ಸಚಿವ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಕೈ ಹಿಡಿದುಕೊಂಡು ಮಾತನಾಡಿದ ಸೋನಮ್ ವಾಂಗ್ಚುಕ್, ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿರುವುದಕ್ಕೆ ನನಗೆ ಅತ್ಯಂತ ಸಂತೋಷ ಮತ್ತು ಕೃತಜ್ಞತೆಯೆನಿಸುತ್ತಿದೆ ಎಂದರು. ನಂತರ ತಮ್ಮ ಪತ್ನಿಯತ್ತ ತಿರುಗಿ, ಗೀತಾಂಜಲಿ ಸದಾ ನನ್ನ ಜೊತೆಗಿದ್ದಾಳೆ, ಆಕೆಗೆ ಧನ್ಯವಾದ ಹೇಳುವ ಬದಲು ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹಂಚಿಕೊಂಡರು. ಇದೇ ವೇಳೆ ಸಚಿವ ನಡ್ಡಾ ಅವರು ಸರ್ಕಾರದ ಅಭಯದ ಪತ್ರವನ್ನು ಓದುತ್ತಾ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಹಾಗೂ ಜುಲೈ 20, 2026 ರಂದು ಸಂಸತ್ ಚಲೋ ನಡೆಸಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದರು. ಜೊತೆಗೆ, ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣೆಗಳು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಇತ್ತೀಚಿನ ನೀಟ್ (NEET) ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.