ಲಖನೌ: ಇವಿಎಮ್ ಮೂಲಕ ನಡೆಯುವ ಚುನಾವಣೆಗಳ ನಂಬಿಕೆ ಮತ್ತು ಪಾರದರ್ಶಕತೆಯನ್ನು ಬಹಿರಂಗವಾಗಿ ಪ್ರಶ್ನಿಸಿರುವ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ (Mayawati), ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ಹಾದಿತಪ್ಪಿಸಲು ಇವಿಎಮ್‌ಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಲಖನೌದಲ್ಲಿ ಉತ್ತರ ಪ್ರದೇಶ ಬಿಎಸ್‌ಪಿ ಘಟಕದ 75 ಜಿಲ್ಲೆಗಳ ಅಧ್ಯಕ್ಷರು, ರಾಜ್ಯ ಹಾಗೂ ವಿಭಾಗೀಯ ಮಟ್ಟದ ಪದಾಧಿಕಾರಿಗಳೊಂದಿಗೆ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಗಳ ಪರಿಶೀಲನಾ ಸಭೆ ನಡೆಸಿದ ನಂತರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಮಾಯಾವತಿ ಈ ವಿಷಯಗಳನ್ನು ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಸಂಶಯಗಳು ಎದ್ದ ತಕ್ಷಣವೇ ಇವಿಎಮ್ ಬಳಕೆಯನ್ನು ಮೊದಲ ಬಾರಿಗೆ ವಿರೋಧಿಸಿದ್ದು ಬಿಎಸ್‌ಪಿ ಪಕ್ಷ ಎಂದು ಮಾಯಾವತಿ ಸ್ಪಷ್ಟಪಡಿಸಿದರು. ಬಹುಜನ ಸಮಾಜದಲ್ಲಿ ಒಗ್ಗಟ್ಟು ಮತ್ತು ರಾಜಕೀಯ ಜಾಗೃತಿಯನ್ನು ಬಿಎಸ್‌ಪಿ ಮೂಡಿಸಿದ ನಂತರ, ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಮೇಲೆಯೇ ಪ್ರಭಾವ ಬೀರಲು ಇವಿಎಮ್‌ಗಳನ್ನು ಹೊಸ ಅಸ್ತ್ರವನ್ನಾಗಿ ರೂಪಿಸಲಾಯಿತು. ನಾವು ಆರಂಭದಲ್ಲೇ ಈ ಕುರಿತು ಕಳವಳ ವ್ಯಕ್ತಪಡಿಸಿದಾಗ, ಅಂದಿನ ವಿರೋಧ ಪಕ್ಷಗಳು ಮತ್ತು ಅಧಿಕಾರಾರೂಢ ವ್ಯವಸ್ಥೆಯ ಪರ ಇರುವ ಗುಂಪುಗಳು ನಮ್ಮ ನಿಲುವನ್ನು ಬೆಂಬಲಿಸಲಿಲ್ಲ ಎನ್ನುವುದನ್ನು ಅವರು ನೆನಪಿಸಿಕೊಂಡರು.
ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ದೇಶದ ಹೆಚ್ಚಿನ ಜನರು ಇವಿಎಮ್ ಆಧಾರಿತ ಮತದಾನ ವ್ಯವಸ್ಥೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಎನ್ನುವುದನ್ನು ನಂಬುತ್ತಿಲ್ಲ. ಅವರು ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಮರು ಜಾರಿಗೆ ತರುವಂತೆ ಒಮ್ಮತದಿಂದ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷವು ಕೂಡ ಚುನಾವಣಾ ಅಕ್ರಮಗಳ ವಿಷಯದಲ್ಲಿ ಇಂತದ್ದೇ ಕಲುಷಿತ ಇತಿಹಾಸವನ್ನು ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ಮಾಯಾವತಿ ಕಟುವಾಗಿ ಟೀಕಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಅನಕ್ಷರತೆ, ಗ್ರಾಮೀಣ ಪ್ರದೇಶಗಳಿಂದ ಭೂಮಿರಹಿತ ಕಾರ್ಮಿಕರ ಬಲವಂತದ ವಲಸೆ, ಪರೀಕ್ಷಾ ಅಕ್ರಮಗಳು ಮತ್ತು ವಿವಿಧ ಹಂತಗಳ ಭ್ರಷ್ಟಾಚಾರಕ್ಕೂ ಚುನಾವಣಾ ವ್ಯವಸ್ಥೆಯ ಲೋಪಕ್ಕೂ ನಿಕಟ ಸಂಬಂಧವಿದೆ ಎಂದು ಆರೋಪಿಸಿದ ಮಾಯಾವತಿ, ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯು ಒಳಗಿನಿಂದ ಟೊಳ್ಳಾಗಲು ಮೂಲ ಕಾರಣ ಅಂದರೆ ನಂಬಿಕೆ ಕಳೆದುಕೊಂಡಿರುವ ಚುನಾವಣಾ ವ್ಯವಸ್ಥೆ ಎಂದು ಕಳವಳ ವ್ಯಕ್ತಪಡಿಸಿದರು.
