ಮೇಘಾಲಯ ಸರ್ಕಾರಕ್ಕೆ ದೊಡ್ಡ ಆಘಾತ: 8 ಶಾಸಕರ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಯುಡಿಪಿ ಅಧ್ಯಕ್ಷ ರಾಜೀನಾಮೆ! | UDP Minister Resigns

 ಸಚಿವ ಸ್ಥಾನಕ್ಕೆ ಯುಡಿಪಿ ಅಧ್ಯಕ್ಷ ರಾಜೀನಾಮೆ
ಸಚಿವ ಸ್ಥಾನಕ್ಕೆ ಯುಡಿಪಿ ಅಧ್ಯಕ್ಷ ರಾಜೀನಾಮೆ
Published on: 

ಶಿಲ್ಲಾಂಗ್​: ಒಂದು ಕಾಲದಲ್ಲಿ ಮೇಘಾಲಯ ರಾಜಕಾರಣದಲ್ಲಿ ಕಿಂಗ್‌ಮೇಕರ್ ಆಗಿದ್ದ ಪ್ರಾದೇಶಿಕ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (UDP) ಇದೀಗ ತೀವ್ರ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ಹಿರಿಯ ನಾಯಕರಲ್ಲೇ ಉಂಟಾಗಿರುವ ಬಂಡಾಯ ಹಾಗೂ ಪಕ್ಷಾಂತರಗಳು ಯುಡಿಪಿಯನ್ನು ಪತನದ ಅಂಚಿಗೆ ತಂದು ನಿಲ್ಲಿಸಿವೆ. ಇದರ ಪರಿಣಾಮವಾಗಿ ಪಕ್ಷದ ಅಧ್ಯಕ್ಷರೇ ರಾಜೀನಾಮೆ ನೀಡಿರುವ ದೊಡ್ಡ ಬೆಳವಣಿಗೆಯೊಂದು ನಡೆದಿದೆ.

ಕಾನ್ರಾಡ್ ಕೆ. ಸಂಗ್ಮಾ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಯುಡಿಪಿ ಅಧ್ಯಕ್ಷ ಮೆತ್ಬಾಹ್ ಲಿಂಗ್ಡೋ ಅವರು ಶನಿವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಒಟ್ಟು 12 ಶಾಸಕರ ಪೈಕಿ ಬರೋಬ್ಬರಿ 11 ಮಂದಿ ಶಾಸಕರು ಪಕ್ಷ ತೊರೆದಿದ್ದಾರೆ. ಇವರಲ್ಲಿ ಎಂಟು ಮಂದಿ ಬಿಜೆಪಿ ಸೇರಿದ್ದರೆ, ಮೂವರು ಎನ್‌ಪಿಪಿ (NPP) ಪಕ್ಷಕ್ಕೆ ಹಾರಿದ್ದಾರೆ. ಇದರ ಪರಿಣಾಮವಾಗಿ ಯುಡಿಪಿಯು ವಿಧಾನಸಭೆಯಲ್ಲಿ ಕೇವಲ ಒಂದೇ ಒಂದು ಶಾಸಕನನ್ನು ಹೊಂದುವ ಸ್ಥಿತಿಗೆ ತಲುಪಿತ್ತು. ಪಕ್ಷದ ಶಾಸಕರ ಸಾಮೂಹಿಕ ರಾಜೀನಾಮೆಯ ಹಿನ್ನೆಲೆಯಲ್ಲಿ ಮೆತ್ಬಾಹ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಕೆ!

ತಮ್ಮ ರಾಜೀನಾಮೆ ಪ್ರಕಟಿಸಿ ಮಾತನಾಡಿದ ಮೆತ್ಬಾಹ್ ಲಿಂಗ್ಡೋ, ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ ಯುಡಿಪಿಯ 11 ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ. ಈಗ ಪಕ್ಷದಲ್ಲಿ ನಾನೊಬ್ಬನೇ ಏಕಾಂಗಿ ಶಾಸಕನಾಗುಳಿದಿದ್ದೇನೆ. ಪಕ್ಷದ ಶಾಸಕರೇ ಇಲ್ಲದಿರುವಾಗ ನಾನು ಎಂಡಿಎ ಸರ್ಕಾರದಲ್ಲಿ ಸಚಿವನಾಗಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ಇಂದು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಈ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಪಕ್ಷದ ಮೊದಲ ನಿರ್ಣಯವಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಖಾಸಿ-ಜೈಂಟಿಯಾ ಪ್ರದೇಶದ ಪ್ರಬಲ ಪಕ್ಷಕ್ಕೆ ಆಘಾತ!

