Abdul El-Sayed: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಅಲ್-ಸಯ್ಯದ್, ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ರನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಆಯ್ಕೆಯಾದ ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಜಯವನ್ನು ಅವರು ತಮ್ಮ ಪತ್ನಿ ಡಾ. ಸಾರಾ ಜುಕಕು ಅವರೊಂದಿಗೆ ಸಂಭ್ರಮಿಸಿದ್ದು, ಈ ಗೆಲುವಿನ ಬೆನ್ನಲ್ಲೇ ರಾಷ್ಟ್ರ ಮತ್ತು ರಾಜ್ಯದೊಂದಿಗಿನ ಅವರ ನಂಟು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಈ ಜಯದ ನಂತರ ಎಕ್ಸ್ನಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ, ಈಜಿಪ್ಟ್ ಮೂಲದ ವಲಸಿಗರ ಮಗನಾಗಿರುವ ಅಲ್-ಸಯ್ಯದ್ ಅವರು ತಮ್ಮ ಮದುವೆಗೆ ಸಂಬಂಧಿಸಿದ ತಮಾಷೆಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಮೀಟ್ ದಿ ರಿಯಲ್ ಅಬ್ದುಲ್ ಅಲ್-ಸಯ್ಯದ್ ಎಂಬ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಅವರು, ತಮ್ಮ ಪತ್ನಿಯನ್ನು ವಿವಾಹವಾದಾಗ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಬ್ದುಲ್ ಅಲ್-ಸಯ್ಯದ್, ನಾವು ಮದುವೆಯಾದಾಗ ಈಜಿಪ್ಟ್‌ನಿಂದ ಬಂದಿದ್ದ ನನ್ನ ಚಿಕ್ಕಪ್ಪ ನನ್ನ ಬಳಿ ಬಂದು, ಈಜಿಪ್ಟ್‌ನಲ್ಲಿ ಸುಮಾರು 8 ಕೋಟಿ (80 ಮಿಲಿಯನ್) ಜನರಿದ್ದಾರೆ, ನಿನಗೆ ಮದುವೆಯಾಗಲು ಭಾರತದ ಮಹಿಳೆಯೇ ಸಿಕ್ಕಿದ್ದಳೆ..? ಎಂದು ತಮಾಷೆಯಾಗಿ ಪ್ರಶ್ನಿಸಿದರು ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ್ದ ಅಲ್-ಸಯ್ಯದ್, ಚಿಕ್ಕಪ್ಪ, ಭಾರತದಲ್ಲಿ ಸುಮಾರು 100 ಕೋಟಿಗೂ (1 ಬಿಲಿಯನ್) ಹೆಚ್ಚು ಜನರಿದ್ದಾರೆ. ಹೀಗಾಗಿ ಸಂಖ್ಯಾಶಾಸ್ತ್ರೀಯವಾಗಿ ನೋಡಿದರೆ, ನಾನು ಭಾರತದ ಮಹಿಳೆಯನ್ನು ಮದುವೆಯಾಗುವ ಸಾಧ್ಯತೆಯೇ ಹೆಚ್ಚಾಗಿತ್ತು ಎಂದು ಹಾಸ್ಯಮಯವಾಗಿ ಉತ್ತರಿಸಿರುವುದು ವೈರಲ್ ವಿಡಿಯೋದಲ್ಲಿದೆ. ಸುಮಾರು ಎರಡು ದಶಕಗಳಿಂದ ಭಾರತೀಯ ಕುಟುಂಬದೊಂದಿಗೆ ನಂಟು ಹೊಂದಿರುವ ಅವರು, ತಮಾಷೆಯಾಗಿ ನಾನು ಅರಬ್ ಮೂಲದವನಿಗಿಂತ ಹೆಚ್ಚು ಭಾರತೀಯನಾಗಿಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.
ಅಬ್ದುಲ್ ಅಲ್-ಸಯ್ಯದ್ ಅವರ ಪತ್ನಿ ಡಾ. ಸಾರಾ ಜುಕಕು ಅವರ ಕುಟುಂಬ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಅಮೆರಿಕಕ್ಕೆ ವಲಸೆ ಹೋದ ಕುಟುಂಬವಾಗಿದೆ. 2006ರ ಮೇ ತಿಂಗಳಿನಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ (ಎಮ್ಮಲಿ ಮತ್ತು ಸೆರೀನ್).
ಸಾರಾ ಅವರ ಕುಟುಂಬಕ್ಕೆ ರಾಜ್ಯದ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವಿದೆ. ಸಾರಾ ಅವರ ತಾತ ಜುಕಕು ಶಂಸುದ್ದೀನ್ ಅವರು ಹಳೆಯ ಮೈಸೂರು ರಾಜ್ಯದ ಆಗಿನ ಮುಖ್ಯಮಂತ್ರಿ ಬಿ ಡಿ ಜತ್ತಿ ಅವರ ಸಚಿವ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಭಟ್ಕಳ ಪ್ರಾಂತ್ಯದ ಪ್ರಥಮ ವಕೀಲರೆಂದೂ ಅವರು ಗುರುತಿಸಿಕೊಂಡಿದ್ದರು. ಇನ್ನು ಸಾರಾ ಅವರ ತಂದೆ ಡಾ. ತಯ್ಯಬ್ ಜುಕಕು ಅವರು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ, ಬಳಿಕ ಅಮೆರಿಕದಲ್ಲಿ ನೆಫ್ರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚುನಾವಣಾ ಪ್ರಚಾರ ರ‍್ಯಾಲಿಯೊಂದರಲ್ಲಿ ಪತ್ನಿ ಸಾರಾ ಕೂಡ ತಮ್ಮಿಬ್ಬರ ಬಾಂಧವ್ಯದ ಬಗ್ಗೆ ತಮಾಷೆಯಾಗಿ, ನನ್ನನ್ನು ಬಿಟ್ಟು ಬೇರಾರೂ ಅವರಿಗೆ ಏನು ಮಾಡಬೇಕೆಂದು ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು. ಪ್ರಸ್ತುತ ಅಬ್ದುಲ್ ಅಲ್-ಸಯ್ಯದ್ ಅವರ ಈ ಐತಿಹಾಸಿಕ ಜಯ ಮತ್ತು ಅವರ ಭಾರತದ ನಂಟು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚಾ ವಿಷಯವಾಗಿದೆ(ಏಜೆನ್ಸೀಸ್).