ಬಹಿಷ್ಕಾರ, ಬಂಡಾಯ, ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತ ನಾಯಕ: ಆರ್‌ಎಸ್‌ಎಸ್​​ನಿಂದ ಪ್ರಧಾನಿ ಪೀಠದವರೆಗಿನ ರೋಚಕ ಪಯಣ ಇಲ್ಲಿದೆ! | Modi @76

Modi @76 | ಬಹಿಷ್ಕಾರ, ಬಂಡಾಯ, ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತ ನಾಯಕ
Modi @76 | ಬಹಿಷ್ಕಾರ, ಬಂಡಾಯ, ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತ ನಾಯಕ
Published on
Modi @76: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ಜನ್ಮದಿನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಭಾರತ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ಹಂತದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ, ರಷ್ಯಾ-ಉಕ್ರೇನ್ ಸಂಘರ್ಷ, ಅಮೆರಿಕದ ಕಠಿಣ ಸುಂಕ ನೀತಿಗಳು, ತೈಲ ಬೆಲೆ ಏರಿಕೆ ಮತ್ತು ಪೂರೈಕೆ ಸಾಲಿನ ಅಡಚಣೆಗಳಿಂದ ಉಂಟಾದ ಹಣದುಬ್ಬರ ಜಗತ್ತನ್ನು ಕಂಗೆಡಿಸಿದೆ.
ಪ್ರಧಾನಿ ಮೋದಿ ಅವರ ರಾಜಕೀಯ ಪಯಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರಿಗೆ ಸಂಕಷ್ಟಗಳು ಹೊಸದೇನಲ್ಲ ಎಂಬುದು ಸ್ಪಷ್ಟವಾಗುತ್ತದೆ. 1970ರ ದಶಕದಿಂದ ಆರಂಭವಾದ ಹಿನ್ನಡೆಗಳು, ಬಹಿಷ್ಕಾರಗಳು, ರಾಜಕೀಯ ಒಂಟಿತನ ಮತ್ತು ಅದರಿಂದ ಫಿನಿಕ್ಸ್​ನಂತೆ ಎದ್ದು ಬಂದದ್ದು ಸಹ ನಮ್ಮ ಕಣ್ಣ ಮುಂದಿರುವ ಉದಾಹರಣೆ.

ತುರ್ತುಪರಿಸ್ಥಿತಿಯ ಸವಾಲು (1970ರ ದಶಕ)

ಅಹಮದಾಬಾದ್‌ನ ಆರ್‌ಎಸ್‌ಎಸ್ ಕಚೇರಿಯಲ್ಲಿ ಚಹಾ ಮಾಡುವುದು, ನೆಲ ಗುಡಿಸುವುದರಿಂದ ಹಿಡಿದು ಸಾಮಾನ್ಯ ಕೆಲಸಗಳನ್ನು ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಅಡಿಪಾಯ ಬಲಗೊಂಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಚಾರಕರಾಗಿ. 1975ರಲ್ಲಿ ಇಂದಿರಾ ಗಾಂಧಿಯವರ ಸರ್ಕಾರ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದಾಗ, ಅವರಿಗೆ ತುರ್ತುಪರಿಸ್ಥಿತಿಯೇ ಮೊದಲ ಅಗ್ನಿಪರೀಕ್ಷೆಯಾಯಿತು. ಈ ವೇಳೆ ಮೋದಿ ಅವರು ತಲೆಮರೆಸಿಕೊಂಡು ರಹಸ್ಯವಾಗಿ ಕೆಲಸ ಮಾಡಿದರು. ಸಿಖ್ ವೇಷಧಾರಿಯಾಗಿ ಸಂಚರಿಸುತ್ತಾ, ಸರ್ಕಾರದ ಕಣ್ಣು ತಪ್ಪಿಸಿ ಸಾಹಿತ್ಯ ಹಂಚುವುದು ಮತ್ತು ಸುರಕ್ಷಿತ ತಾಣಗಳನ್ನು ನಿರ್ವಹಿಸುವುದನ್ನು ಕರಗತ ಮಾಡಿಕೊಂಡರು. ಈ ಸುದೀರ್ಘ ಹಾಗೂ ಕಠಿಣ ಅವಧಿಯು ಅವರಿಗೆ ರಾಜಕೀಯ ಉಳಿವು ಮತ್ತು ಸಂಘಟನಾತ್ಮಕ ತಂತ್ರಗಳನ್ನು ಪ್ರತ್ಯಕ್ಷವಾಗಿ ಕಲಿಸಿಕೊಟ್ಟಿತು.

