷವು ಕೇರಳವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುತ್ತದೆ ಮತ್ತು ಮೋದಿ ಭರವಸೆಗಳ ಬಲದ ಮೇಲೆ ರಾಜ್ಯವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿದೆ ಎಂದು ಭರವಸೆ ನೀಡಿದರು.

ಕೇರಳದ ಮನಸ್ಥಿತಿ ಚಳುವಳಿಯಾಗಿ ರೂಪಾಂತರಗೊಂಡಿದೆ

ಕೇರಳದಲ್ಲಿ ತಮಗೆ ಹೊಸ ಮತ್ತು ವಿಶಿಷ್ಟ ಶಕ್ತಿ ಸಿಕ್ಕಿದೆ ಎಂದಿರುವ ಪ್ರಧಾನಿ, ಎನ್‌ಡಿಎಯ ಜನಪ್ರಿಯತೆ ಹೆಚ್ಚುತ್ತಿರುವುದು ಮತ್ತು ಬಿಜೆಪಿಗೆ ಸಿಗುತ್ತಿರುವ ಬೆಂಬಲವು ಕೇರಳದ ಮನಸ್ಥಿತಿ ಒಂದು ಚಳುವಳಿಯಾಗಿ ರೂಪಾಂತರಗೊಂಡಿರುವುದನ್ನು ತೋರಿಸುತ್ತದೆ. ಜನರು ಇನ್ನು ಮುಂದೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ನೀಡುವ ಪೊಳ್ಳು ಭರವಸೆಗಳಿಗೆ ಮರಳಾಗುವುದಿಲ್ಲ, ಬಿಜೆಪಿ-ಎನ್‌ಡಿಎ ಮಾತ್ರ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ನೈಜ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ ಎಂದರು.
ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಈ ಎರಡೂ ಪಕ್ಷಗಳು ದಶಕಗಳಿಂದ ಕೇರಳದಲ್ಲಿ ಅಧಿಕಾರಕ್ಕೆ ಬಂದಿವೆ. ಹಲವಾರು ಹಗರಣಗಳು ನಡೆದಿದ್ದರೂ ಎರಡೂ ಮೈತ್ರಿಕೂಟಗಳು ಪರಸ್ಪರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ಪರಸ್ಪರ ಬಿ ಟೀಮ್​ ಎಂದು ಆರೋಪಿಸಿಕೊಳ್ಳುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಮಾತ್ರ ಎ ಟೀಮ್​ ಮತ್ತು ಏಕೈಕ ಸ್ಪರ್ಧಿ ಎಂಬುದನ್ನು ಅವರಿಬ್ಬರೂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇರಳದ ಅಭಿವೃದ್ಧಿಗಿಂತ ಹೆಚ್ಚಾಗಿ ಮತಬ್ಯಾಂಕ್ ರಾಜಕೀಯಕ್ಕೇ ಈ ಮೈತ್ರಿಕೂಟಗಳು ಆದ್ಯತೆ ನೀಡಿದ್ದು, ಇಲ್ಲಿ ರಚನೆಯಾಗುವ ಬಿಜೆಪಿ-ಎನ್‌ಡಿಎ ಸರ್ಕಾರವು ರಾಜ್ಯದ ತ್ವರಿತ ಅಭಿವೃದ್ಧಿಗೆ ಚಾಲನೆ ನೀಡುತ್ತದೆ ಎಂದರು. ಪಾಲಕ್ಕಾಡ್ ಸಮಾವೇಶದ ಬಳಿಕ ಪ್ರಧಾನಿ ಮೋದಿ ತ್ರಿಶೂರ್‌ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ನಗರದ ಹೃದಯ ಭಾಗದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ವರದಿಯಾಗಿದೆ.
2026ರ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದು, ಏಪ್ರಿಲ್ 9 ರಂದು ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಈ ಬಾರಿ ಕೇರಳದಲ್ಲಿ ಕಮಲ ಅರಳುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net