ನಾನು ಉಪವಾಸ ನಿಲ್ಲಿಸುತ್ತೇನೆ, ಆದರೆ.....: ಕೇಂದ್ರ ಸರ್ಕಾರದ ಮುಂದೆ ಸೋನಮ್​ ವಾಂಗ್​ಚುಕ್​ ಇಟ್ಟ 'ಆ' ಬೇಡಿಕೆಯೇನು? Sonam Wangchuk on Hunger Strike

ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್
ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್
  • ಪ್ರತಿಭಟನಾನಿರತ ಯುವಕರ ಮೇಲಿನ ಪೊಲೀಸ್ ಕೇಸ್ ಹಿಂಪಡೆಯುವಂತೆ ಕೇಂದ್ರಕ್ಕೆ ಷರತ್ತು
  • ಷರತ್ತಿಗೆ ಒಪ್ಪದಿದ್ದರೆ ಉಪವಾಸ ನಿಲ್ಲಿಸಲ್ಲ ಎಂದ ವಾಂಗ್​ಚುಕ್​
ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ.
ಪರಿಸರವಾದಿ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ (Sonam Wangchuk on Hunger Strike) ಕೇಂದ್ರ ಸರ್ಕಾರಕ್ಕೆ ಮಹತ್ವದ ಪತ್ರ ಬರೆದಿದ್ದು, ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಸ್ಪಷ್ಟ 'ಷರತ್ತು' ಒಂದನ್ನು ಮುನ್ನೆಲೆಗೆ ತಂದಿದ್ದಾರೆ.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿರುವ ವಾಂಗ್‌ಚುಕ್, ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವಕರು ಮತ್ತು ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಪೋಲಿಸ್ ಪ್ರಕರಣ, ಶಿಕ್ಷೆ ಅಥವಾ ಪ್ರತೀಕಾರದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಭರವಸೆ ನೀಡಿದರೆ ಮಾತ್ರ ತಾವು ಉಪವಾಸವನ್ನು ಕೈಬಿಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಚಿವರ ಭೇಟಿಗೆ ಧನ್ಯವಾದ, ಆದರೆ ಪಟ್ಟು ಸಡಿಲಿಸದ ವಾಂಗ್‌ಚುಕ್!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವರಿಗೆ ವಾಂಗ್‌ಚುಕ್ ಧನ್ಯವಾದ ಅರ್ಪಿಸಿದ್ದಾರೆ. ಮಾತುಕತೆಯ ವೇಳೆ ತಾವು ಎತ್ತಿದ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂಬ ಭರವಸೆ ತಮಗಿದೆ ಎಂದಿದ್ದಾರೆ. ಆದರೆ, ಹೋರಾಟದ ಹಾದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ 'ಚಲೋ ಸಂಸದ್' ಮೆರವಣಿಗೆ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ಆದಾಗ್ಯೂ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಇನ್ಮುಂದೆ ವಿದ್ಯಾರ್ಥಿಗಳ ವಿರುದ್ಧ ಇಂತಹ ಅತಿಯಾದ ಪೊಲೀಸ್ ಬಲಪ್ರಯೋಗ ನಡೆಯುವುದಿಲ್ಲ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

65 ಸಂಸದರ ಮನವಿ, ಆದರೂ ಯುವಕರ ಹಿತವೇ ಮುಖ್ಯ!

ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ವಾಂಗ್‌ಚುಕ್ ಅವರಿಗೆ ಪತ್ರ ಬರೆದು, ದೇಶಕ್ಕೆ ನಿಮ್ಮ ಅಗತ್ಯವಿದೆ, ದಯವಿಟ್ಟು ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಂಗ್‌ಚುಕ್, ನನಗೂ ನನ್ನ ವಿದ್ಯಾರ್ಥಿಗಳ ಬಳಿಗೆ ಹಿಂತಿರುಗಿ ಮತ್ತೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಆಸೆಯಿದೆ. ಆದರೆ, ಈ ಹೋರಾಟವನ್ನು ನಂಬಿ ಬೀದಿಗಿಳಿದ ಯುವಜನರ ಬಲಿ ಕೊಟ್ಟು ನಾನು ವಾಪಸ್ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಷರತ್ತಿಗೆ ಒಪ್ಪದಿದ್ದರೆ ಉಪವಾಸ ನಿಲ್ಲಿಸಲ್ಲ!

ಯಾವುದೇ ಯುವ ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಬೇಕು. ಒಂದು ವೇಳೆ ಸರ್ಕಾರ ಈ ಭರವಸೆ ನೀಡದಿದ್ದರೆ, ತಮ್ಮ ಜೀವ ಹೋದರೂ ಚಿಂತೆಯಿಲ್ಲ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದು ತಮಗೆ ಅನಿವಾರ್ಯವಾಗುತ್ತದೆ ಎಂದು ವಾಂಗ್‌ಚುಕ್ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net