ಗುಜರಾತ್ ರಾಜಕೀಯದ ಬಂಡಾಯ ಮತ್ತು ವನವಾಸ

1990ರ ದಶಕದ ವೇಳೆಗೆ ಗುಜರಾತ್ ಬಿಜೆಪಿ ಸಂಘಟನೆಯಲ್ಲಿ ಮೋದಿ ಪ್ರಮುಖ ಶಕ್ತಿಯಾಗಿ ಬೆಳೆದರು. ಆದರೆ, ಅವರ ಈ ಪ್ರಭಾವವೇ ಆಡಳಿತಾರೂಢ ನಾಯಕರಲ್ಲಿ ಅಸಮಾಧಾನ ಮೂಡಿಸಿತು. 1995ರಲ್ಲಿ ಕೇಶೂಬಾಯಿ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ, ಶಂಕರ್‌ಸಿಂಗ್ ವಘೇಲಾ ಬಂಡಾಯ ಎದ್ದರು ('ಖಜುರಾಹೋ' ಪ್ರಸಂಗ). ಈ ಬಿಕ್ಕಟ್ಟನ್ನು ಶಮನಗೊಳಿಸಲು ಬಿಜೆಪಿ ವರಿಷ್ಠರು ಮಾಡಿಕೊಂಡ ಒಪ್ಪಂದದಂತೆ, ಮೋದಿಯವರನ್ನು ಗುಜರಾತ್ ರಾಜಕೀಯದಿಂದ ಹೊರಗೆ ಕಳುಹಿಸಲಾಯಿತು.
ಇದನ್ನು ಮೋದಿ ಅವರು ರಾಜಕೀಯ ಅಪಮಾನ ಎಂದೇ ಭಾವಿಸಿದ್ದರು. ದೆಹಲಿ ಮತ್ತು ಚಂಡೀಗಢಗಳಲ್ಲಿ ಪಕ್ಷದ ಕಾರ್ಯದರ್ಶಿಯಾಗಿ ನಿಯೋಜನೆಗೊಂಡ ಮುಂದಿನ 18 ತಿಂಗಳುಗಳು ಅವರಿಗೆ ರಾಜಕೀಯ ಒಂಟಿತನದ ದಿನಗಳಾಗಿದ್ದವು. ಆದರೆ, ಈ ವನವಾಸವನ್ನು ಅವರು ಅವಕಾಶವಾಗಿ ಬದಲಿಸಿಕೊಂಡು, ಉತ್ತರ ಭಾರತದಾದ್ಯಂತ ಪಕ್ಷದ ಜಾಲವನ್ನು ಬಲಪಡಿಸಲು ಬಳಸಿಕೊಂಡರು. ಆಪತ್ತನ್ನು ಅವಕಾಶವಾಗಿ ಪರಿವರ್ತಿಸುವುದು ಎಂಬ ತತ್ವಕ್ಕೆ ಅವರ ಈ ಅವಧಿಯೇ ಜೀವಂತ ಸಾಕ್ಷಿ.

ಮುಖ್ಯಮಂತ್ರಿ ಮತ್ತು ಗೋದ್ರಾ ದುರಂತ

2001ರಲ್ಲಿ ಭುಜ್ ಭೂಕಂಪದ ನಂತರದ ಆಡಳಿತಾತ್ಮಕ ವೈಫಲ್ಯದಿಂದಾಗಿ ಕೇಶೂಬಾಯಿ ಪಟೇಲ್ ಅವರನ್ನು ಬದಲಾಯಿಸಲು ಬಿಜೆಪಿ ನಿರ್ಧರಿಸಿದಾಗ, ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಶಾಸಕರಾಗಿರದ ಅವರಿಗೆ ಸೂಕ್ತ ಕ್ಷೇತ್ರ ಹುಡುಕುವುದೂ ಸವಾಲಾಗಿತ್ತು. ಹರೇನ್ ಪಾಂಡ್ಯ ತಮ್ಮ ಕ್ಷೇತ್ರ ಬಿಟ್ಟುಕೊಡಲು ನಿರಾಕರಿಸಿದಾಗ, ಅಂತಿಮವಾಗಿ ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ತೆರವುಗೊಳಿಸಿದ ರಾಜ್‌ಕೋಟ್-II ಕ್ಷೇತ್ರದಿಂದ ಸ್ಪರ್ಧಿಸಿ ಮೋದಿ ವಿಧಾನಸಭೆ ಪ್ರವೇಶಿಸಿದರು.
ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ 2002ರ ಗೋದ್ರಾ ರೈಲು ದುರಂತ ಮತ್ತು ತದನಂತರದ ಕೋಮು ಗಲಭೆಗಳು ಸಂಭವಿಸಿದವು. ಇದು ಅವರ ರಾಜಕೀಯ ಜೀವನದ ಅತ್ಯಂತ ಕರಾಳ ಮತ್ತು ಸವಾಲಿನ ಘಟ್ಟವಾಯಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧರ್ಮದ ನೆನಪು ಮಾಡಿಕೊಟ್ಟರು. ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ರಾಜೀನಾಮೆಗೆ ಮುಂದಾದರಾದರೂ, ಪಕ್ಷ ಅದನ್ನು ನಿರಾಕರಿಸಿತು. ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆ, 2005ರಲ್ಲಿ ಅಮೆರಿಕದಿಂದ ವೀಸಾ ನಿರಾಕರಣೆ ಮತ್ತು ತೀವ್ರ ಕಾನೂನು ತನಿಖೆಗಳ ನಡುವೆಯೂ ಅವರು ಧೃತಿಗೆಡಲಿಲ್ಲ. ತದನಂತರ, ವಿಕಾಸ್ ಪುರುಷ ಬಿರುದಿನೊಂದಿಗೆ ಗುಜರಾತ್ ಮಾಡೆಲ್ ಅಭಿವೃದ್ಧಿ ನೀತಿಯನ್ನು ಮುನ್ನೆಲೆಗೆ ತಂದು, ಅಭಿವೃದ್ಧಿ ಹಾಗೂ ಹಿಂದುತ್ವದ ಸಮ್ಮಿಶ್ರಣದ ಮೂಲಕ ತಮ್ಮ ನಾಯಕತ್ವವನ್ನು ಪುನರ್ಪ್ರತಿಷ್ಠಾಪಿಸಿಕೊಂಡರು.