ಇವಿಎಮ್ ವಿರೋಧಿ ಹೋರಾಟದಲ್ಲಿ ಜೆನ್-ಜೀ ಭಾಗವಹಿಸುವಿಕೆಯನ್ನು ಉಲ್ಲೇಖಿಸಿರುವ ಮಾಯಾವತಿ, ಯುವಜನರು ಈ ಸಮಸ್ಯೆಗೆ ಹೊಸ ದಿಕ್ಸೂಚಿ ನೀಡಿ, ಇದನ್ನೊಂದು ಪ್ರಮುಖ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಹಂತದಲ್ಲೂ ಈ ಧ್ವನಿಯನ್ನು ಹತೋಟಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಬೆಂಕಿಯನ್ನು ಬೆಂಕಿಯಿಂದಲೇ ನಂದಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಹಣಬಲ, ತೋಳ್ಬಲ, ಸರ್ಕಾರಿ ಯಂತ್ರದ ದುರ್ಬಳಕೆ ನಿರಂತರವಾಗಿ ಚುನಾವಣೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಬಡವರು, ಕಾರ್ಮಿಕರು ಮತ್ತು ಉದ್ಯೋಗಾಕಾಂಕ್ಷಿ ಯುವಕರ ಹಿತಾಸಕ್ತಿ ಕಾಪಾಡಲು ಸ್ವತಂತ್ರ ಮತ್ತು ವಿಶ್ವಾಸಾರ್ಹ ಮತದಾನ ವ್ಯವಸ್ಥೆ ಅತ್ಯಗತ್ಯ ಎಂದು ಅವರು ಒತ್ತು ನೀಡಿದರು.
ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಇವಿಎಮ್ ಪ್ರಕ್ರಿಯೆ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ಕಾರ್ಯಾಚರಣೆಯ ಶೈಲಿ ಕುರಿತು ಸರಣಿ ಆರೋಪಗಳನ್ನು ಮಾಡುತ್ತಿರುವ ಸಂದರ್ಭದಲ್ಲೇ ಮಾಯಾವತಿಯವರ ಈ ಪ್ರಕಟಣೆ ಹೊರಬಿದ್ದಿದೆ.
ಉತ್ತರ ಪ್ರದೇಶದ ಪೀಲಿಭೀತ್ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಂಡುಬಂದ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ತನಿಖೆ ಮತ್ತು ಕ್ರಮಕ್ಕೆ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಕಚೇರಿಯು ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋದ ಅರ್ಹ ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision-2027) ಅಡಿಯಲ್ಲಿ ಹೊಸ ನೋಂದಣಿ ಪ್ರಕ್ರಿಯೆಯನ್ನು ಘೋಷಿಸಿದೆ. ಈ ಎಲ್ಲಾ ಘಟನಾವಳಿಗಳ ಮಧ್ಯೆ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ಇವಿಎಮ್ ತೆಗೆದುಹಾಕಿ ಪಾರದರ್ಶಕ ಮತದಾನ ತರಬೇಕೆಂಬ ಬೇಡಿಕೆಯನ್ನು ಮಾಯಾವತಿ ಪುನರುಚ್ಛರಿಸಿದ್ದಾರೆ(ಏಜೆನ್ಸೀಸ್).