ನೀತಿ ಸಂಹಿತೆ ಉಲ್ಲಂಘಿಸಿದರಾ ಪ್ರಧಾನಿ ಮೋದಿ..? ರಾಜಕೀಯ ಲಾಭಕ್ಕೆ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ ಅಂದ್ರು ದೀದಿ! | Mamata Banerjee

Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published on
ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಸರ್ಕಾರ ರಾಜಕೀಯ ಪ್ರಚಾರಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಭಾನುವಾರ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ದೀದಿ, ಮಹಿಳಾ ಮೀಸಲಾತಿ ಮಸೂದೆಯ ಕುರಿತು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮಾಡಿದ ಭಾಷಣವು ಬಿಜೆಪಿ ಪರವಾಗಿ ನಡೆಸಿದ ಅಕ್ರಮ ಪ್ರಚಾರ, ಈ ವರ್ತನೆಯು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಧಾನಿಯವರು ತಮ್ಮ ಪಕ್ಷಕ್ಕಾಗಿ ಕಾನೂನುಬಾಹಿರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ದೇಶದ ಜನರಿಗೆ ಉತ್ತರಿಸಬೇಕು ಎಂದಿರುವ ದೀದಿ, ಮಹಿಳಾ ಮೀಸಲಾತಿ ಮಸೂದೆಯು ಈಗಾಗಲೇ ಸೆಪ್ಟೆಂಬರ್ 2023 ರಲ್ಲಿ ಅಂಗೀಕರಿಸಲ್ಪಟ್ಟಿದ್ದರೂ, ಅದನ್ನು ಈವರೆಗೆ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸುತ್ತಾ, ಒಂದೇ ಮಸೂದೆಯನ್ನು ಸರ್ಕಾರ ಎಷ್ಟು ಬಾರಿ ಮಂಡಿಸುತ್ತದೆ ಮತ್ತು ಈ ಪ್ರಕ್ರಿಯೆಯನ್ನು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯೊಂದಿಗೆ ಏಕೆ ಜೋಡಿಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.
ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಅಗತ್ಯವಾದ ಸಂಖ್ಯಾಬಲವಿಲ್ಲದಿದ್ದರೂ ಸಹ, ಲೋಕಸಭೆಯಲ್ಲಿ ಅದನ್ನು ಮಂಡಿಸುವ ಮೂಲಕ ಬಿಜೆಪಿ ರಾಜಕೀಯ ನಾಟಕವಾಡುತ್ತಿದೆ ಎಂದು ಮಮತಾ ಆರೋಪಿಸಿದ್ದು, ಈ ಬೆಳವಣಿಗೆಯು ಬಿಜೆಪಿಯ ಅವನತಿಯ ಆರಂಭವನ್ನು ಸೂಚಿಸುತ್ತದೆ ಎಂದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲವಾದ ಮರುದಿನವೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷಗಳನ್ನು ಭ್ರೂಣ ಹತ್ಯೆಯ ಪಾಪ ಮಾಡಿದವರು ಎಂದು ಟೀಕಿಸಿದ್ದರು. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸವನ್ನು ದೀದಿ ವ್ಯಕ್ತಪಡಿಸಿದ್ದಾರೆ.

ಟಿಎಂಸಿಯಿಂದ ತಾಯಂದಿರಿಗೆ ಮೋಸ...

ಜಾರ್ಗ್ರಾಮ್‌ನಲ್ಲಿ ಭಾನುವಾರ (ಏಪ್ರಿಲ್ 19) ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಪಕ್ಷವು ಮಾ, ಮತಿ, ಮಾನುಷ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ತಾಯಂದಿರಿಗೇ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ಸಂಸತ್ತಿನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಬಿಜೆಪಿಯ ಪ್ರಯತ್ನಗಳನ್ನು ಟಿಎಂಸಿ ವಿರೋಧಿಸುವ ಮೂಲಕ ಹೆಣ್ಣುಮಕ್ಕಳ ರಾಜಕೀಯ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ಅಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ಈ ಹಿಂದೆ ಕಾಂಗ್ರೆಸ್ ಮತ್ತು ಟಿಎಂಸಿ ಭಾಗಿಯಾಗಿದ್ದ ಸರ್ಕಾರಗಳ ಅವಧಿಯಲ್ಲಿ ಕೇವಲ 8-10 ಸಣ್ಣ ಅರಣ್ಯ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಲಾಗುತ್ತಿತ್ತು, ಆದರೆ ಇಂದು ಬಿಜೆಪಿ ಸರ್ಕಾರವು ಸುಮಾರು 100 ಉತ್ಪನ್ನಗಳಿಗೆ ಎಂಎಸ್‌ಪಿ ವಿಸ್ತರಿಸಿದೆ. ಒಡಿಶಾ ಮತ್ತು ಛತ್ತೀಸ್‌ಗಢದ ಬಿಜೆಪಿ ಸರ್ಕಾರಗಳಂತೆ ಬಂಗಾಳದ ಬುಡಕಟ್ಟು ಕುಟುಂಬಗಳಿಗೂ ಈ ಎಲ್ಲ ಸೌಲಭ್ಯಗಳು ತಲುಪುವಂತೆ ಮಾಡುವುದು ಮೋದಿ ಗ್ಯಾರಂಟಿ ಎಂದು ಭರವಸೆ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net