ವ್ಯಕ್ತಿಯ ಜೇಬಿಗೆ ಕೈಹಾಕಿ 81,800 ರೂ. ಕದ್ದ ಮಂಗ! ಮರದ ಮೇಲತ್ತಿ ಒಂದೊಂದೇ ನೋಟು ಬಿಸಾಡಿದ ದೃಶ್ಯ ವೈರಲ್​ | Viral Video

 Viral Video
ವ್ಯಕ್ತಿಯ ಜೇಬಿಗೆ ಕೈಹಾಕಿ 81,800 ರೂ. ಕದ್ದ ಮಂಗ! ಮರದ ಮೇಲತ್ತಿ ಒಂದೊಂದೇ ನೋಟು ಬಿಸಾಡಿದ ದೃಶ್ಯ ವೈರಲ್​ | Viral Video
Published on: 

Viral Video: ಕೋತಿಗಳು ಹಣ್ಣು ಅಥವಾ ಕೈಯಲ್ಲಿರುವ ತಿಂಡಿ ಪದಾರ್ಥಗಳನ್ನು ಕಸಿದುಕೊಳ್ಳುವುದು ಸಾಮಾನ್ಯ. ಆದರೆ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಕಿಲಾಡಿ ಮಂಗವೊಂದು ಯುವಕನ ಜೇಬಿಗೇ ಕೈಹಾಕಿ, ಬರೋಬ್ಬರಿ 81,800 ರೂ. ಹಣವನ್ನು ಎಗರಿಸಿ, ನಂತರ ಒಂದೊಂದೇ ನೋಟುಗಳನ್ನು ಬಿಸಾಡಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶಿಮ್ಲಾದ ಜಿಲ್ಲಾಧಿಕಾರಿ ಕಚೇರಿ ಸಮೀಪ ಈ ಘಟನೆ ನಡೆದಿದ್ದು, ಯುವಕನೊಬ್ಬ ಬ್ಯಾಂಕ್‌ಗೆ ಜಮೆ ಮಾಡಲು 81,800 ರೂ. ನಗದನ್ನು ಜೇಬಿನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾಗ, ಅಲ್ಲೇ ಸಮೀಪದಲ್ಲಿದ್ದ ಕೋತಿ, ಆ ಹಣವನ್ನು ಕಳ್ಳನಿಗಿಂತ ವೇಗದಲ್ಲಿ ಕದ್ದು ಮರಕ್ಕೆ ಜಿಗಿದಿದೆ. ಗಾಬರಿಗೊಂಡ ವ್ಯಕ್ತಿ, ಕೋತಿ ಹೋದ ಹಾದಿಯನ್ನೇ ಹಿಂಬಾಲಿಸಿಕೊಂಡು ಹೋಗಿದ್ದು, ಹಣವನ್ನು ವಾಪಾಸ್​ ಕೊಡುವಂತೆ ಬೇಡಿಕೊಂಡಿದ್ದಾನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಕೆಲ ಗಂಟೆಗಳ ನಂತರ ಮರದ ಕೊಂಬೆಯ ಮೇಲೆ ಕುಳಿತು ಹಣದ ಕಂತೆಯಿಂದ ಒಂದೊಂದೇ ನೋಟುಗಳನ್ನು ಕೆಳಗೆ ಎಸೆದಿದೆ. ಮರದಿಂದ ಹಣದ ನೋಟುಗಳು ಹಾರಿಬೀಳುವುದನ್ನು ಕಂಡ ಕೂಡಲೇ, ಅಲ್ಲೇ ಇದ್ದ ಸ್ಥಳೀಯರು ಯುವಕನ ಗೋಳಾಟ ನೋಡಲಾಗದೆ, ಕೆಳಗೆ ಬಿದ್ದಿದ್ದ ಹಣವನ್ನು ಸಂಗ್ರಹಿಸಿ ಆತನಿಗೆ ವಾಪಾಸ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

Also Read
ಪಕ್ಷಿಗಳು ‘V’ ಆಕಾರದಲ್ಲೇ ಹಾರುವುದೇಕೆ ಗೊತ್ತಾ? ಇದರ ಹಿಂದಿದೆ ನಿಮ್ಮ ಹುಬ್ಬೇರಿಸುವ ವೈಜ್ಞಾನಿಕ ರಹಸ್ಯ | Birds Fly
 Viral Video

ಸಿಕ್ಕಿರುವ ಹಣದಲ್ಲಿ 1,500 ರೂ. ಕಡಿಮೆಯಾಗಿದ್ದು, ಕೆಲವು 500 ರೂ. ಮುಖಬೆಲೆಯ ನೋಟುಗಳನ್ನು ಕೋತಿ ಹರಿದು ಚಿಂದಿ ಮಾಡಿದೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ಶಿಮ್ಲಾ ನಗರದಲ್ಲಿ ಕೋತಿಗಳ ಕಾಟ ಹೆಚ್ಚಾಗಿರುವ ಬಗ್ಗೆ ವ್ಯಕ್ತಿ ದೂರು ನೀಡಿದ್ದಾರೆ. ಸ್ಥಳೀಯರು ಹಲವು ಬಾರಿ ದೂರು ಕೊಟ್ಟಿದ್ದರೂ ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇಷ್ಟು ದಿನಗಳವರೆಗೆ ಆಹಾರಕ್ಕೆ ಸಂಬಂಧಿತ ವಸ್ತುಗಳನ್ನು ಮಾತ್ರ ಕಸಿಯುತ್ತಿದ್ದ ಕೋತಿಗಳು, ಈಗ ಯುವಕನ ಜೇಬಿನಲ್ಲಿದ್ದ ಹಣವನ್ನೇ ಎಗರಿಸಿದ ವಿಷಯ ಮತ್ತು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ,(ಏಜೆನ್ಸೀಸ್).