ನಾಲ್ವರು ಅಧಿಕಾರಿಗಳ ವಜಾ; ಈಗ ಪರಿಸರ ಸಚಿವಾಲಯ ಪ್ರವಚನ ಸಚಿವಾಲಯವಾಗಿದೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ | Congress

ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಜೈರಾಮ್ ರಮೇಶ್
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಜೈರಾಮ್ ರಮೇಶ್
Published on
ನವದೆಹಲಿ: ಕೇಂದ್ರ ಪರಿಸರ ಸಚಿವಾಲಯದಲ್ಲಿನ ರಹಸ್ಯ ಕಡತಗಳ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಭೂಪೇಂದ್ರ ಯಾದವ್ ಅವರ ನಾಲ್ವರು ಆಪ್ತ ಸಹಾಯಕ ಅಧಿಕಾರಿಗಳನ್ನು ವಜಾಗೊಳಿಸಿದ ಹಿನ್ನೆಲೆ ಬುಧವಾರ(ಜು. 08) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್(Congress), ಈಗ ಪರಿಸರ ಸಚಿವಾಲಯ ಪ್ರವಚನ ಸಚಿವಾಲಯವಾಗಿದೆ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಆಡಳಿತದಲ್ಲಿ ಸಚಿವರ ವೈಯಕ್ತಿಕ ಸಿಬ್ಬಂದಿಯ ಎಲ್ಲಾ ಪ್ರಮುಖ ನೇಮಕಾತಿಗಳನ್ನು ಪ್ರಧಾನಿ ಕಚೇರಿ ಪರಿಶೀಲಿಸುತ್ತದೆ ಎಂದು ಆರೋಪಿಸಿದ್ದಾರೆ. ಈಗ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನಾಲ್ವರು ಆಪ್ತ ಸಹಾಯಕರನ್ನು ಸತತ ಎರಡು ದಿನಗಳಲ್ಲಿ ಎರಡು ಬ್ಯಾಚ್‌ಗಳಲ್ಲಿ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪರಿಸರ ಮತ್ತು ಅರಣ್ಯಗಳನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ. ದೇಶದ ಪರಿಸರ ಮತ್ತು ಅರಣ್ಯಗಳನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಗ್ರೇಟ್ ನಿಕೋಬಾರ್, ಮಧ್ಯ ಮತ್ತು ಪೂರ್ವ ಭಾರತದ ದಟ್ಟವಾದ ಅರಣ್ಯ ಪ್ರದೇಶಗಳು, ಅರಾವಳಿ ಶ್ರೇಣಿ ಮತ್ತು ಇತರ ಜೀವವೈವಿಧ್ಯ-ಸಮೃದ್ಧ ಪರಿಸರ ವ್ಯವಸ್ಥೆಗಳು ಸೇರಿದಂತೆ ದೇಶಾದ್ಯಂತ ಪರಿಸರ ನಾಶವು ಎಗ್ಗಿಲ್ಲದೇ ನಡೆದಿದೆ. ವಾಯು ಮಾಲಿನ್ಯವು ಸಾರ್ವಜನಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಲೇ ಇದೆ ಮತ್ತು ನವೀಕರಿಸಬೇಕಾದ ಮತ್ತು ಜಾರಿಗೊಳಿಸಬೇಕಾದ ಮಾನದಂಡಗಳು ಅಷ್ಟಿಷ್ಟಲ್ಲ. ಪಟ್ಟಿ ಅಂತ್ಯವಿಲ್ಲ. ಆದರೆ ಮೋದಿ ಆಡಳಿತಕ್ಕೆ ಇದರ ಬಗ್ಗೆ ಕಾಳಜಿಯೇ ಇಲ್ಲವೇ? ಪರಿಸರ ಸಚಿವಾಲಯವೂ, ಪ್ರವಚನ ಸಚಿವಾಲಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಲೈ 3ರಂದು ಹೊರಡಿಸಲಾದ ಪ್ರತ್ಯೇಕ ಅಧಿಕೃತ ಆದೇಶಗಳ ಪ್ರಕಾರ, ಪರಿಸರ ಸಚಿವಾಲಯವು ಏಕಕಾಲದಲ್ಲಿ ಯಾದವ್ ಅವರ ಖಾಸಗಿ ಕಾರ್ಯದರ್ಶಿ ಮತ್ತು ಇಬ್ಬರು ಹೆಚ್ಚುವರಿ ಖಾಸಗಿ ಕಾರ್ಯದರ್ಶಿಗಳನ್ನು ವಜಾಗೊಳಿಸಿದೆ. ಗ್ರೇಟ್ ನಿಕೋಬಾರ್ ಮೆಗಾ ಯೋಜನೆಗೆ ಸಂಬಂಧಿಸಿದ ಗೌಪ್ಯ ಕಡತಗಳ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net