ಗೋವಾ ಕ್ಲಬ್​​ನಲ್ಲಿ ಭೀಕರ ಅಗ್ನಿ ಅವಘಡ; ಪ್ರವಾಸಿಗರು ಸೇರಿ 23 ಮಂದಿ ಸಜೀವ ದಹನ | Massive fire

ಘಟನೆಯ ಸ್ಥಳ
ಘಟನೆಯ ಸ್ಥಳ
Published on
Massive fire: ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್‌ನ ಜನಪ್ರಿಯ ನೈಟ್‌ಕ್ಲಬ್ ಬಿರ್ಚ್‌ನಲ್ಲಿ ನಿನ್ನೆ(ಡಿ. 06) ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಪ್ರವಾಸಿಗರು ಸೇರಿ 23 ಜನರು ಸಜೀವ ದಹನರಾಗಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯರಾತ್ರಿ 1 ಗಂಟೆಗೆ ಈ ದುರಂತ ನಡೆದಿದೆ. ಮೃತರಲ್ಲಿ ನಾಲ್ವರು ಪ್ರವಾಸಿರು ಸೇರಿ 19 ಮಂದಿ ಕ್ಲಬ್​ನ ಸಿಬ್ಬಂದಿ ಸೇರಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಅಡುಗೆ ಮನೆಯ ಬಳಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಗೋವಾ ಡಿಜಿಪಿ ಇದನ್ನು ತಳ್ಳಿ ಹಾಕಿದ್ದು, ತಪಾಸಣೆ ಸಮಯದಲ್ಲಿ ಸಿಲಿಂಡರ್​ಗಳು ಹಾಗೆಯೇ ಇವೆ ಎಂದು ಹೇಳಿದ್ದಾರೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರ ಸಂಖ್ಯೆ ಮತ್ತು ಸ್ಥಿತಿಯ ಕುರಿತು ಅಧಿಕೃತ ವಿವರಗಳು ಇನ್ನೂ ಲಭ್ಯವಿಲ್ಲ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅಧಿಕಾರಿಗಳು ಬಲಿಪಶುಗಳನ್ನು ಗುರುತಿಸಲು ಮತ್ತು ಕುಟುಂಬಗಳಿಗೆ ತಿಳಿಸಲು ಕೆಲಸ ಮಾಡುತ್ತಿದ್ದಾರೆ. 5 ತಾಸುಗಳ ಕಾಲ ನಿರಂತರ ಪ್ರಯತ್ನದಿಂದ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿದೆ ಎನ್ನಲಾಗಿದೆ.
ಕ್ಲಬ್‌ನ ಸುರಕ್ಷತಾ ಕ್ರಮಗಳು, ಗ್ಯಾಸ್ ಸಂಪರ್ಕ ವ್ಯವಸ್ಥೆಗಳು ಹಾಗೂ ಅದರ ತುರ್ತು ನಿರ್ಗಮನ ಯೋಜನೆಯನ್ನು ಸಹ ಪರಿಶೀಲಿಸುವ ಮೂಲಕ ಯಾವುದೇ ಉಲ್ಲಂಘನೆಗಳಾಗಿವೆಯೇ ಎಂದು ಪರಿಶೀಲಿಸಲಾಗ್ತಿದೆ ಎಂದು ಗೋವಾ ಡಿಜಿಪಿ ತಿಳಿಸಿದ್ದಾರೆ
ಸದ್ಯಕ್ಕೆ ನೈಟ್‌ಕ್ಲಬ್ ಅನ್ನು ಸೀಲ್ ಮಾಡಲಾಗಿದ್ದು, ಮಾಲೀಕರು ಮತ್ತು ಆಡಳಿತ ಮಂಡಳಿಯ ವಿಚಾರಣೆ ನಡೆಯುತ್ತಿದೆ. ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿರಲಿಲ್ಲ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net