ಇಷ್ಟಕ್ಕೆ ಕೂರುವವರಲ್ಲ ಇನ್ನಷ್ಟು ಕಠಿಣ ಕ್ರಮ: ಮಧ್ಯರಾತ್ರಿ ವಿಡಿಯೋ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ಮೋದಿ ಅಭಯ! PM Modi

ಇಷ್ಟಕ್ಕೆ ಕೂರುವವರಲ್ಲ ಇನ್ನಷ್ಟು ಕಠಿಣ ಕ್ರಮ: ಮಧ್ಯರಾತ್ರಿ ವಿಡಿಯೋ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ಮೋದಿ ಅಭಯ! PM Modi
ಇಷ್ಟಕ್ಕೆ ಕೂರುವವರಲ್ಲ ಇನ್ನಷ್ಟು ಕಠಿಣ ಕ್ರಮ: ಮಧ್ಯರಾತ್ರಿ ವಿಡಿಯೋ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ಮೋದಿ ಅಭಯ! PM Modi
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಠಿಣ ಕ್ರಮದ ಭರವಸೆ ನೀಡಿದ ಪ್ರಧಾನಿ ಮೋದಿ
  • ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಮಧ್ಯರಾತ್ರಿ ವೀಡಿಯೋ ಸಂದೇಶ ಹಂಚಿಕೊಂಡ ಪ್ರಧಾನಿ
  • ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಂಸತ್ತಿನಲ್ಲಿ ಹೊಸ ಮಸೂದೆ ಮಂಡಿಸಲು ಕೇಂದ್ರದ ಸಿದ್ಧತೆ
  • ಸಚಿವ ಸಂಪುಟ ಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆಯಲು ಮಹತ್ವದ ತೀರ್ಮಾನ ಸದ್ಯದಲ್ಲೇ
ನವದೆಹಲಿ: ದೇಶಾದ್ಯಂತ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿರುವ 'ನೀಟ್-ಯುಜಿ' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ( PM Modi ) ಅವರು ವಿಶೇಷ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಕ್ರಮದ ರೂವಾರಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಧ್ಯರಾತ್ರಿ ತಮ್ಮ ಎಕ್ಸ್​ ಖಾತೆಯಲ್ಲಿ ಸೆಲ್ಫಿ ವಿಡಿಯೋ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಸಾಮಾನ್ಯ ವಿಷಯವಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತೀವ್ರ ನೋವು ತಂದಿದೆ ಎಂಬುದು ನನಗೆ ತಿಳಿದಿದೆ. ಇದೇ ಕಾರಣಕ್ಕೆ ಕಳೆದ ಎರಡೂವರೆ ತಿಂಗಳುಗಳಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಕ್ರಮ ಎಸಗಿದ ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ವಿದ್ಯಾರ್ಥಿಗಳ ಒಂದೇ ಒಂದು ವರ್ಷವು ಕೂಡ ವ್ಯರ್ಥವಾಗಬಾರದು ಎಂಬುದು ನಮ್ಮ ಪ್ರಮುಖ ಆದ್ಯತೆಯಾಗಿದ್ದರಿಂದ, ಕೂಡಲೇ ಪರೀಕ್ಷೆಗಳನ್ನು ನಡೆಸುವುದು ಅತ್ಯಂತ ಅಗತ್ಯವಾಗಿತ್ತು ಎಂದು ಪ್ರಧಾನಿ ಹೇಳಿದರು.
ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿದೆ. ಜುಲೈ 19 ರಂದು ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ. ಆದರೆ, ನಾವು ಇಷ್ಟಕ್ಕೇ ತೃಪ್ತರಾಗಿ ಕೂರುವವರಲ್ಲ. ಪರೀಕ್ಷಾ ಅಕ್ರಮಗಳ ತ್ವರಿತ ವಿಚಾರಣೆಗಾಗಿ 'ಫಾಸ್ಟ್ ಟ್ರ್ಯಾಕ್' ನ್ಯಾಯಾಲಯ ಸ್ಥಾಪಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಇಲಾಖೆಯ ಅಧಿಕಾರಿಗಳು ಶ್ರಮಿಸಿ ತಡರಾತ್ರಿ ನನಗೆ ಈ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಅಂತಿಮ ರೂಪ ನೀಡಲಾಗುವುದು. ಸಂಸತ್ತಿನ ಮುಂದಿನ ಅಧಿವೇಶನದ ಆರಂಭದಲ್ಲೇ ಈ ಹೊಸ ಮಸೂದೆಯನ್ನು ಮಂಡಿಸಿ, ಆದಷ್ಟು ಬೇಗ ಕಾಯ್ದೆಯಾಗಿ ಅಂಗೀಕರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಅಂದಹಾಗೆ, ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಜನಾಕ್ರೋಶ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹತ್ವದ ನಿರ್ಧಾರ ಹಾಗೂ ಅಭಯದ ಭರವಸೆಯನ್ನು ನೀಡಿದ್ದಾರೆ. ಇಂದು ನಡೆಯಲಿರುವ ಸಚಿವು ಸಂಪುಟದ ಬಳಿಕ ಕೇಂದ್ರ ಸರ್ಕಾರದ ಮುಂದಿನ ಕ್ರಮಗಳು ಏನು ಎಂಬುದು ಕೂಡ ಸ್ಪಷ್ಟವಾಗುವ ಸಾಧ್ಯತೆ ಇದೆ.

ಉಪವಾಸ ಸತ್ಯಾಗ್ರಹ ಅಂತ್ಯ

ಕಳೆದ 26 ದಿನಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಪರಿಸರವಾದಿ ಹಾಗೂ ಹೋರಾಟಗಾರ ಸೋನಮ್​ ವಾಂಗ್ವುಕ್​ ( Sonam Wangchuk ) ತೆರೆಎಳೆದಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನೀಡಿದ ಸ್ಪಷ್ಟ ಭರವಸೆಯ ಬೆನ್ನಲ್ಲೇ, ವಾಂಗ್ಚುಕ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಅವರಿಗೆ ಸೂಪ್​ ಕುಡಿಸುವ ಮೂಲಕ ಉಪವಾಸ ಹಿಂಪಡೆಯಲು ನೆರವಾದರೆ, ಅವರ ಧರ್ಮಪತ್ನಿ ಗೀತಾಂಜಲಿ ಆಂಗ್ಮೊ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net