

Meghalaya Politics: ಮೇಘಾಲಯದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ (ಯುಡಿಪಿ) ಎಂಟು ಮಂದಿ ಶಾಸಕರು ಬುಧವಾರ (ಸೆಪ್ಟೆಂಬರ್ 23) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ವಿಶೇಷವೆಂದರೆ, ಬಿಜೆಪಿ ಸೇರಿದ ಎಂಟೂ ಶಾಸಕರು ಕಳೆದ 2023ರ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರಗಳಿಂದ ಗೆದ್ದು ಬಂದವರಾಗಿದ್ದಾರೆ.
ಲಹ್ಕಮನ್ ರಂಬುಯಿ (ಅಮ್ಲಾರೆಮ್)
ಪಯಸ್ ಮಾರ್ವೆನ್ (ರಾನಿಕೋರ್)
ಕ್ಯೈರ್ಮೆನ್ ಶಿಲ್ಲಾ (ಖ್ಲೀಹ್ರಿಯಾಟ್)
ಮೇರಾಲ್ಬೋರ್ನ್ ಸೈಯೆಮ್ (ನಾಂಗ್ಪೋ)
ಮ್ಯಾಥ್ಯೂ ಬಿಯಾಂಡ್ಸ್ಟಾರ್ ಕುರ್ಬಾ (ಮಾವ್ಫಲಾಂಗ್)
ಓಲನ್ ಸಿಂಗ್ ಸುಯಿನ್ (ಮಾವ್ಸಿನ್ರಾಮ್)
ಬಾಲಾಜೀದ್ ಕುಪಾರ್ ಸಿನ್ರೆಮ್ (ಶೆಲ್ಲಾ)
ಸಿನ್ಶಾರ್ ಲಿಂಗ್ಡೋ ಥಬಾ (ಸೋಹಿಯಾಂಗ್)
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾಗಿದ್ದ ಯುಡಿಪಿಯ ಎಂಟು ಜನ ಶಾಸಕರನ್ನು ಬಿಜೆಪಿ ಕುಟುಂಬಕ್ಕೆ ಮುಕ್ತವಾಗಿ ಸ್ವಾಗತಿಸುವುದಾಗಿ ತಿಳಿಸಿದರು. ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈಶಾನ್ಯ ಭಾರತ ಹಾಗೂ ಮೇಘಾಲಯದಲ್ಲಾದ ಅಭಿವೃದ್ಧಿ ಮತ್ತು ಪರಿವರ್ತನೆ, ಈಶಾನ್ಯದ ಜನರೊಂದಿಗೆ ಮೋದಿ ಹೊಂದಿರುವ ಭಾವನಾತ್ಮಕ ಬಾಂಧವ್ಯ ಮತ್ತು ಬಿಜೆಪಿ ತಂದಿರುವ ಅಭಿವೃದ್ಧಿ ರಾಜಕೀಯವನ್ನು ಕಂಡು ಈ ಶಾಸಕರು ಪಕ್ಷಕ್ಕೆ ಬಂದಿದ್ದಾರೆ. ಈ ಎಂಟೂ ಶಾಸಕರು ಪ್ರಧಾನಿ ಮೋದಿ ಅವರ ಕೆಲಸ ಹಾಗೂ ನಮ್ಮ ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆಗೆ ಅತ್ಯಂತ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗುವುದರೊಂದಿಗೆ, 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರ ಸಂಖ್ಯೆ 2ರಿಂದ 10ಕ್ಕೇರಿದ್ದು, ಪಕ್ಷಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಬಿಜೆಪಿಯಲ್ಲಿ ಈಗಾಗಲೇ ಪೈಂಥೋರುಮ್ಖ್ರಾ ಕ್ಷೇತ್ರದ ಮಾಜಿ ಸಚಿವ ಅಲೆಕ್ಸಾಂಡರ್ ಲಾಲೂ ಹೆಕ್ ಮತ್ತು ದಕ್ಷಿಣ ಶಿಲ್ಲಾಂಗ್ ಕ್ಷೇತ್ರದ ಹಾಲಿ ಸಂಪುಟ ಸಚಿವ ಸಾನ್ಬೋರ್ ಶೊಲೈ ಎಂಬ ಇಬ್ಬರು ಶಾಸಕರಿದ್ದರು. ಇನ್ನೊಂದೆಡೆ, ಈ ಬಂಡಾಯದಿಂದಾಗಿ ಯುಡಿಪಿ ಪಕ್ಷದ ಬಲ ವಿಧಾನಸಭೆಯಲ್ಲಿ ಕೇವಲ 4ಕ್ಕೆ ಕುಸಿದಿದೆ. ಪ್ರಸ್ತುತ ನುಜೋರ್ಕಿ ಸುಂಗೋಹ್, ಪೌಲ್ ಲಿಂಗ್ಡೋ, ಮೆಟ್ಬಾ ಲಿಂಗ್ಡೋ ಮತ್ತು ರೆನಿಕ್ಟನ್ ಲಿಂಗ್ಡೋ ಟಾಂಗ್ಖಾರ್ ಮಾತ್ರ ಯುಡಿಪಿಯ ಶಾಸಕರಾಗಿ ಉಳಿದುಕೊಂಡಿದ್ದಾರೆ.
ಮೇಘಾಲಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 33 ಶಾಸಕರನ್ನು ಹೊಂದಿದೆ. ಈ ಹಠಾತ್ ರಾಜಕೀಯ ಬೆಳವಣಿಗೆಯ ನಂತರ ಬಿಜೆಪಿ ಶಾಸಕರ ಸಂಖ್ಯೆ 2ರಿಂದ 10ಕ್ಕೆ ಏರಿಕೆಯಾಗಿದ್ದರೆ, ಯುಡಿಪಿ 4 ಶಾಸಕರಿಗೆ ಸೀಮಿತವಾಗಿದೆ. ಆದಾಗ್ಯೂ, ಬಿಜೆಪಿ ಮತ್ತು ಯುಡಿಪಿ ಎರಡೂ ಪಕ್ಷಗಳು ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟದಲ್ಲಿ ಪಾಲುದಾರರಾಗಿ ಮುಂದುವರಿಯಲಿವೆ. ಈ ಆಡಳಿತ ಮೈತ್ರಿಕೂಟಕ್ಕೆ ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಎಚ್‌ಸ್‌ಪಿಡಿಪಿ) ಇಬ್ಬರು ಸದಸ್ಯರು ಮತ್ತು ಇಬ್ಬರು ಪಕ್ಷೇತರರ ಬೆಂಬಲವೂ ಇದೆ.
ಪ್ರತಿಪಕ್ಷ ಸಾಲಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್‌ನ (ಎಐಟಿಸಿ) ಐವರು ಹಾಗೂ ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿಯ (ವಿಪಿಪಿ) ನಾಲ್ವರು ಶಾಸಕರಿದ್ದಾರೆ(ಏಜೆನ್ಸೀಸ್).