ದೆಹಲಿಗೆ ಕರೆತಂದ ಹ್ಯಾಟ್ರಿಕ್​ ಗೆಲುವು!

2012ರ ಗುಜರಾತ್ ಚುನಾವಣೆಯ ಸತತ ಮೂರನೇ ಗೆಲುವು ಮೋದಿಯವರನ್ನು ದೆಹಲಿಯತ್ತ ಕರೆತಂದಿತು. 2013ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗಿ, 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಐತಿಹಾಸಿಕ ಜಯ ಸಾಧಿಸಿದರು. ಆದರೆ, ಪ್ರಧಾನಿಯಾಗಿ ಅವರ ಎರಡನೇ ಮತ್ತು ಮೂರನೇ ಅವಧಿಗಳು ಹಿಂದೆಂದೂ ಕಾಣದ ಜಾಗತಿಕ ಸವಾಲುಗಳಿಂದ ಕೂಡಿದ್ದವು. ಕೋವಿಡ್-19 ಮಹಾಮಾರಿ, ರಷ್ಯಾ-ಉಕ್ರೇನ್ ಯುದ್ಧ, ಪಹಲ್ಗಾಮ್ ಉಗ್ರರ ದಾಳಿ ಮತ್ತು 2025ರ ಪಾಕಿಸ್ತಾನದೊಂದಿಗಿನ ನಾಲ್ಕು ದಿನಗಳ ಸಂಘರ್ಷ, ಮತ್ತು ಪ್ರಸ್ತುತ ಇರಾನ್-ಅಮೆರಿಕ ಯುದ್ಧದ ಪರಿಣಾಮಗಳು ಭಾರತದ ಆರ್ಥಿಕತೆಯ ಮೇಲೆ ತೀವ್ರ ಒತ್ತಡ ಹೇರಿವೆ.
ನರೇಂದ್ರ ಮೋದಿ ಅವರ ಐದು ದಶಕಗಳ ರಾಜಕೀಯ ಪಯಣವನ್ನು ಗಮನಿಸಿದಾಗ ಒಂದು ಸ್ಪಷ್ಟ ಮಾದರಿ ಗೋಚರಿಸುತ್ತದೆ. ದೊಡ್ಡ ಮಟ್ಟದ ಸವಾಲು, ತಾತ್ಕಾಲಿಕ ಹಿನ್ನಡೆ ಅಥವಾ ಒತ್ತಡ, ತದನಂತರ ಹೊಸ ತಂತ್ರಗಾರಿಕೆಯ ಮೂಲಕ ಬಲವಾದ ಮರುಜೀವ. ಅವರ ರಾಜಕೀಯ ಜೀವನವು ಅಧಿಕಾರದ ಸುಲಭ ಹಾದಿಯಾಗಿರಲಿಲ್ಲ. ಬಿಕ್ಕಟ್ಟುಗಳನ್ನೇ ತಮ್ಮ ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ ಕಥೆಯಾಗಿದೆ. ಸದ್ಯದ ಜಾಗತಿಕ ಹಾಗೂ ಆಂತರಿಕ ಬಿಕ್ಕಟ್ಟುಗಳು ದೊಡ್ಡದಾಗಿದ್ದರೂ, ಮೋದಿಯವರ ಸುದೀರ್ಘ ರಾಜಕೀಯ ಇತಿಹಾಸವು ಅವರು ಇಂತಹ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿ, ಭಾರತವನ್ನು ಸುರಕ್ಷಿತವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. 76ನೇ ವಯಸ್ಸಿನಲ್ಲೂ ಅವರು ಎದುರಿಸುತ್ತಿರುವ ಸವಾಲುಗಳು ದೊಡ್ಡವೇ, ಆದರೆ ಅವರ ರಾಜಕೀಯ ಚೇತರಿಕೆಯ ಇತಿಹಾಸವೂ ಅಷ್ಟೇ ದೃಢವಾಗಿದೆ ಎಂಬುದನ್ನು ನಾವು ಮರೆಯಬಾರದಲ್ಲವೇ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net