2023ರ ವಿಧಾನಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಡಿಪಿ ಪಕ್ಷವು ಖಾಸಿ-ಜೈಂಟಿಯಾ ಹಿಲ್ಸ್ ಪ್ರದೇಶದಲ್ಲಿ ಅತ್ಯಂತ ಪ್ರಬಲ ಹಾಗೂ ಏಕೈಕ ದೊಡ್ಡ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಕೇವಲ ಮೂರು ವರ್ಷಗಳ ಅಲ್ಪಾವಧಿಯಲ್ಲಿಯೇ ಇಂತಹದೊಂದು ದೊಡ್ಡ ಮಟ್ಟದ ಶಾಸಕರ ವಲಸೆ ನಡೆದಿರುವುದು ಪಕ್ಷದ ಸಂಘಟನೆಗೆ ದೊಡ್ಡ ಆಘಾತ ತಂದಿದೆ. ಅಧ್ಯಕ್ಷರ ಈ ರಾಜೀನಾಮೆಯು ಪಕ್ಷದ ಭವಿಷ್ಯದ ಉಳಿವಿಗಾಗಿ ನಡೆಯಲಿರುವ ಸರಣಿ ರಾಜಕೀಯ ತೀರ್ಮಾನಗಳ ಮೊದಲ ಹೆಜ್ಜೆಯಾಗಿದೆ ಎಂದು ಅವರು ಸುಳಿವು ನೀಡಿದ್ದಾರೆ. ಒಟ್ಟಾರೆಯಾಗಿ ಮೇಘಾಲಯ ರಾಜಕೀಯದಲ್ಲಿ ಯುಡಿಪಿ ಅಸ್ಥಿರತೆ ಎದುರಿಸುತ್ತಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Also Read
ಮೇಘಾಲಯದಲ್ಲಿ ಇನ್ನು ಕಮಲದ ಕಲರವ: ಬಿಜೆಪಿ ಸೇರಿದ ಮಿತ್ರಪಕ್ಷದ 8 ಶಾಸಕರು! | Meghalaya Politics
 ಸಚಿವ ಸ್ಥಾನಕ್ಕೆ ಯುಡಿಪಿ ಅಧ್ಯಕ್ಷ ರಾಜೀನಾಮೆ

ಬಿಜೆಪಿ ಸೇರಿದ ಮಿತ್ರಪಕ್ಷದ 8 ಶಾಸಕರು!

ಮೇಘಾಲಯದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ (ಯುಡಿಪಿ) ಎಂಟು ಮಂದಿ ಶಾಸಕರು ಸೆಪ್ಟೆಂಬರ್ 23 ರಂದು ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ವಿಶೇಷವೆಂದರೆ, ಬಿಜೆಪಿ ಸೇರಿದ ಎಂಟೂ ಶಾಸಕರು ಕಳೆದ 2023ರ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರಗಳಿಂದ ಗೆದ್ದು ಬಂದವರಾಗಿದ್ದಾರೆ.

ಮೇಘಾಲಯದಲ್ಲಿ ಬಿಜೆಪಿಗೆ ಆನೆಬಲ!

ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗುವುದರೊಂದಿಗೆ, 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರ ಸಂಖ್ಯೆ 2ರಿಂದ 10ಕ್ಕೇರಿದ್ದು, ಪಕ್ಷಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಬಿಜೆಪಿಯಲ್ಲಿ ಈಗಾಗಲೇ ಪೈಂಥೋರುಮ್ಖ್ರಾ ಕ್ಷೇತ್ರದ ಮಾಜಿ ಸಚಿವ ಅಲೆಕ್ಸಾಂಡರ್ ಲಾಲೂ ಹೆಕ್ ಮತ್ತು ದಕ್ಷಿಣ ಶಿಲ್ಲಾಂಗ್ ಕ್ಷೇತ್ರದ ಹಾಲಿ ಸಂಪುಟ ಸಚಿವ ಸಾನ್ಬೋರ್ ಶೊಲೈ ಎಂಬ ಇಬ್ಬರು ಶಾಸಕರಿದ್ದರು. ಇನ್ನೊಂದೆಡೆ, ಈ ಬಂಡಾಯದಿಂದಾಗಿ ಯುಡಿಪಿ ಪಕ್ಷದ ಬಲ ವಿಧಾನಸಭೆಯಲ್ಲಿ ಕೇವಲ 4ಕ್ಕೆ ಕುಸಿದಿದೆ. ಪ್ರಸ್ತುತ ನುಜೋರ್ಕಿ ಸುಂಗೋಹ್, ಪೌಲ್ ಲಿಂಗ್ಡೋ, ಮೆಟ್ಬಾ ಲಿಂಗ್ಡೋ ಮತ್ತು ರೆನಿಕ್ಟನ್ ಲಿಂಗ್ಡೋ ಟಾಂಗ್ಖಾರ್ ಮಾತ್ರ ಯುಡಿಪಿಯ ಶಾಸಕರಾಗಿ ಉಳಿದುಕೊಂಡಿದ್ದಾರೆ(ಏಜೆನ್ಸೀಸ್​).